More

    ಸಿದ್ಧಾಶ್ರಮದಲ್ಲೊಂದು ಮಾದರಿ ಕೇಂದ್ರ

    ಧಾರವಾಡ: ಕರೊನಾ ಮಹಾಮಾರಿಗೆ ರಾಜ್ಯದ ಬಹುತೇಕ ಹಳ್ಳಿಗಳು ತತ್ತರಿಸಿವೆ. ಗ್ರಾಮೀಣ ಜನರು ಆಸ್ಪತ್ರೆಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಸೌಲಭ್ಯ ಕಲ್ಪಿಸುವುದು ಕಷ್ಟಕರವಾಗಿದೆ. ಹೀಗಾಗಿ, ಸರ್ಕಾರ ಕೋವಿಡ್ ಕಾಳಜಿ ಕೇಂದ್ರಗಳನ್ನು ಹೆಚ್ಚು ತೆರೆಯಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯೊಬ್ಬರು ತಮ್ಮ ಆಶ್ರಮದಲ್ಲೇ ಕಾಳಜಿ ಕೇಂದ್ರ ಸ್ಥಾಪಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಹೌದು! ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ಸಿದ್ಧಾಶ್ರಮದಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ತಗುಲಿದ ವ್ಯಕ್ತಿ ಮನೆಯಲ್ಲಿ ಪ್ರತ್ಯೇಕ ವಾಸವಾಗಿರುವುದು ಕಷ್ಟ. ಇದನ್ನು ಮನಗಂಡು ಗ್ರಾಮೀಣ ಭಾಗದ ಜನರ ಅನುಕೂಲಕ್ಕೆ ಲೋಕಹಿತ ಟ್ರಸ್ಟ್ ಸಹಯೋಗದಲ್ಲಿ ಈ ಕೇಂದ್ರ ಆರಂಭಿಸಲಾಗಿದೆ.

    ಜಿಲ್ಲೆಯಲ್ಲಿ ಆರಂಭಿಸಿರುವ ಕೇಂದ್ರಗಳಿಗಿಂತ ಈ ಕೇಂದ್ರ ಎಲ್ಲದರಲ್ಲೂ ವಿಭಿನ್ನ. ಪರಿಸರದ ಮಡಿಲಲ್ಲಿ ಇರುವುದು ಒಂದೆಡೆಯಾದರೆ, ಸೋಂಕಿತರ ಆರೋಗ್ಯ ಸುಧಾರಣೆ ಜತೆ ಆತ್ಮಸ್ಥೈರ್ಯ ತುಂಬಲು ಪ್ರವಚನ, ಧ್ಯಾನ ನಡೆಸುತ್ತಿರುವುದು ವಿಶೇಷ.

    ಮಠದಲ್ಲಿ ವಿವಿಧ ಶಿಬಿರಗಳನ್ನು ನಡೆಸುತ್ತಿದ್ದ ಸ್ಥಳವನ್ನು ಕಾಳಜಿ ಕೇಂದ್ರ ಮಾಡಲಾಗಿದೆ. 20 ಬೆಡ್ ಇರುವ ಕೇಂದ್ರದಲ್ಲಿ ಊಟ, ಉಪಾಹಾರದ ವ್ಯವಸ್ಥೆಯನ್ನು ಮಠದಿಂದ ಮಾಡಲಾಗಿದೆ. ಬೆಡ್, ವೈದ್ಯಕೀಯ ಸಾಮಗ್ರಿ, 2 ಆಕ್ಸಿಜನ್ ಕಾನ್ಸನ್​ಟ್ರೇಟರ್ ಸೇರಿ ಇತರ ಕೆಲ ವ್ಯವಸ್ಥೆಗಳನ್ನು ಲೋಕಹಿತ ಟ್ರಸ್ಟ್ ಮಾಡಿದೆ. ಈ ವ್ಯವಸ್ಥೆ ನೋಡಿಕೊಳ್ಳಲು ಲೋಕಹಿತ ಟ್ರಸ್ಟ್ ಅಧ್ಯಕ್ಷ ಶ್ರೀಧರ ನಾಡಗೀರ, ಸುನೀಲ ಸರೂರ ಹಾಗೂ ಇತರ ಮುಖಂಡರ ನೇತೃತ್ವದಲ್ಲಿ 20 ಜನರ ಯುವಕರ ತಂಡ ಕೆಲಸ ಮಾಡುತ್ತಿದೆ.

    ಸದ್ಯ ಜಿಲ್ಲೆಯ ವಿವಿಧ ಗ್ರಾಮಗಳ 7 ಜನ ಸೋಂಕಿತರು ಕೇಂದ್ರದಲ್ಲಿದ್ದು, ಧಾರವಾಡದ ವೈದ್ಯ ಡಾ. ಎಸ್.ಆರ್. ಜಂಬಗಿ ನೇತೃತ್ವದ ತಂಡ ನಿತ್ಯ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಆರೋಗ್ಯ ಪರಿಶೀಲಿಸುತ್ತದೆ. ಇದಲ್ಲದೆ, ಎಸ್​ಡಿಎಂ ಹಾಗೂ ಕಿಮ್್ಸ ಆಸ್ಪತ್ರೆ ವೈದ್ಯರ ತಂಡ ಸಹ ಭೇಟಿ ನೀಡುತ್ತದೆ. ಉಳಿದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸೋಂಕಿತರ ಆರೋಗ್ಯದ ಮೇಲೆ ನಿಗಾ ಇಡುತ್ತಾರೆ.

    ಸಮಾಜ ದಾರಿ ತಪ್ಪುವಾಗ ಸೂಕ್ತ ಮಾರ್ಗದರ್ಶನ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಸ್ವಾಮೀಜಿಗಳು ಈಗ ಸಮಾಜದ ಜನರ ಆರೋಗ್ಯದ ಸ್ವಾಸ್ಥ್ಯ ಕಾಪಾಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ.

    ಶ್ರೀಗಳಿಂದ ಪ್ರವಚನ

    ಈ ಕಾಳಜಿ ಕೇಂದ್ರದಲ್ಲಿ ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿಗಳು ನಿತ್ಯ ಬೆಳಗ್ಗೆ ಹಾಗೂ ಸಂಜೆ 1 ತಾಸು ಪ್ರವಚನ ನೀಡಿ ಮನಸ್ಸು ಸದೃಢ ಮಾಡುತ್ತಿದ್ದಾರೆ. ಜತೆಗೆ, ಧ್ಯಾನ, ಪ್ರಾಣಾಯಾಮ, ಯೋಗಾಸನ ಮಾಡಲು ವ್ಯವಸ್ಥೆ ಕಲ್ಪಿಸಿದ್ದಾರೆ. ಇದರಿಂದ ಸೋಂಕಿತರು ಆಸ್ಪತ್ರೆಯಲ್ಲಿ ಇದ್ದೇವೆ ಎಂಬ ಭಾವನೆಗೆ ಒಳಗಾಗದಂತೆ ವಾತಾವರಣ ನಿರ್ವಿುಸಲಾಗುತ್ತಿದೆ. ಆಶ್ರಮದ ಪರಿಸರವೂ ಮನಸ್ಸಿಗೆ ಶಾಂತಿ ನೀಡುವಂತಿದೆ.

    ರಾಜ್ಯದ ದೊಡ್ಡ ದೊಡ್ಡ ಮಠಗಳು ಕಾಳಜಿ ಕೇಂದ್ರ ಆರಂಭಿಸುತ್ತಿವೆ. ನಮ್ಮಲ್ಲೂ ಆರಂಭಿಸಲು ಲೋಕಹಿತ ಟ್ರಸ್ಟ್ ಮುಂದೆ ಬಂದಾಗ ಮುಕ್ತವಾಗಿ ನೀಡಲಾಗಿದೆ. ಸೋಂಕಿತರ ಆರೈಕೆ ಜತೆಗೆ ಆತ್ಮಸ್ಥೈರ್ಯ ತುಂಬಲು ಬೆಳಗ್ಗೆ ಹಾಗೂ ಸಂಜೆ ಪ್ರವಚನ ನೀಡಲಾಗುತ್ತಿದೆ. ಕೇಂದ್ರದಲ್ಲಿನ ಸೋಂಕಿತರ ಸಂಖ್ಯೆ ಶೀಘ್ರ ಕಡಿಮೆಯಾಗಿ, ಕರೊನಾ ಮುಕ್ತವಾಗಲಿ ಎಂಬುದೇ ನಮ್ಮ ಆಶಯ.

    | ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿ, ಸಿದ್ಧಾಶ್ರಮ

    ಕೇಂದ್ರದಲ್ಲಿ ಸೋಂಕಿತರಿಗೆ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಹಕಾರವೂ ಉತ್ತಮವಾಗಿದೆ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ.

    | ನಿಂಗಪ್ಪ ಮಡಿವಾಳರ, ಕೇಂದ್ರದ ಸಂಯೋಜಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts