More

    ಸಿಎಂ ಸಂವಿಧಾನ ವಿರೋಧಿ ನಡವಳಿಕೆ ಸಲ್ಲ, ಯುವಶಕ್ತಿ ಕರ್ನಾಟಕ ಸಂಘಟನೆ ಪ್ರತಿಭಟನೆ, ಮಂಗಳೂರು ನೈತಿಕ ಪೊಲೀಸ್‌ಗಿರಿ ಸಮರ್ಥನೆಗೆ ಆಕ್ರೋಶ

    ನೆಲಮಂಗಲ: ಮಂಗಳೂರಿನಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಸಮರ್ಥಿಸಿಕೊಂಡು ನೀಡಿರುವ ಹೇಳಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಹಿಂಪಡೆಯಬೇಕು ಎಂದು ಆಗ್ರಹಿಸಿ ಯುವಶಕ್ತಿ ಕರ್ನಾಟಕ ಸಂಘಟನೆ ಸ್ವಯಂಸೇವಕರು ಪ್ರತಿಭಟನೆ ನಡೆಸಿದರು.

    ನಗರದ ಸುಭಾಷ್ ನಗರದ ಯುವಶಕ್ತಿ ಕಚೇರಿ ಎದುರು ಗುರುವಾರ ಬೆಳಗ್ಗೆ ಸಮಾವೇಶಗೊಂಡ ಸಂಘಟನೆಯ ಸ್ವಯಂ ಸೇವಕರು ನಗರದ ತಾಲೂಕು ಕಚೇರಿವರೆಗೆ ಸಂವಿಧಾನದ ಬೃಹತ್ ಗಾತ್ರದ ಪೀಠಿಕೆಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ತಹಸೀಲ್ದಾರ್ ಕೆ.ಮಂಜುನಾಥ್ ಅನುಪಸ್ಥಿತಿಯಲ್ಲಿ ವಿಶೇಷ ತಹಸೀಲ್ದಾರ್ ಪ್ರಕಾಶ್‌ಗೆ ಮನವಿ ಸಲ್ಲಿಸಿದರು.

    ಸಂಘಟನೆಯ ಸಂಚಾಲಕ ಭಾಸ್ಕರ್‌ಸಿಂಹ ಮಾತನಾಡಿ, ಸಂವಿಧಾನವನ್ನು ರಕ್ಷಿಸಬೇಕಾದ ಮುಖ್ಯಮಂತ್ರಿ ಅವರು ಸಂವಿಧಾನ ವಿರೋಧಿ ನಡವಳಿಕೆ ತೋರುತ್ತಿದ್ದಾರೆ. ರಾಜ್ಯವು ಹತ್ತಾರು ಧರ್ಮ, ನೂರಾರು ಜಾತಿಗಳಿಂದ ಕೂಡಿದ್ದು ಸರ್ವಜನಾಂಗದವರು ಸಹೋದರಂತೆ ಇದ್ದಾರೆ. ಬಂಧುತ್ವ, ಭ್ರಾತೃತ್ವ ಬೆಳೆಸಿಕೊಂಡು ಸಾಮರಸ್ಯದಿಂದ ಬದುಕಬೇಕು ಎಂಬ ಡಾ. ಬಿ.ಆರ್.ಅಂಬೇಡ್ಕರ್ ಅವರು ಕನಸನ್ನು ಸರ್ಕಾರ ಹಾಳುಗೆಡವಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

    ದಲಿತ ಸಂಘಟನೆಗಳ ಒಕ್ಕೂಟಗಳ ಅಧ್ಯಕ್ಷ ಬಿ.ಆರ್. ಭಾಸ್ಕರ್‌ಪ್ರಸಾದ್ ಮಾತನಾಡಿ, ಕ್ರಿಯೆಗೆ ಪ್ರತಿಕ್ರಿಯೆ ಎಂಬುದು ಎಲ್ಲ ಮತೀಯವಾದಿಗಳ ಮಾತಾಗಿದೆ. ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡಿ ಅಧಿಕಾರ ಸ್ವೀಕರಿಸಿರುವ ಮುಖ್ಯಮಂತ್ರಿಗಳು ನೈತಿಕ ಪೊಲೀಸ್‌ಗಿರಿ ಸಮರ್ಥಿಸಿಕೊಂಡಿದ್ದಾರೆ. ಅವರ ಈ ಮಾತು ಮತೀಯವಾದಿ ಸಂಘಟನೆಗಳನ್ನು ಪ್ರಚೋದಿಸಿ, ಬೀದಿಗಿಳಿಯುವಂತೆ ಮಾಡುವುದು ಖಚಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಖ್ಯಮಂತ್ರಿಯೊಬ್ಬರು ಇಷ್ಟು ಬೇಜವಾಬ್ದಾರಿತನದ ವರ್ತನೆ ತೋರುವುದು ಬೇಸರದ ಸಂಗತಿ. ಇದನ್ನು ಪ್ರಶ್ನಿಸಬೇಕಾದ ಪ್ರತಿಪಕ್ಷದವರೂ ಕೈಕಟ್ಟಿ ಕುಳಿತಿದ್ದಾರೆ ಎಂದು ಹೇಳಿದರು.

    ಬಹಿರಂಗ ಕ್ಷಮೆಗೆ ಒತ್ತಾಯ: ನೈತಿಕ ಪೊಲೀಸ್‌ಗಿರಿ ಬಗೆಗಿನ ಸಿಎಂ ಹೇಳಿಕೆ ಜನರ ಭಾವನೆಗಳಿಗೆ ಧಕ್ಕೆ ತರುವಂತಿದೆ. ಇದರಿಂದ ಜನರು ಕೆರಳುವ ಮುನ್ನವೇ ಸಿಎಂ ಬಹಿರಂಗ ಕ್ಷಮೆಯಾಚಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
    ಯುವಶಕ್ತಿ ಕರ್ನಾಟಕ ಸದಸ್ಯರಾದ ಮೇಘನಾ, ವೈಶಾಲಿ, ಜಾಗೃತಿ, ಹೇಮಾ, ದಲಿತ ಕೂಲಿಕಾರ್ಮಿಕ ಸಂಘಟನೆ ಅಧ್ಯಕ್ಷ ಗಂಗಬೈಲ್ಲಪ್ಪ, ಮುಖಂಡರಾದ ನಾಗರಾಜು, ರಾಮಾಂಜಿನಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts