More

    ಸಾಹಿತ್ಯ ಕ್ಷೇತ್ರದಲ್ಲಿ ಸಹಿಷ್ಣುತೆ ಕಣ್ಮರೆ- ಸಮ್ಮೇಳನಾಧ್ಯಕ್ಷ ಬಿ.ಎನ್.ಮಲ್ಲೇಶ್ ವಿಷಾದ

    ದಾವಣಗೆರೆ: ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಸಾಹಿತ್ಯದಲ್ಲೂ ಇಂದು ಸಹಿಷ್ಣುತೆ ಮಾಯವಾಗುತ್ತಿದೆ ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಕವಿ ಬಿ.ಎನ್.ಮಲ್ಲೇಶ್ ವಿಷಾದಿಸಿದರು.

    ಹೊಸ ಬೆಳವನೂರು ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಾವಣಗೆರೆ ತಾಲೂಕು ಒಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸಾಹಿತ್ಯದಲ್ಲಿ ಜಾತಿ ಧರ್ಮ, ಭೇದ ಮುನ್ನಲೆಗೆ ಬರುತ್ತಿದೆ. ಇತಿಹಾಸ ತಿರುಚುವ, ಸಾಹಿತ್ಯದಲ್ಲಿ ಇಲ್ಲದ್ದನ್ನು ಕೆದಕುವ ಪರಿಪಾಠ ಹೆಚ್ಚಿದೆ. ದಲಿತ, ಮುಸ್ಲಿಂ ಮತ್ತು ಮಹಿಳಾ ಸಂವೇದನೆಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ವಿಚಾರವಾದಿ, ಬುದ್ಧಿಜೀವಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಬಹುತ್ವವನ್ನು ಪ್ರತಿಪಾದಿಸುವ, ಪರ ಧರ್ಮ-ಪರ ವಿಚಾರಗಳನ್ನು ಸಹಿಸಿಕೊಳ್ಳುವ ಸಾಹಿತ್ಯ ಹೆಚ್ಚು ಬರಬೇಕಿದೆ ಎಂದು ಆಶಿಸಿದರು.
    ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆಯ ಅಭಿವೃದ್ಧಿಗೆ ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಡಾ. ದೊಡ್ಡರಂಗೇಗೌಡರು ಧ್ವನಿ ಎತ್ತಿರುವುದು ಔಚಿತ್ಯಪೂರ್ಣವಾಗಿದೆ. ತಮಿಳಿಗೆ ಒತ್ತು ನೀಡುವ ಸರ್ಕಾರ, ಕನ್ನಡದ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಿರುವ ಮೀಸಲನ್ನು ಶೇ.50ಕ್ಕೆ ಏರಿಸಬೇಕಿದೆ. ಐಟಿ-ಬಿಟಿ ಕಂಪನಿಗಳಲ್ಲೂ ಇದು ಜಾರಿಯಾಗಬೇಕು. ಕನ್ನಡದ ಅಭಿವೃದ್ಧಿ ಬಗ್ಗೆ ಸರ್ಕಾರಗಳೂ ತಮ್ಮ ಬದ್ಧತೆ ಪ್ರದರ್ಶಿಸಬೇಕಿದೆ ಎಂದು ಹೇಳಿದರು.
    * ರಾಜಕೀಯ ಸಖ್ಯ ಬೇಡ
    ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಆಸ್ತಿ, ಕನ್ನಡದ ನಿಜ ಆಸ್ಮಿತೆ. ನೆರವನ್ನು ಪಡೆಯುತ್ತಲೇ ಸರ್ಕಾರಗಳಿಂದ ಸ್ಪಷ್ಟ ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರ ಕೊಡುವ ಅನುದಾನ, ಕನ್ನಡಿಗರದ್ದೇ ಹೊರತು ರಾಜಕೀಯ ಪಕ್ಷಗಳದ್ದಲ್ಲ ಎಂಬುದನ್ನು ಪರಿಷತ್ತಿನ ಚುಕ್ಕಾಣಿ ಹಿಡಿದವರು ಅರ್ಥ ಮಾಡಿಕೊಳ್ಳಬೇಕು. ಭಾಷಾ ತಾರತಮ್ಯಗಳು ಎದುರಾದಾಗ ಸುಮ್ಮನೆ ಕೂರಬಾರದು. ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಸರ್ಕಾರಗಳ ವಿರುದ್ಧ ಧ್ವನಿ ಎತ್ತಬೇಕು. ರಾಜಕೀಯ ಪಕ್ಷಗಳ ಓಲೈಕೆ ಸೂಕ್ತವಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದರು.
    ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆತರೂ, ಸಾಂಸ್ಕೃತಿಕ ಜೀತಗಾರಿಕೆ ಮುಂದುವರೆದಿದೆ. ಇದರಿಂದ ಮುಕ್ತಗೊಳ್ಳಲು ಸಾಹಿತ್ಯ ರಚಿಸಬೇಕಿದೆ ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
    ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಗುವುದನ್ನು ಸ್ವಾಗತಿಸುವ ಜತೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

    ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ,ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ,ಅನಸೂಯಾ ಮಲ್ಲೇಶ್, ಜಿಪಂ ಮಾಜಿ ಅಧ್ಯಕ್ಷ ತುರ್ಚಘಟ್ಟ ಬಸವರಾಜಪ್ಪ, ಮುಖಂಡರಾದ ಬಿ.ಕೆ. ಈರಣ್ಣ, ಎ.ಎಸ್. ಮಹೇಂದ್ರಪ್ಪ, ಬೆಳವನೂರು ಗ್ರಾಪಂ ಅಧ್ಯಕ್ಷ ಟಿ.ಎ.ಆಶು, ಸಾಹಿತಿ ಡಾ. ನಾ. ಲೋಕೇಶ ಒಡೆಯರ್, ಬಿಇಒ ದಾರುಕೇಶ್ ಇತರರಿದ್ದರು.
    ಬೆಳವನ ಗೂಡು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts