More

    ಸಿಟಿಗಳಿಗಿಂತಲೂ ಹಳ್ಳಿಗಳಲ್ಲಿ ಹೈ ಅಲರ್ಟ್, ಹೊರ ಭಾಗದಿಂದ ಬಂದವರ ಮೇಲೆ ನಿಗಾ

    ಚಿಕ್ಕಬಳ್ಳಾಪುರ: ಕರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ನಗರ ಪಟ್ಟಣ ಪ್ರದೇಶಗಳಿಗಿಂತಲೂ ಹಳ್ಳಿಗಳಲ್ಲಿ ಹೈ ಅಲರ್ಟ್ ಕಂಡು ಬರುತ್ತಿದೆ.

    ಗ್ರಾಮದಲ್ಲಿ ಸೋಂಕಿನ ಹೊಸ ಪ್ರಕರಣ ಪತ್ತೆಯಾಗುತ್ತಿದ್ದಂತೆ ಊರಿಗೆ ಊರೇ ಎಚ್ಚೆತ್ತುಕೊಂಡು ಸ್ವಯಂ ಮಾರ್ಗಸೂಚಿ ಪಾಲಿಸುತ್ತಿವೆ. ಜನಸಂದಣಿ ಮತ್ತು ಗುಂಪು ಸೇರ್ಪಡೆಗೆ ಕಡಿವಾಣ, ಹೊರ ಭಾಗದಿಂದ ಬಂದವರ ಮೇಲೆ ಹೆಚ್ಚಿನ ನಿಗಾ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಬಳಕೆ, ಸೋಂಕಿತರು ಇರುವ ಪ್ರದೇಶದಲ್ಲಿ ಸಂಪೂರ್ಣವಾಗಿ ಇತರೆ ಚಟುವಟಿಕೆಗೆ ಕಡಿವಾಣ ಮತ್ತು ಕುಟುಂಬಸ್ಥರಿಗೆ ಸಲಹೆ ಸೂಚನೆ, ಗ್ರಾ.ಪಂ.ವ್ಯಾಪ್ತಿಯ ಅಧಿಕಾರಿಗಳಿಂದ ಸಲಹೆ ಸ್ವೀಕಾರ, ಚರ್ಚೆ ಮತ್ತು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಣೆ ಸೇರಿ ನಾನಾ ರೀತಿಯಲ್ಲಿ ಸಹಕಾರ ಮನೋಭಾವನೆ ತೋರಲಾಗುತ್ತಿದೆ.

    ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ ಪಾಳ್ಯದಲ್ಲಿ ಇತ್ತೀಚೆಗೆ 24 ಮಂದಿಗೆ ಕರೊನಾ ಸೋಂಕು ದೃಢಪಟ್ಟು, ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಲಾಕ್ ಡೌನ್ ಹೇರಲಾಗಿದೆ. ಅಗತ್ಯ ವಸ್ತುಗಳು ಖರೀದಿ ಮತ್ತು ಇತರೆ ಕೆಲಸಗಳಿಗೆ ಬೆಳಗ್ಗೆ 6 ರಿಂದ 10, ಸಂಜೆ 6 ರಿಂದ ರಾತ್ರಿ 8 ರವರೆಗೆ ಸಮಯ ನಿಗದಿಪಡಿಸಿಕೊಳ್ಳಲಾಗಿದೆ. ಗ್ರಾಪಂ ಟಾಸ್ಕ್ ಫೋರ್ಸ್ ಕಮಿಟಿಯ ಮೂಲಕ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಜತೆಗೆ ಜನರಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹೀಗೆ ಹಲವು ಗ್ರಾಮಗಳಲ್ಲಿ ಕರೊನಾ ಕಡಿವಾಣಕ್ಕೆ ಸ್ವಯಂ ನಿರ್ಬಂಧ ಹೇರಿಕೊಂಡು, ಮುಂಜಾಗ್ರತೆ ವಹಿಸಲಾಗುತ್ತಿದೆ.

    ನಮ್ಮ ಊರಿನಲ್ಲಿ ಕರೊನಾ ಸೋಂಕು ಪ್ರಕರಣಗಳು ಪತ್ತೆಯಾಗುವಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಎಲ್ಲರೂ ಸೇರಿಕೊಂಡು ಕೆಲ ನಿರ್ಧಾರಗಳನ್ನು ಕೈಗೊಂಡಿದ್ದು ಸೆಲ್ಫ್ ಲಾಕ್ ಡೌನ್ ಸೇರಿ ಕೆಲ ನಿರ್ಬಂಧಗಳನ್ನು ಅನುಷ್ಠಾನಗೊಳಿಸಲಾಗಿದೆ.
    ರವಿ, ಸ್ಥಳೀಯ ನಿವಾಸಿ

    ನಗರ, ಪಟ್ಟಣಗಳಲ್ಲಿ ನಿರ್ಲಕ್ಷೃ: ಕರೊನಾ ಎರಡನೇ ಅಲೆಯ ತೀವ್ರತೆಯ ಆತಂಕದ ಬಗ್ಗೆ ನಗರ, ಪಟ್ಟಣ ಪ್ರದೇಶಗಳಲ್ಲಿಯೇ ಹೆಚ್ಚಿಗೆ ನಿರ್ಲಕ್ಷಿಸಲಾಗುತ್ತಿದೆ. ಒಂದೆಡೆ ಅಧಿಕಾರಿಗಳು ಮಾರ್ಗಸೂಚಿ ನಿಯಮ ಉಲ್ಲಂಘನೆಗೆ ದಂಡ ವಿಧಿಸಿಕೊಂಡು ಬರುತ್ತಿದ್ದರೆ, ಮತ್ತೊಂದೆಡೆ ಬಹುತೇಕರು ಸೋಂಕನ್ನು ಕಡೆಗಣಿಸುವ ಹಳೇ ಚಾಳಿ ಪ್ರದರ್ಶಿಸುತ್ತಿದ್ದಾರೆ. ಸಮರ್ಪಕವಾಗಿ ಮಾಸ್ಕ್ ಧರಿಸುತ್ತಿಲ್ಲ. ಪರಸ್ಪರ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಇದರಿಂದ ಪೊಲೀಸ್ ಸಿಬ್ಬಂದಿ ಮತ್ತು ಮಾರ್ಷಲ್‌ಗಳಿಗೆ ದಂಡ ಹಾಕಲು ಮತ್ತು ದಿನಕ್ಕೆ ಜಿಲ್ಲಾಡಳಿತ ನಿಗದಿಪಡಿಸಿರುವ ಗುರಿ ಸಾಧಿಸಲು ಅನುಕೂಲವಾಗಿದೆ. ತಾಲೂಕು ಕಚೇರಿ, ಮಾರುಕಟ್ಟೆ, ಬಸ್ ನಿಲ್ದಾಣ ಸೇರಿ ಹಲವೆಡೆ ಜನರು ಗುಂಪಿನಲ್ಲಿ ಸೇರುವಿಕೆ, ಎಲ್ಲೆಂದರಲ್ಲಿ ಉಗಿಯುವಿಕೆ, ಮಾಸ್ಕ್ ಜೇಬಿನಲ್ಲಿಟ್ಟುಕೊಂಡಿರುವುದು ಸಾಮಾನ್ಯವಾಗಿದೆ.

    ಅಧಿಕಾರಿಗಳ ನಡೆಗೆ ನಿರ್ಲಕ್ಷೃ: ದಂಡ ವಿಧಿಸುವ ಭರದಲ್ಲಿ ಅಧಿಕಾರಿಗಳು ಮಾನವೀಯತೆ ಮರೆತು ತೋರುತ್ತಿರುವ ಕೋಪ, ದರ್ಪ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆಯ ವರ್ತನೆಯು ಮತ್ತಷ್ಟು ನಿರ್ಲಕ್ಷೃಕ್ಕೆ ಪ್ರಮುಖ ಕಾರಣವಾಗಿದೆ. ಕಚೇರಿಗಳಲ್ಲಿನ ಸ್ಥಳೀಯ ಸಿಬ್ಬಂದಿ ಧೋರಣೆಯು ಹೆಚ್ಚಿನ ಜನಸಂದಣಿಗೆ ಅವಕಾಶ ನೀಡುತ್ತಿದೆ ಎಂದರೂ ತಪ್ಪಾಗಲಾರದು. ಸೋಂಕಿನ ತೀವ್ರತೆಯ ಪ್ರಾರಂಭದಲ್ಲಿ ಕಣ್ಮುಚ್ಚಿ ಕೂರಲಾಗಿತ್ತು. ಆದರೆ, ಇದೀಗ ಬೀದಿ ಬದಿ ವ್ಯಾಪಾರಸ್ಥರು, ಪೆಟ್ಟಿಗೆ ಅಂಗಡಿ, ಹೋಟೆಲ್, ಮಾರುಕಟ್ಟೆಗಳಲ್ಲಿ ಬಡ ಅಮಾಯಕ ಜನರ ಮೇಲೆ ಮುಗಿ ಬೀಳುತ್ತಿದ್ದು ಅವಮಾನದಲ್ಲಿ ನಿಯಮ ಉಲ್ಲಂಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಜನರ ಮನವೊಲಿಸುವಲ್ಲಿ ಅಧಿಕಾರಿಗಳು ತಲೆ ನೋವು ಅನುಭವಿಸುವಂತಾಗಿದೆ. ಇದಕ್ಕೆ ದಂಡದ ಜತೆಗೆ ಮಾಸ್ಕ್ ವಿತರಣೆ, ಜನರಲ್ಲಿ ಅರಿವು ಮೂಡಿಸುವಿಕೆ, ಗುಂಪು ಸೇರದಿರಲು ಮತ್ತು ಅಗತ್ಯ ಸೇವೆಗೆ ಕಚೇರಿಗಳು, ಬ್ಯಾಂಕುಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲದಿರುವಂತೆ, ಅನವಶ್ಯಕವಾಗಿ ಅಲೆದಾಡಿಸದಿರುವುದು ಸೇರಿ ಜನೋಪಯೋಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

    ಪ್ರತಿಯೊಬ್ಬರು ಆರೋಗ್ಯದ ಹಿತದೃಷ್ಟಿಯಿಂದ ಕರೊನಾ ಮಾರ್ಗಸೂಚಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಸೋಂಕು ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡಬೇಕು.
    ಆರ್.ಲತಾ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts