More

    ಸಾವಯವ ಕೃಷಿಯಿಂದ ಆರೋಗ್ಯಕರ ಸಲು

    ನಿಪ್ಪಾಣಿ: ಮಣ್ಣು, ಬೀಜ ಮತ್ತು ಕೃಷಿ ಇವೆಲ್ಲವೂ ಸಾವಯವಗೊಂಡಾಗ ನಮಗೆ ಸತ್ವಯುತ ಬೆಳೆ, ಆರೋಗ್ಯಕರ ಆಹಾರ ದೊರೆಯುತ್ತದೆ. ಅದಲ್ಲದೆ ನಿಸರ್ಗದ ಸಮತೋಲನವೂ ಸಾಧ್ಯವಾಗುತ್ತದೆ ಎಂದು ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಎಂ.ಸಾಂಗಾವೆ ಹೇಳಿದರು.

    ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿ ಶಾಸ್ತ್ರ ವಿಭಾಗಗಳು ಜಂಟಿಯಾಗಿ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಅರ್ಜುನ ನಗರದ ದೇವಚಂದ ಮಹಾವಿದ್ಯಾಲಯದೊಂದಿಗೆ ಮಾಡಿಕೊಂಡ ಪರಸ್ಪರ ಒಪ್ಪಂದದಡಿ ಈಚೆಗೆ ಏರ್ಪಡಿಸಿದ್ದ ಸಾವಯವ ಕೃಷಿ-ಇಂದಿನ ಅವಶ್ಯಕತೆ ಎಂಬ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಸೌರಶಕ್ತಿಯನ್ನು ಆಹಾರವಾಗಿಸುವ ಪ್ರಕ್ರಿಯೆಯೇ ಕೃಷಿ. ಹಾಗಾಗಿ ನೈಸರ್ಗಿಕವಾಗಿ ದೊರೆಯುವುದನ್ನೇ ಗೊಬ್ಬರವಾಗಿಸಿ, ನೈಸರ್ಗಿಕ ಜೀವಗಳನ್ನೇ ಕ್ರಿಮಿನಾಶಕವಾಗಿ ಬಳಸಿ, ಸತ್ವಯುತ ಮೂಲ ಬೀಜಗಳನ್ನೇ ಬಿತ್ತಿ ಆರೋಗ್ಯಕರ ಫಸಲು ಪಡೆಯುವ ನಿಟ್ಟಿನಲ್ಲಿ ಸಾವಯವ ಕೃಷಿ ವಿಧಾನ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

    ಸಂಪನ್ಮೂಲ ವ್ಯಕ್ತಿಗಳಾಗಿ ಸಂಕೇಶ್ವರ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಸುನೀಲಕುಮಾರ ನೂಲಿ ಹಾಗೂ ಸ್ಥಳೀಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಪಿ.ಎಸ್.ಮತ್ತಿವಾಡೆ ಸಾವಯವ ಕೃಷಿ ಮಹತ್ವ ಮತ್ತು ಇಂದಿನ ಅವಶ್ಯಕತೆ ಕುರಿತು ವಿವರಿಸಿದರು. ಬಳಸಬಹುದಾದ ನೈಸರ್ಗಿಕ ಗೊಬ್ಬರಗಳು ಮತ್ತು ಅವುಗಳನ್ನು ತಯಾರಿಸುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಸಮಗ್ರ ಮಾಹಿತಿ ನೀಡಿದರು.

    ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು. ಪ್ರಾಚಾರ್ಯ ಡಾ.ಎಂ.ಎಂ. ಹುರಳಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಅತುಲಕುಮಾರ ಕಾಂಬಳೆ, ಉಪಪ್ರಾಚಾರ್ಯ ಡಾ.ಆರ್.ಜಿ.ಖರಾಬೆ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಧವ ಸಾಳುಂಕೆ ಪ್ರಾರ್ಥಿಸಿದರು. ಕಾರ್ಯಾಗಾರದ ಸಂಯೋಜಕಿ ಶಶಿಲೇಖಾ ಪಾಟೀಲ ಸ್ವಾಗತಿಸಿದರು. ಸಂಪದಾ ಹೆಗಡೆ ಪರಿಚಯಿಸಿದರು. ಸೃಷ್ಟಿ ಮಾನೆ ಮತ್ತು ಮೃನ್ಮಯಿ ಯರನಾಳ ನಿರೂಪಿಸಿದರು. ಅಮೃತಾ ಮಂಗಾವತೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts