More

    ಸುಭದ್ರ ಸಮಾಜಕ್ಕೆ ಆದರ್ಶಗಳೇ ದಾರಿದೀಪ -ರಂಭಾಪುರಿ ಜಗದ್ಗುರುಗಳ ಅಭಿಮತ -ಧರ್ಮ ಸಮಾವೇಶದ ಸಮಾರೋಪ

    ದಾವಣಗೆರೆ: ಸಮಾಜದ ಲೋಪಗಳನ್ನು ತಿದ್ದಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯವಾಗಿದೆ. ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಸುಭದ್ರ ಸಮಾಜ ಕಟ್ಟಲು ಆದರ್ಶಗಳೇ ದಾರಿದೀಪ ಎಂದು ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
    ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯಿಂದ ನಗರದ ಅಭಿನವ ರೇಣುಕ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡ ಜನಜಾಗೃತಿ ಧರ್ಮ ಸಮಾವೇಶದ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಸಂವೇದನಾಶೀಲ ಜೀವನಕ್ಕೆ ವೀರಶೈವ ಧರ್ಮ ಕೊಟ್ಟ ಕೊಡುಗೆ ಅಮೋಘವಾದುದು ಎಂದು ಹೇಳಿದರು.
    ಪಂಚಾಚಾರ್ಯರು ವೀರಶೈವ ಧರ್ಮ ಮರದ ಬೇರು. ಶಿವಶರಣರು ಅದರಲ್ಲಿನ ಹೂ ಹಣ್ಣುಗಳು ಆಗಿದ್ದಾರೆ. ಸಮನ್ವಯ ಚಿಂತನಗಳಿಂದ ಸಮಾಜ ಸುಭದ್ರಗೊಳ್ಳಬೇಕಾಗಿದೆ ಎಂದು ಆಶಿಸಿದರು.
    ನೀರಿಲ್ಲದ ನದಿ, ಅತಿಥಿಯಿಲ್ಲದ ಮನೆ, ಫಲವಿಲ್ಲದ ವೃಕ್ಷ ವ್ಯರ್ಥ ಅದರಂತೆಯೇ ಜೀವನದಲ್ಲಿ ಗುರು-ಗುರಿ ಇಲ್ಲದಿದ್ದರೆ ಬಾಳು ನಿರರ್ಥಕ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ಸಂವಿಧಾನದಲ್ಲಿ ನಿರೂಪಿಸಿದ್ದಾರೆ ಎಂದ ಶ್ರೀಗಳು, ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಪ್ರವೇಶ ಒಳ್ಳೆಯದಲ್ಲ ಎಂದು ಎಚ್ಚರಿಸಿದರು.
    ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ ರಂಭಾಪುರಿ ಶ್ರೀಗಳು ವೀರಶೈವ ಸಮಾಜ ಉನ್ನತಿಗಾಗಿ ಜನರಲ್ಲಿ ಉತ್ತೇಜನ ನೀಡುತ್ತ ಬಂದಿದ್ದಾರೆ. ಇಷ್ಟಲಿಂಗ ಪೂಜೆಯ ಸಂಸ್ಕಾರ ಬೆಳೆಸುತ್ತಿದ್ದಾರೆ ಎಂದು ಹೇಳಿದರು.
    ಶಿಕ್ಷಣ ಸೇವಾ ಧುರೀಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಶೈಲ ಎಜುಕೇಷನ್ ಟ್ರಸ್ಟ್ ನ ನಿರ್ದೇಶಕ ಜಿ.ಎಸ್.ಅನಿತ್ ಕುಮಾರ್, ವೀರಶೈವ ಸಮಾಜ ಒಂದು ಎಂಬ ಮನೋಭಾವ ಎಲ್ಲರಲ್ಲೂ ಬೇಕು. ಇಂದಿನ ಪೀಳಿಗೆಗೆ ಧರ್ಮ- ಪೂಜೆ ಪುನಸ್ಕಾರಗಳಲ್ಲಿ ಆಸಕ್ತಿ ಹೆಚ್ಚಬೇಕು ಎಂದು ಆಶಿಸಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ವೀರಶೈವ ಲಿಂಗಾಯತ ಒಂದು ಜಾಗೃತ ಸಮಾಜ. ಕೆಲವರು ರಾಜಕೀಯ ಲಾಭಕ್ಕಾಗಿ ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಯಾರೂ ಧೃತಿಗೆಡಬೇಕಿಲ್ಲ ಎಂದರು.
    ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಖಾದಿ-ಖಾಕಿ ಮತ್ತು ಖಾವಿಧಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.
    ನೇತೃತ್ವ ವಹಿಸಿದ್ದ ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಜಿಡ್ಡುಗಟ್ಟಿದ ಭಾವನೆಗಳನ್ನು ಕಳೆದು ಸಾತ್ವಿಕ ನೆಲೆಗಟ್ಟು ಹಾಗೂ ಆಧ್ಯಾತ್ಮ ತತ್ವಗಳ ಮೂಲಕ ಸಾಮರಸ್ಯ ಸದ್ಭಾವನೆಗಳನ್ನು ಬೆಳೆಸುವುದೇ ಗುರುಪೀಠಗಳ ಗುರಿಯಾಗಿದೆ ಎಂದು ತಿಳಿಸಿದರು.
    ಕುವೆಂಪು ವಿವಿಯ ಗೌರವ ಡಾಕ್ಟರೇಟ್ ಪಡೆದ ಗದಗಿನ ಡಾ. ಗುರುಸ್ವಾಮಿ ಕಲಕೇರಿ ಅವರಿಗೆ ‘ಸ್ವರ ಸಾಹಿತ್ಯ ಸಂಜೀವಿನಿ’
    ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಲಿಂಗದಹಳ್ಳಿಯ ಶ್ರೀಗಳು, ವೀರಶೈವ ಮಹಾಸಭಾದ ನಗರಾಧ್ಯಕ್ಷ ಜಿ.ಶಿವಯೋಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಅಂದನೂರು ಮುಪ್ಪಣ್ಣ, ಡಿ.ಎಂ.ಹಾಲಸ್ವಾಮಿ, ಐಗೂರು ಚಂದ್ರಶೇಖರ, ದೇವರಮನೆ ಶಿವಕುಮಾರ್ ಇದ್ದರು. ಟಿ.ಜಿ.ಸುರೇಶ ಸ್ವಾಗತಿಸಿದರು. ಶುಭ ಐನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts