More

    ಸಿದ್ದೇಶ್ವರರಿಗೆ ನೀಡದಿರಿ ಲೋಕಸಭೆ ಟಿಕೆಟ್  – ವರಿಷ್ಠರ ಬಳಿ ಜಿಲ್ಲಾ ಬಿಜೆಪಿ ನಿಯೋಗ ಮನವಿ

    ದಾವಣಗೆರೆ: ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ಈ ಬಾರಿಯ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬಾರದೆಂದು ಬಿಜೆಪಿಯ ಜಿಲ್ಲಾ ಮುಖಂಡರ ನಿಯೋಗ ಪಕ್ಷದ ಪ್ರಮುಖರಿಗೆ ಮನವಿ ಮಾಡಿದೆ.
    ಈ ಸಂಬಂಧ ಶುಕ್ರವಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಬಿಜೆಪಿ ನಿಯೋಗದ ಮುಖಂಡರು, ಸಿದ್ದೇಶ್ವರ ಅವರು ಕಾರ್ಯಕರ್ತರನ್ನು ಕಡೆಗಣಿಸಿದ್ದಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ದೂರಿದರು.
    ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಜಿ.ಕರುಣಾಕರರೆಡ್ಡಿ, ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಾ.ಶಿವಯೋಗಿ ಸ್ವಾಮಿ, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯ್‌ಕುಮಾರ್ ಸೇರಿ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಸಂಸದರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು.
    ದವಳಗಿರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾದ ನಿಯೋಗ, ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡದಿರಲು ಕೆಲವು ಕಾರಣಗಳನ್ನು ಮಂಡಿಸಿತು. ಕಾರ್ಯಕರ್ತರನ್ನು ಕಡೆಗಣಿಸಿ ಅಭ್ಯರ್ಥಿ ಘೋಷಿಸಿದರೆ ಚುನಾವಣೆಯಲ್ಲಿ ಅಸಹಕಾರ ತೋರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
    ಸಿದ್ದೇಶ್ವರ ಸ್ಪರ್ಧೆಗೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕರ್ತರ ವಿರೋಧವಿದೆ. ನಾಲ್ಕು ಬಾರಿ ಗೆದ್ದರೂ ಜಿಲ್ಲೆಯನ್ನು ಅಭಿವೃದ್ಧಿಪಡಿಸಿಲ್ಲ ಎಂಬ ಆರೋಪವಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡದೆ ಅಧಿಕೃತ ಅಭ್ಯರ್ಥಿಗಳ ಸೋಲಿಗೂ ಕಾರಣರಾಗಿದ್ದಾರೆ. ಅವರಿಗೆ ಯಾವ ಕಾರಣಕ್ಕೂ ಟಿಕೆಟ್ ನೀಡಬಾರದು. ನೀಡಿದಲ್ಲಿ ಸೋಲುವ ಸಾಧ್ಯತೆ ಇದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
    ನಂತರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಮುಖಂಡರು ಇದೇ ಅಭಿಪ್ರಾಯ ಹಂಚಿಕೊಂಡಿದ್ದು, 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಪಡೆದ ನಂತರವೇ ಅಭ್ಯರ್ಥಿ ಘೋಷಣೆ ಮಾಡಬೇಕೆಂದು ಮನವಿ ಮಾಡಿತು ಎನ್ನಲಾಗಿದೆ.
    ಇದಕ್ಕೆ ಸ್ಪಂದಿಸಿದ ಬಿ.ವೈ. ವಿಜಯೇಂದ್ರ, ಮುಖಂಡರು, ಕಾರ್ಯಕರ್ತರ ಒತ್ತಾಸೆಯಂತೆ ಸಮೀಕ್ಷೆ ನಡೆಸಲಿದ್ದು, ಅದರಲ್ಲಿ ಮುಂಚೂಣಿಯಲ್ಲಿದ್ದವರಿಗೆ ಟಿಕೆಟ್ ನೀಡುವಂತೆ ಪಕ್ಷದ ಚುನಾವಣಾ ಸಮಿತಿಗೆ ರಾಜ್ಯ ಘಟಕ ಶಿಫಾರಸು ಮಾಡಲಿದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಬೇಕೆಂದು ಸಲಹೆ ನೀಡಿದರು.
    28 ಲೋಕಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ಆಧಾರದ ಮೇಲೆಯೇ ಟಿಕೆಟ್ ನೀಡಲಾಗುತ್ತದೆ. ಕಾರ್ಯಕರ್ತರು ಯಾರಿಗೆ ಹೆಚ್ಚಿನ ಒಲವು ತೋರುತ್ತಾರೆಯೇ ಅವರ ಆಶಯದಂತೆ ಪಕ್ಷ ನಡೆದುಕೊಳ್ಳಲಿದೆ ಎಂದು ತಿಳಿಸಿದರು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts