More

    ಸಿಬಿಐಗೆ ನೆರವಾದ ಡಿಜಿಟಲ್ ಸಾಕ್ಷ್ಯ

    ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಡಿಜಿಟಲ್ ಸಾಕ್ಷ್ಯ ನೀಡಿದ ಸುಳಿವಿನಿಂದ ಸಿಬಿಐ ಅಧಿಕಾರಿಗಳು ಪ್ರಕರಣದ ಹಿಂದಿನ ರಹಸ್ಯ ಪತ್ತೆ ಹಚ್ಚಿದ್ದಾರೆ. ಈ ಸಾಕ್ಷ್ಯವೇ ಈಗ ಆರೋಪಿಗಳ ವಿಚಾರಣೆಗೆ ಪ್ರಮುಖವಾಗಿದೆ.

    ಯೋಗೀಶ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸಿಬಿಐ ಸಾಕಷ್ಟು ಡಿಜಿಟಲ್ ಸಾಕ್ಷ್ಯ ಸಂಗ್ರಹಿಸಿದೆ. 2016ರ ಜೂನ್15ರಂದು ಧಾರವಾಡದ ಸಪ್ತಾಪುರದ ಜಿಮ್ಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ಆರಂಭದಲ್ಲಿ ರಿಯಲ್ ಎಸ್ಟೇಟ್ ವಿಚಾರಕ್ಕೆ ಹತ್ಯೆ ಮಾಡಲಾಗಿದೆ ಎಂದೇ ಬಿಂಬಿಸಲಾಗಿತ್ತು. ಸಿಬಿಐ ಅಧಿಕಾರಿಗಳು ಕೃತ್ಯ ನಡೆದ ಆಸು-ಪಾಸಿನಲ್ಲಿದ್ದ ಸಿಸಿ ಕ್ಯಾಮರಾ, ಆರೋಪಿಗಳ ಕರೆಗಳ ಬಗ್ಗೆ ಇಂಚಿಚೂ ಮಾಹಿತಿ ಕಲೆ ಹಾಕಿದಾಗ ಕೊಲೆಯ ಹಿಂದೆ ಇನ್ನಷ್ಟು ಜನರ ಪಾತ್ರ ಇರುವುದು ಕಂಡು ಬಂದಿತ್ತು. ಡಿಜಿಟಲ್ ಸಾಕ್ಷ್ಯದ ಆಧಾರದ ಮೇಲೆ ಮತ್ತೆ 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇದು ರಾಜಕೀಯ ಪ್ರೇರಿತವಾಗಿ ನಡೆದ ಕೊಲೆ ಎಂಬುದು ಸ್ಪಷ್ಟವಾಗಿತ್ತು. ಆಗ ಕೃತ್ಯದ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರು ಶಾಮೀಲಾಗಿರುವುದು ಕಂಡು ಬಂದಿತ್ತು. ಆದರೆ, ಇದಕ್ಕೆ ಸಂಬಂಧಿಸಿದ ಸಂಪೂರ್ಣ ಸಾಕ್ಷ್ಯ ಕಲೆ ಹಾಕಲು ಸಿಬಿಐಗೆ ಸತತ 1 ವರ್ಷಗಳೇ ಬೇಕಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

    ಎರಡು ಬಾರಿ ವಿಫಲ: ಜೂನ್ ಮೊದಲ ವಾರ ಯೋಗೀಶ ಗೌಡನನ್ನು ಹಿಂಬಾಲಿಸಿ ಕೊಲೆಗೆ ಯತ್ನ ನಡೆಸಲಾಗಿತ್ತು. ನಂತರ ದಿನೇಶ್ ಸೇರಿ 6 ಮಂದಿ ಆರೋಪಿಗಳು ವಿಕ್ರಂ ಬಳ್ಳಾರಿ ಮತ್ತು ಸಂದೀಪ್ ಜತೆ ಟವೇರಾ ವಾಹನದಲ್ಲಿ ದಾಂಡೇಲಿಗೆ ಹೋಗಿ ಹಾರ್ನ್​ಬಿಲ್ ರೆಸಾರ್ಟ್ ನಲ್ಲಿ ತಂಗಿದ್ದರು. ಬಸವರಾಜ ಮುತ್ತಗಿ ಧಾರವಾಡದ ಅಂಕಿತ ರೆಸಿಡೆನ್ಸಿಯಲ್ಲಿ ರೂಂ ಬುಕ್ ಮಾಡಿ ಆರೋಪಿಗಳನ್ನು ಅಲ್ಲಿಗೆ ಕರೆಸಿದ್ದ. ಜೂನ್ 12ರಂದು ಎರಡನೇ ಬಾರಿ ಯೋಗೀಶಗೌಡನನ್ನು ಹತ್ಯೆ ನಡೆಸಲು ಸಂಚು ರೂಪಿಸಿದ್ದರು. ಅದೂ ವಿಫಲವಾಗಿತ್ತು ಎಂಬುದು ಸಿಬಿಐ ತನಿಖೆಯಲ್ಲಿ ಬಹಿರಂಗಗೊಂಡಿದೆ.

    ಪುರಾವೆ ಹಿನ್ನೆಲೆಯಲ್ಲಿ ವಿಚಾರಣೆ: ಧಾರವಾಡದ ನಿವಾಸಿ ಪ್ರಕರಣದ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಕೆಲ ವರ್ಷಗಳಿಂದ ಆಪ್ತನಾಗಿದ್ದ. ಅವರ ಶಿಷ್ಯನಂತಿದ್ದ ಈತನೇ ಹತ್ಯೆಯ ಸೂತ್ರದಾರನಾಗಿದ್ದಾನೆ. ಪ್ರಕರಣದಲ್ಲಿ ವಿನಯ ಕುಲಕರ್ಣಿ ಪಾತ್ರವಿರುವ ಬಗ್ಗೆ ಸಾಕ್ಷ್ಯ ಸಿಕ್ಕಿದ ನಂತರವೇ ಸಿಬಿಐ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎನ್ನಲಾಗಿದೆ. ವಿನಯ ಕುಲಕರ್ಣಿ ಆಪ್ತ ಬಸವರಾಜ ಮುತ್ತಗಿ 2016 ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ಹಲವಾರು ಬಾರಿ ಬೆಂಗಳೂರಿಗೆ ಬಂದು ದಿನೇಶ ಮತ್ತು ಅಶ್ವತ್ಥನನ್ನು ಭೇಟಿಯಾಗಿ ಯೋಗೀಶ ಗೌಡ ಕೊಲೆ ಮಾಡುವ ಬಗ್ಗೆ ರ್ಚಚಿಸಿದ್ದ. ದಿನೇಶ ಹಾಗೂ ಅಶ್ವತ್ಥ ತಮ್ಮ ಸಹಚರರಾದ ಸುನೀಲ, ನೂತನ, ನಜೀರ್ ಅಹಮದ್, ಶಾನ್ವಾಜ್​ನ ನೆರವು ಕೋರಿ ಧಾರವಾಡಕ್ಕೆ ಕರೆ ತಂದಿದ್ದರು. ಧಾರವಾಡದ ಸಾರಸ್ವತಪುರದಲ್ಲಿ ಆರೋಪಿ ವಿನಯ ಕಟಗಿ ಅಕ್ರಮವಾಗಿ ಹೊಂದಿದ್ದ 14 ಗುಂಟೆ ವಿಸ್ತೀರ್ಣದ ಹಳೆಯ ಮನೆಯೊಂದರಲ್ಲಿ ಬಸವರಾಜ ಮುತ್ತಗಿ ಸೇರಿ 14 ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದರು.

    ಕಾಂಗ್ರೆಸ್​ನ ನಾಗರಾಜ ಗೌರಿಗೆ ಮತ್ತೆ ವಿಚಾರಣೆ ಬಿಸಿ: ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣ ತನಿಖೆಗಾಗಿ ಇಲ್ಲಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೆ ಠಿಕಾಣಿ ಹೂಡಿದ್ದ ಸಿಬಿಐ ಅಧಿಕಾರಿಗಳು, ರಾತ್ರಿಯೂ ವಿಚಾರಣೆ ನಡೆಸಿದ್ದು ಅಚ್ಚರಿ ಮೂಡಿಸಿದೆ. ಬೆಳಗ್ಗೆಯಿಂದ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಹಾಗೂ ವಿನಯ ಕುಲಕರ್ಣಿ ಆಪ್ತ ಶ್ರೀಷ ಪಾಟೀಲ ವಿಚಾರಣೆ ನಡಸಿದ್ದರು. ಆದರೆ ರಾತ್ರಿ ಕಾಂಗ್ರೆಸ್ ಮುಖಂಡ ಹುಬ್ಬಳ್ಳಿಯ ನಾಗರಾಜ ಗೌರಿಗೆ ದಿಢೀರನೆ ಬುಲಾವ್ ನೀಡಿ ವಿಚಾರಣೆ ನಡೆಸಿದ್ದು ಕುತೂಹಲ ಮೂಡಿಸಿದೆ. ಯೋಗೀಶಗೌಡ ಪತ್ನಿ ಮಲ್ಲಮ್ಮ ಗೌಡರ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ನಾಗರಾಜ ಗೌರಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಈಗಾಗಲೇ ನಾಗರಾಜ ಅವರನ್ನು 2-3 ಬಾರಿ ವಿಚಾರಣೆ ನಡೆಸಲಾಗಿದೆ. ಮಂಗಳವಾರ ರಾತ್ರಿ ಸಹ ನಾಗರಾಜ ಗೌರಿ ಅವರನ್ನು ಕರೆಯಿಸಿ ಇದೇ ವಿಷಯವಾಗಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಾರಿ ಅಧಿಕಾರಿಗಳು, ಯೋಗೀಶ ಗೌಡರ ಪತ್ನಿ ಮಲ್ಲಮ್ಮನ ವಿಚಾರಣೆ ವೇಳೆ ಖಚಿತ ಪಡಿಸಿಕೊಂಡ ಕೆಲವು, ‘ವ್ಯವಹಾರ’ಗಳ ಕುರಿತು ಕೇಳಿ ಬೆವರಿಳಿಸಿದರು ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts