More

    ಸೂರಿಲ್ಲದೆ ಗೋಳಾಡುತ್ತಿದ್ದಾರೆ ನೆರೆ ಸಂತ್ರಸ್ತರು

    ಸುಭಾಸ ಧೂಪದಹೊಂಡ ಕಾರವಾರ

    ನೆರೆಯಿಂದಾಗಿ ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಕರೊನಾ ನೆಪದಿಂದ ಪರಿಹಾರ ಮರೀಚಿಕೆಯಾಗಿದೆ. ಇನ್ನೊಂದು ವಾರದಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಜನ ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿದ್ದಾರೆ.

    ಕಳೆದ ವರ್ಷ ನೆರೆಯ ಸಂದರ್ಭದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ನೆಲಘಟ್ಟು ಹಾಕಿಕೊಂಡು ಸಾಮಗ್ರಿಗಳನ್ನು ತಂದಿಟ್ಟುಕೊಂಡು ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಗ್ರಾಪಂ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿನ ವಿಳಂಬದಿಂದ ಎರಡನೇ ಹಂತದ ಹಣವೇ ಬಿಡುಗಡೆಯಾಗಿಲ್ಲ. ಜನ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಬ್ಯಾಂಕ್ ಪಾಸ್​ಬುಕ್ ಪರಿಶೀಲಿಸಿ ಸೋತಿದ್ದಾರೆ.

    ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ (ಎ ಕೆಟಗರಿ) ತಲಾ 5 ಲಕ್ಷ ರೂ., ಮನೆಗೆ ಶೇ. 25ರಿಂದ ಶೇ. 75ರಷ್ಟು ಹಾನಿಯಾಗಿದ್ದಲ್ಲಿ (ಬಿ ಕೆಟಗರಿ) ಮನೆಗಳ ಮರು ನಿರ್ಮಾಣ ಮಾಡುವುದಿದ್ದಲ್ಲಿ ತಲಾ 5 ಲಕ್ಷ ರೂ, ರಿಪೇರಿ ಮಾಡುವುದಿದ್ದಲ್ಲಿ 3 ಲಕ್ಷ ರೂ., ಮನೆಗಳಿಗೆ ಶೇ. 25 ಕ್ಕಿಂತ ಕಡಿಮೆ ಹಾನಿಯಾಗಿದ್ದಲ್ಲಿ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೊಷಿಸಿತ್ತು. ಎ ಮತ್ತು ಬಿ ಕೆಟಗರಿ ಮನೆಗಳಿಗೆ ತಲಾ 1 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಇದುವರೆಗೆ ಶೇ. 90ರಷ್ಟು ಜನ ತಳಪಾಯ ಹಾಕಿದ್ದಾರೆ. ಆದರೆ, ಇದೀಗ ಕರೊನಾ ನೆಪದ ಕಾರಣದಿಂದ ಅಧಿಕಾರಿಗಳು ಕೈಗೇ ಸಿಗುತ್ತಿಲ್ಲ. ಕೆಲವೆಡೆ ಪಿಡಿಒಗಳು ಜಿಪಿಎಸ್ ಮಾಡಲು ವಿಳಂಬ ಮಾಡುತ್ತಿದ್ದಾರೆ. ಇನ್ನೂ ಕೆಲವೆಡೆ ಜಿಪಿಎಸ್ ಆದ ನಂತರ ತಹಸೀಲ್ದಾರ್ ಕಚೇರಿಯಲ್ಲಿ ಅನುಮೋದನೆಗೆ ವಿಳಂಬವಾಗುತ್ತಿದೆ.

    ಎಷ್ಟು ಮನೆಗಳು?: ಜಿಲ್ಲೆಯಲ್ಲಿ ಒಟ್ಟು 3,127 ಮನೆಗಳ ಮಾಲೀಕರು ಸಂತ್ರಸ್ತರು ಎಂದು ಜಿಲ್ಲಾಧಿಕಾರಿ ಪರಿಗಣಿಸಿದ್ದರು. ಅವರಿಗೆ ಮೊದಲ ಹಂತದ ಹಣ ಬಿಡುಗಡೆಯಾಗಿತ್ತು. ಇದರಲ್ಲಿ 565 ಮನೆಗಳನ್ನು ಮಾತ್ರ ತಳಪಾಯದ ಜಿಪಿಎಸ್ ಮಾಡಿ ಹಣ ಬಿಡುಗಡೆ ಮಾಡಲಾಗಿದೆ. ಇನ್ನು 296 ಮನೆಗಳಿಗೆ ಗೋಡೆ ನಿರ್ವಣವಾದ ಬಗ್ಗೆ ಜಿಪಿಎಸ್ ಮಾಡಲಾಗಿದೆ. 91 ಮನೆಗಳು ಮಾತ್ರ ಛಾವಣಿವರೆಗೆ ನಿರ್ವಣವಾಗಿವೆ. 64 ಮನೆಗಳು ಪೂರ್ಣವಾಗಿವೆ ಎಂದು ದಾಖಲೆಗಳು ಹೇಳುತ್ತವೆ.

    ನಾವು ನೆಲಘಟ್ಟು ಹಾಕಿ ಸಾಕಷ್ಟು ದಿನ ಕಳೆದಿದೆ. ತಹಸೀಲ್ದಾರ್ ಕಚೇರಿಯಲ್ಲಿ ಅಪ್ರೂವಲ್ ಆಗಿಲ್ಲ ಎಂದು ಹೇಳುತ್ತಿದ್ದಾರೆ. ತಹಸೀಲ್ದಾರ್ ಕಚೇರಿಗೆ ಮನವಿಯನ್ನೂ ಕೊಟ್ಟಾಯಿತು. ಆದರೂ ಹಣ ಬಿಡುಗಡೆಯಾಗಿಲ್ಲ. ಸಾಮಗ್ರಿ ತಂದಿಟ್ಟು ಕಾಯುತ್ತಿದ್ದೇವೆ. ಇನ್ನೊಂದೇ ವಾರದಲ್ಲಿ ಮಳೆ ಬರ್ತದೆ. ಮರಳು, ಕಲ್ಲು ಹಾಳಾಗುತ್ತದೆ. ದಯಮಾಡಿ ಹಣ ಕೊಡಿಸಿ. | ಕನ್ನಾ ರಾಮಾ ನಾಯ್ಕ ನೆರೆ ಸಂತ್ರಸ್ತ, ಹುಕ್ಕಳಿ

    ನೆರೆಯಲ್ಲಿ ಮನೆ ಕಳೆದುಕೊಂಡವರಿಗೆ ಹಣ ಬಿಡುಗಡೆ ಹಾಗೂ ಸಾಮಗ್ರಿ ಪೂರೈಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. | ಡಾ. ಹರೀಶ ಕುಮಾರ ಕೆ. ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts