More

    ಸಿರಿಧಾನ್ಯಗಳಲ್ಲಿ ಪೋಷಕಾಂಶ ಅಧಿಕ


    ಯಾದಗಿರಿ: ಸಿರಿಧಾನ್ಯಗಳೇ ಸೂಪರ್ ಫುಡ್ ಗಳಾಗಿದ್ದು, ಸರಕಾರದ ಪ್ರೇರಣೆಯಿಂದ ಕೇವಲ ದೇಶ ಮಾತ್ರವಲ್ಲ ವಿಶ್ವದಾದ್ಯಂತ ಇವುಗಳಿಗೆ ಭಾರಿ ಬೇಡಿಕೆಯಿದೆ ಎಂದು ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ್ ಅಭಿಪ್ರಾಯಪಟ್ಟರು.


    ಬುಧವಾರ ಇಲ್ಲಿಗೆ ಸಮೀಪದ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಹಾಗೂ ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳ ಲಾಭವೇ ಹೆಚ್ಚಾಗಿದೆ. ಇತರ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯ ಬೆಳೆಗಳಿಗೆ ಕಡಿಮೆ ನೀರು ಸಾಕು. ಕೀಟ ಬಾಧೆ ಮತ್ತು ಹವಾಮಾನ ವೈಪರೀತ್ಯದ ಸವಾಲನ್ನೂ ಎದುರಿಸುವ ಸಾಮಥ್ರ್ಯವನ್ನು ಈ ಧಾನ್ಯಗಳ ಸಸಿಗಳು ಹೊಂದಿವೆ. ಇವು ಇತರ ಬೆಳೆಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿವೆ ಎಂದರು.

    ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಮಾತನಾಡಿ, ನಮ್ಮ ಹಿರಿಯರು ಸಾಂಪ್ರದಾಯಿಕ ಬರಗು, ನವಣೆ, ಸಾವೆ, ಹಾರಕ, ಸಾಮೆ, ರಾಗಿ, ಸಜ್ಜೆ ಮತ್ತು ಜೋಳ ಸೇರಿ ಇನ್ನಿತರ ಸಿರಿಧಾನ್ಯಗಳನ್ನು ಬೆಳೆದು ಸೇವಿಸಿದ ಪರಿಣಾಮ ಅವರ ಆರೋಗ್ಯ ಮತ್ತು ಆಯುಷ್ಯ ಉನ್ನತ ಮಟ್ಟದಲ್ಲಿತ್ತು. ನಮಗೆ ನಿಜವಾದ ಆಸ್ತಿಯೇ ಉತ್ತಮವಾದ ಆರೋಗ್ಯ. ಉತ್ತಮವಾದ ಔಷಧಗಳೇ ಅಡುಗೆ ಮನೆಯ ಸಿರಿಧಾನ್ಯಗಳಾಗಿವೆ ಎಂದು ಹೇಳಿದರು.

    ಆಧುನಿಕ ಯುಗದಲ್ಲಿ ಮುಂದಿನ ಪೀಳಿಗೆ ಉತ್ತಮ ಆರೋಗ್ಯವೇ ನಮ್ಮ ಆಸ್ತಿ ಎಂಬ ಮನೋಭಾವ ಇಟ್ಟುಕೊಂಡು ಆಹಾರ ಸೇವನೆ ಮಾಡಬೇಕಿದೆ. ಆ ಉದ್ದೇಶದಿಂದ ನಮ್ಮ ನಡೆ ಸಿರಿಧಾನ್ಯಗಳ ಕಡೆ ಎಂಬ ಘೋಷಣೆಯೊಂದಿಗೆ ಸಿರಿಧಾನ್ಯಗಳ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.
    ಜಿಪಂ ಸಿಇಒ ಗರೀಮಾ ಪನ್ವಾರ್, ಪ್ರಸ್ತುತ ದಿನಗಳಲ್ಲಿ ಧಾನ್ಯಗಳ ಮಹತ್ವ ಅರಿಯದೆ ಹತ್ತಾರು ಬಗೆಯ ಆಹಾರ ಸೇವಿಸಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತ ಹಲವು ಬಗೆಯ ಸಮಸ್ಯೆಗಳಿಗೆ ಜನರು ಸಿಲುಕುತ್ತಿದ್ದಾರೆ. ಈ ವಿಷಯವನ್ನರಿತು ಕೃಷಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಿರಿಧಾನ್ಯಗಳಿಂದ ತಯಾರಿಸಿದ ಹತ್ತಾರು ಬಗೆಯ ಖಾದ್ಯ, ತಿನಿಸುಗಳನ್ನು ಹಾಗೂ ತಾಂತ್ರಿಕತೆ ಬಳಸಿ ವಿವಿಧ ರೂಪಗಳಲ್ಲಿ ಬದಲಾಯಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts