More

    ಸುನೀಲಗೌಡ್ರ ಸಮಾರಂಭಕ್ಕೆ ಹೋಗಬೇಡಿ….! ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್, ಮೇಲಿನಿಂದ ಸಂದೇಶ ಕೊಟ್ಟವರಾರು?

    ಇಂಡಿ: ಸುನೀಲಗೌಡ ಪಾಟೀಲ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು ಪಾಲ್ಗೊಳ್ಳಬಾರದು….ಹಾಗಂತ ಮೇಲಿನಿಂದ ಸಂದೇಶ ಬಂದಿದೆ, ಈ ಸಂದೇಶ ನಂಬಿಕಸ್ಥರಿಗೆ ಮಾತ್ರ ರವಾನಿಸಿ….!
    ಇದು ಇಂಡಿ ವಿಧಾನ ಸಭೆ ಕ್ಷೇತ್ರದಲ್ಲಿ ಕಳೆದೆರಡು ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರು ಗ್ರಾಪಂ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಸಂದೇಶ.
    ಸೆ.11 ರಂದು ಇಂಡಿಯಲ್ಲಿ ಸುನೀಲಗೌಡ ಪಾಟೀಲರು ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದರು. ಇದರ ಹಿಂದಿನ ದಿನವೇ ಕೆಲವು ಗ್ರಾಪಂ ಸದಸ್ಯರಿಗೆ ವ್ಯಾಟ್ಸಪ್ ಮೂಲಕ ಮತ್ತು ನೇರವಾಗಿ ಕರೆ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಸಂದೇಶ ರವಾನಿಸಲಾಗಿದೆ. ಇದರ ಆಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಾಂಗ್ರೆಸ್‌ನಲ್ಲಿ ಎಲ್ಲರೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿಸಿದೆ.
    ಆಡಿಯೋದಲ್ಲಿ ಏನಿದೆ?
    ಸುನೀಲಗೌಡ ಪಾಟೀಲರು ಇಂಡಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಯಾರೂ ಹೋಗಬಾರದು. ಹಾಗಂತ ಮೇಲಿನಿಂದ ಸಂದೇಶ ಬಂದಿದೆ ಎಂಬ ಒಂದು ಆಡಿಯೋ ಚಿಕ್ಕದಾಗಿದ್ದರೂ ಸಂದೇಶ ಸ್ಪಷ್ಟವಾಗಿದೆ. ಇನ್ನೊಂದರಲ್ಲಿ ನೇರವಾಗಿ ಸದಸ್ಯರಿಗೆ ಕರೆ ಮಾಡಿದ್ದು, ತಾವು ಅಷ್ಟೇ ಅಲ್ಲದೇ ಎಲ್ಲ ಸದಸ್ಯರಿಗೂ ಭಾಗಿಯಾಗಂತೆ ತಿಳಿಸಿ ಎಂದರು. ಬರಗುಡಿ, ಲೋಣಿಗೂ ಹೇಳಿದ್ದೀರಲ್ಲ ಎಂದು ಕರೆ ಮಾಡಿದಾತ ಪ್ರಶ್ನಿಸಲಾಗಿ ಕರೆ ಸ್ವೀಕರಿಸಿದಾತ ಎಲ್ಲರಿಗೂ ಹೇಳಿದ್ದೇನೆ, ಆದರೆ ಯಾರ ಹೆಸರು ಹೇಳಲಿ? ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಕರೆ ಮಾಡಿದಾತ ನನ್ನ ಹೆಸರು ಹೇಳಿ, ಇಲ್ಲವೇ ಶಾಸಕರ ಹೆಸರು ಹೇಳಿ ಪರವಾಗಿಲ್ಲ ಎಂದಿದ್ದಾನೆ. ಮುಂದುವರಿದು ಆತ ಕೆಲವರು ಶಾಲು, ಹೂವಿನ ಹಾರದ ಆಸೆಗೆ ಹೋಗುವವರಿದ್ದಾರೆ, ಸಂಪೂರ್ಣ ವಿಳಾಸ, ಕಾರ್ಯಕ್ರಮ ವಿವರ ತಿಳಿಸಿ ಎನ್ನುವುದರ ಜೊತೆಗೆ ಮತ್ತಿತರರ ರಾಜಕೀಯ ಮಾತುಕತೆಗಳಾಗಿವೆ.
    ದೊಡ್ಡವರ ಜಗಳ ಸಣ್ಣವರಿಗೆ ಕುತ್ತು?
    ಅವಿಭಜಿತ ವಿಜಯಪುರ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಒಟ್ಟಾಗಿ ವಿಧಾನ ಪರಿಷತ್‌ಗೆ ಪ್ರಚಾರ ನಡೆಸಿ ಸುನೀಲಗೌಡ ಪಾಟೀಲರ ಆಯ್ಕೆ ಮಾಡಿದ್ದವರೇ ಇಂದು ದ್ವೇಷದ ರಾಜಕಾರಣಕ್ಕೆ ಮುನ್ನುಡಿ ಬರೆಯಲು ಕಾರಣವೇನು? ದೊಡ್ಡವರ ಜಗಳ ಸಣ್ಣವರಿಗೆ ಆಪತ್ತು ತರುವುದೇ? ಎಂಬ ಅನುಮಾನ ಆಡಿಯೋದಿಂದ ಮೂಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಶಾಸಕ ಎಂ.ಬಿ. ಪಾಟೀಲ ಹಾಗೂ ಯಶವಂತರಾಗೌಡ ಪಾಟೀಲ ಪರಸ್ಪರ ಶೀಥಲ ಸಮರಕ್ಕೆ ಇಳಿದಿದ್ದರು. ಮುಂದಿನ ಚುನಾವಣೆಗೆ ಬಹಿರಂಗವಾಗಿ ರಣಕಹಳೆ ಮೊಳಗಿಸಿದ್ದರು. ಇದೀಗ ವಿಧಾನ ಪರಿಷತ್ ಚುನಾವಣೆ ಅಧಿಸೂಚನೆಗೆ ಮುನ್ನವೇ ಆ ತಿಕ್ಕಾಟ ಶುರುವಾಯಿತೇ? ಎಂಬ ಗುಮಾನಿ ಶುರುವಾಗಿದೆ.
    ಶಾಸಕರು ಗೈರು:
    ಇಂಡಿ ವಿಧಾನ ಸಭೆ ಕ್ಷೇತ್ರದ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭ ನಿಗದಿಯಾಗಿ ಎರಡು ಬಾರಿ ರದ್ದಾಗಿತ್ತು. ಒಮ್ಮೆ ಕರೊನಾ ಹಿನ್ನೆಲೆ ರದ್ದಾದರೆ ಮತ್ತೊಮ್ಮೆ ಗಡಿಭಾಗದಲ್ಲಿ ಕಟ್ಟು ನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದ ಹಿನ್ನೆಲೆ ಸಮಾರಂಭ ರದ್ದುಗೊಳಿಸಲಾಗಿತ್ತು. ಮೂರನೇ ಬಾರಿಗೆ ಕಾರ್ಯಕ್ರಮ ನೆರವೇರಿತಾದರೂ ಆ ಭಾಗದ ಶಾಸಕರು ಹಾಗೂ ಪ್ರಮುಖರು ಭಾಗಿಯಾಗಿರಲಿಲ್ಲ. ಕಾರ್ಯಕ್ರಮಕ್ಕೆ ಹಾಜರಾಗದಂತೆ ಆಡಿಯೋ ತುಣುಕು ಹರಿದಾಡಿದರೂ ಸಾಕಷ್ಟು ಸದಸ್ಯರು ಭಾಗಿಯಾಗಿದ್ದು ಕಂಡು ಬಂತು. ಶಾಸಕರು ಇಲ್ಲದೇ ಕಾರ್ಯಕ್ರಮ ನಡೆದಿದ್ದು ಕೂಡ ಚರ್ಚೆಗೆ ಕಾರಣವಾಗಿದೆ. ಇದಕ್ಕೂ ಮುನ್ನವೇ ಮೆಗಾ ಮಾರುಕಟ್ಟೆ ಉದ್ಘಾಟನೆಗೆ ವಿಪ ಸದಸ್ಯ ಎಸ್.ಆರ್.ಪಾಟೀಲ ಭಾಗಿಯಾಗಿದ್ದು ಸುನೀಲಗೌಡರು ಗೈರಾಗಿದ್ದು ಸಹ ಚರ್ಚೆಯ ವಿಷಯವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts