More

    ಸಾವಯವ ಹೆಸರಲ್ಲಿ ಜನರಿಗೆ ವಂಚನೆ : ಕೃಷಿಕ ಸಂತೆಶಿವರ ಬಸವರಾಜ್ ಆತಂಕ


    ಹಾಸನ : ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಆಹಾರ ಪದಾರ್ಥಗಳಿಂದ ಮಾತ್ರ ರೋಗ ನಿರೋಧಕ ಶಕ್ತಿ ಸಿಗಲು ಸಾಧ್ಯ ಎಂದು ಸಾವಯವ ಕೃಷಿಕ ಸಂತೆಶಿವರ ಬಸವರಾಜ್ ಹೇಳಿದರು.

    ಚನ್ನರಾಯಪಟ್ಟಣ ಪಟ್ಟಣದ ಬಿಜಿಎಸ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ಆಹಾರಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ರಾಸಾಯನಿಕ ಬಳಕೆಯಿಂದ ಉತ್ಪತ್ತಿಯಾಗುತ್ತಿರುವ ಆಹಾರವೆಲ್ಲ ವಿಷಮಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


    ರಾಸಾಯನಿಕ ಗೊಬ್ಬರ ಬಳಕೆಯಿಂದ ಬೆಳೆಯುವ ಆಹಾರ ಪದಾರ್ಥಗಳ ಸೇವನೆಯಿಂದ ಕ್ಯಾನ್ಸರ್ ಹಾಗೂ ಇತರೆ ಮಾರಕ ರೋಗಗಳು ಕಾಡತೊಡಗಿವೆ. ಹೆಚ್ಚಿನ ಇಳುವರಿ, ಶೀಘ್ರ ಬೆಳವಣಿಗೆ ಸಲುವಾಗಿ ಯಥೇಚ್ಛವಾಗಿ ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಕೆಯಿಂದ ಮಣ್ಣು ತನ್ನ ಪೋಷಕಾಂಶ ಕಳೆದುಕೊಳ್ಳುತ್ತಿದೆ ಎಂದರು.


    ಅತಿಹೆಚ್ಚು ರಸಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ನಶಿಸುತ್ತಿವೆ. ನೈಸರ್ಗಿಕ ಕೃಷಿ ಮರೆತು ರೈತರೇ ಸಿದ್ಧಪಡಿಸಿದ ಕೃಷಿ ಉಪಕರಣಗಳೆಲ್ಲ ನಶಿಸಲಿದ್ದು ಆ ಜಾಗವನ್ನೆಲ್ಲ ಯಂತ್ರೋಪಕರಣಗಳು ಆಕ್ರಮಿಸಿವೆ. ಫಲವತ್ತಾದ ಭೂಮಿಗೆ ಟ್ರ್ಯಾಕ್ಟರ್ ಉಳುಮೆಯೂ ಮಾರಕ ಎಂದು ಎಚ್ಚರಿಸಿದರು.


    ಗಿಡದ ತ್ಯಾಜ್ಯವನ್ನು ಆದೇ ಗಿಡದ ಬುಡದಲ್ಲಿ ಹಾಕಿ ಕರಗಿಸುವುದು, ನೀರಿನ ಮಿತ ಬಳಕೆ, ಕೊಟ್ಟಿಗೆ ಗೊಬ್ಬರ ಬಳಕೆ, ಉಳುಮೆ ಮಾಡದೆ ನೈಸರ್ಗಿಕ ಕೃಷಿಯಲ್ಲಿ ತೊಡಗುವುದೆ ಸಾವಯವ ಕೃಷಿ ಪದ್ಧತಿ ಎಂದು ಸಲಹೆ ನೀಡಿದರು.


    ರೈತರ ಹೆಸರಲ್ಲಿ ವಂಚನೆ : ಇಂದು ಸಾವಯವ ಉತ್ಪನ್ನಗಳ ಹೆಸರಿನಲ್ಲಿ ನಗರಗಳಲ್ಲಿ ಜನರನ್ನು ವಂಚಿಸುವ ಕೆಲಸ ರೈತರ ಹೆಸರಿನಲ್ಲಿ ಆಗುತ್ತಿದೆ. ಕೆಲ ರೈತರು ಒಂದು ಎಕರೆಯಲ್ಲಷ್ಟೆ ಸಾವಯವ ಕೃಷಿ ಮಾಡಿ ಉಳಿದ ಆಹಾರ ಪದಾರ್ಥಗಳನ್ನು ರಾಸಾಯನಿಕ ಪದ್ಧತಿಯಲ್ಲೇ ಬೆಳೆದು ಸಾವಯವ ಲೇಬಲ್‌ನೊಂದಿಗೆ ಮಾರುವ ಮೋಸದ ಕೆಲಸವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


    ರೈತ ದಿನಾಚರಣೆ ಅಂಗವಾಗಿ ಎಲ್‌ಕೆಜಿ, ಯುಕೆಜಿ ಮಕ್ಕಳು ರೈತರ ಧಿರಿಸಿನೊಂದಿಗೆ ಕೃಷಿ ಉಪಕರಣಗಳೊಂದಿಗೆ ಪ್ರದರ್ಶನ ನೀಡಿದ್ದು ಎಲ್ಲರ ಮೆಚ್ಚುಗೆ ಗಳಿಸಿತು. ಇದರೊಂದಿಗೆ ಆಹಾರ ಮೇಳದಲ್ಲಿ ವಿವಿಧ ಹಣ್ಣು, ತರಕಾರಿ, ಸೊಪ್ಪು, ತಿಂಡಿ, ತಿನಿಸುಗಳ ಮಾರಾಟವನ್ನು ವಿದ್ಯಾರ್ಥಿಗಳು ನಡೆಸಿದರು. ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್, ಬಿಇಡಿ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀಕಾಂತ್, ಪಿಯು ಕಾಲೇಜಿನ ಪ್ರಾಂಶುಪಾಲ ನಾಗರಾಜು, ಐಟಿಐ ಕಾಲೇಜಿನ ಪ್ರಾಂಶುಪಾಲ ಪಿ.ಬಿ.ಶಂಕರೇಗೌಡ, ಬಿಜಿಎಸ್ ಸ್ಕೂಲ್‌ನ ಪ್ರಾಂಶುಪಾಲ ಕುಮಾರ್ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts