More

    ಸಾವಯವ ಕೃಷಿಕರಿಗೆ ಸಿಗಲಿ ಉತ್ತೇಜನ – ಸರ್ಕಾರಕ್ಕೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಲಹೆ

    ದಾವಣಗೆರೆ: ರಾಸಾಯನಿಕ ಗೊಬ್ಬರಗಳಿಗೆ ಸಬ್ಸಿಡಿ ನೀಡುವ ಸರ್ಕಾರದ ನೀತಿ ಸರಿಯಲ್ಲ. ಇದರ ಬದಲಾಗಿ ಸಾವಯವ ಕೃಷಿಕರಿಗೆ ಉತ್ತೇಜನ ನೀಡಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಲಹೆ ನೀಡಿದರು.
    ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಲಿಂ.ಅನ್ನದಾನ ಶಿವಯೋಗಿಗಳು, ಲಿಂ.ಡಾ. ಅಭಿನವ ಅನ್ನದಾನ ಶ್ರೀಗಳ ಪುಣ್ಯಾರಾಧನೆ, 262ನೇ ಶಿವಾನುಭವ ಸಂಪದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಹಸಿರು ಕ್ರಾಂತಿ ಪರಿಣಾಮ, ಯಥೇಚ್ಛ ರಾಸಾಯನಿಕ ಬಳಕೆಯಿಂದಾಗಿ ಕ್ಯಾನ್ಸರ್‌ಪೀಡಿತರ ಸಂಖ್ಯೆ ಹೆಚ್ಚಿದೆ. ಭೂಮಿಗೆ ವಿಷ ಬಿತ್ತಿ, ಅದನ್ನೇ ಬೆಳೆದು, ತಿನ್ನುವ ಸ್ಥಿತಿ ಬಂದಿದೆ. ಮುಂದಿನ ಪೀಳಿಗೆಗೆ ಬಂಜರು ಭೂಮಿ ಕೊಡುಗೆ ನೀಡುವುದು ಸರಿಯಲ್ಲ. ಆರೋಗ್ಯಯುತ ನಾಗರಿಕ ನಿರ್ಮಾಣವೇ ನಗರಗಳ ನಿಜವಾದ ಅಭಿವೃದ್ಧಿಯೇ ಹೊರತು ಕಟ್ಟಡ, ಸೇತುವೆಗಳ ಬೆಳವಣಿಗೆಯಲ್ಲ ಎಂದು ಹೇಳಿದರು.
    ಅನ್ನದಾನೇಶ್ವರ ಶ್ರೀಗಳು 2013ರಲ್ಲಿ ಹಾಲಕೆರೆಯಿಂದ ಉಳುವಿ ವರೆಗೆ 213 ಚಕ್ಕಡಿ ಬಂಡಿಗಳಲ್ಲಿ 5 ಸಾವಿರ ಜನರೊಂದಿಗೆ ಹಲ್ಳಿ ಹಳ್ಳಿಗೆ ತೆರಳಿ ಸಾವಯವ ಕೃಷಿ, ಜೈವಿಕ ಇಂಧನ ತಯಾರಿ ಇತ್ಯಾದಿ ಕುರಿತು ಜಾಗೃತಿ ಮೂಡಿಸಿದ್ದರು ಎಂದು ಸ್ಮರಿಸಿದರು.
    12 ಸಾವಿರ ಹಣದಿಂದ ಸ್ವಾತಂತ್ರೃ ಪೂರ್ವದಲ್ಲೇ ಶಿಕ್ಷಣ ಸಂಸ್ಥೆ, ಪ್ರಸಾದ ನಿಲಯವನ್ನು ಸ್ಥಾಪಿಸಿದ್ದ ಅನ್ನದಾನೇಶ್ವರ ಶ್ರೀಗಳು, ರ‌್ಯಾಂಕ್ ವಿಜೇತ ಮಕ್ಕಳು ಮಠದಲಲಿ ಒಂದು ವರ್ಷ ಸೇವೆ ಸಲ್ಲಿಸುವಂತೆ ಮಾಡಿದ್ದರು. ಅಲ್ಲಿಂದ ವಿವಿಧೆಡೆಗಳಲ್ಲೂ ಪ್ರಸಾದ ನಿಲಯಗಳು ಆರಂಭವಾದವು. ಮೌಲ್ಯಧಾರಿತ ಶಿಕ್ಷಣ ಕಲ್ಪಿಸಲಾಯಿತು ಎಂದು ಸ್ಮರಿಸಿದರು.
    ಅನ್ನದಾನ ಶಿವಯೋಗಿಗಳು ಕಾವಿಗೆ ಗೌರವ ತಂದುಕೊಟ್ಟರೆ ನಂತರ ಬಂದ ಶ್ರೀಗಳು ಅದನ್ನೇ ಮುಂದುವರಿಸಿದರು. ಇಂದಿಗೂ ಸ್ವಾಮೀಜಿ ಜೋಳಿಗೆಗೆ ಬರುವ ಹಣವೆಲ್ಲವೂ ದಾಸೋಹಕ್ಕೆ ಬಳಕೆಯಾಗುತ್ತದೆ ಎಂದು ಹೇಳಿದರು.
    ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಹಾಲಕೆರೆ ಅನ್ನದಾನ ಶ್ರೀಗಳಿಂದಾಗಿ ಶ್ರೀಮಠ ಶಿಕ್ಷಣ, ದಾಸೋಹ ಹಾಗೂ ಜ್ಞಾನ ಕ್ರಾಂತಿ ಮಾಡುತ್ತಿದೆ. ಜಾತಿ-ಮತ, ಪಂಥ ಮೀರಿ ಕೆಲಸ ನಿರ್ವಹಿಸುತ್ತಿದೆ. ಶಿಕ್ಷಣದ ಜತೆಗೆ ಮಠವು ಬರಗಾಲದಲ್ಲಿ ಸ್ಪಂದಿಸಿದೆ. ಮಠಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದರು.
    ಮಠಗಳೆಂದರೆ ಮೂಗು ಮುರಿಯುವ ದಿನಗಳು ಇಂದಿವೆ. ಆದರೆ ಅನ್ನದಾನೇಶ್ವರ ಮಠ ಮಾತ್ರ ಮೌಲಿಕ ಚಿಂತನೆಗಳನ್ನು ಉಳಿಸಿಕೊಂಡು ಬಂದಿರುವ ಕಾರಣಕ್ಕೆ ಮಠದ ಘನೆ ಉಳಿದಿದೆ. ಭಕ್ತರ ಸಂಖ್ಯೆ ಕೂಡ ಕಡಿಮೆಯಾಗಿಲ್ಲ. ಗುರು-ವಿರಕ್ತರ ನಡುವಿನ ಅನುಸಂಧಾನಕ್ಕೂ ಶ್ರೀಮಠ ಅಡಿಪಾಯ ಹಾಕಿದೆ ಎಂದು ಸ್ಮರಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಪರಧರ್ಮ ಸಹಿಷ್ಣುತೆ ಹೊಂದಿರುವ ಹಿಂದು ಧರ್ಮಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಆದರೆ ಧರ್ಮಕ್ಕೆ ಹಾಗೂ ತತ್ವ ಸಿದ್ಧಾಂತಕ್ಕೆ ಅಪಚಾರ ನಡೆದಾಗ ಮಠಾಧೀಶರು ಮತ್ತು ಸಮಾಜ ಜಾಗೃತವಾಗುವ ಅಗತ್ಯವಿದೆ ಎಂದರು.
    ಹಿಂದು ದೇವರು ದುಷ್ಟರ ಶಿಕ್ಷೆಯ ಸಂಕೇತವಾಗಿ ಕೈಯಲ್ಲಿ ಅಸ್ತ್ರ ಹಿಡಿದಿರುವ ನಿದರ್ಶನಗಳಿವೆ. ಗುರುಗಳು ಕೂಡ ಧರ್ಮದಂಡ ಹೊಂದಿದ್ದು, ಅನುಚಿತ ವರ್ತನೆ ತೋರುವವರಿಗೆ ಶಿಕ್ಷೆ ನೀಡುವುದೇ ಇದರ ಉದ್ದೇಶವಾಗಿದೆ. ಧರ್ಮದ ಬಗ್ಗೆ ಕೆಲವರು ಕುಹಕ ಹೇಳಿಕೆ ನೀಡುತ್ತಿದ್ದು ನಾವಿಂದು ಅಸಹಾಯಕರಂತಿದ್ದೇವೆ ಎಂದು ವಿಷಾದಿಸಿದರು.
    ನಮ್ಮ ಹೆಸರುಗಳು ಎಲ್ಲ ಭಾಷೆಯಲ್ಲೂ ಏಕರೂಪದಲ್ಲಿವೆ. ಆದರೆ ಇಂಡಿಯಾ ಬದಲಾಗಿ ಭಾರತ ಎಂದು ಹೆಸರಿಡುವ ವಿಚಾರದಲ್ಲೂ ಕೆಲವರು ಚರ್ಚೆ ಮಾಡುವುದು ಸರಿಯಲ್ಲ. ಹಿಂದು ಸಮಾಜ ಎಂಬುದು ಬಾಕ್ಸರ್‌ಪಟುಗಳು ಗುದ್ದುವ ಬಾಕ್ಸಿಂಗ್ ಬ್ಯಾಗ್ ಆಗಬಾರದು ಎಂದು ಸೂಚ್ಯವಾಗಿ ಹೇಳಿದರು.
    ಉಪನ್ಯಾಸ ನೀಡಿದ ಚನ್ನಗಿರಿಯ ಮಹಾಂತೇಶಶಾಸ್ತ್ರಿ ಹಿರೇಮಠ, ಸಮಾಜವನ್ನು ಕೂಡಿಸುವ ಶಕ್ತಿ ಪುರಾಣ, ಪ್ರವಚನಗಳಿವೆ. ಅನ್ನದಾನೇಶ್ವರ ಶ್ರೀಗಳ ಕುರಿತ ಪುರಾಣ ಬೃಹದಾಕಾರವಾಗಿದೆ. ಬಸವರಾಜ ರಾಜಗುರು, ಇಟಗಿ ಭೀಮವ್ವ ಇತರರು ಮಠದಿಂದಲೇ ಉನ್ನತ ಹೆಸರು ಸಂಪಾದಿಸಿದರು ಎಂದು ಹೇಳಿದರು.
    ವರ್ತಕರಾದ ಎ.ಬಿ. ಚಂದ್ರಶೇಖರ್, ಎಂ.ಎಸ್.ಶರಣಪ್ಪ, ವಕೀಲ ಎಂ.ವಿ. ರೇವಣಸಿದ್ದಯ್ಯ, ಇಎಸ್‌ಐ ಆಸ್ಪತ್ರೆ ಅಧೀಕ್ಷಕ ಡಾ. ಬಸವನಗೌಡ, ವೈದ್ಯ ಡಾ.ಮಂಜುನಾಥ ದೊಗ್ಗಳ್ಳಿ, ಲೆಕ್ಕ ಪರಿಶೋಧಕ ಜಂಬಿಗಿ ರಾಧೇಶ್, ಶಿವಪುತ್ರಪ್ಪ ಹೆರೂರ್ ನಾಗೂರು ಅವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು.
    ಕಾರ್ಯಕ್ರಮದಲ್ಲಿ ಅಮರಯ್ಯ ಗುರುವಿನಮಠ, ಸಿದ್ಧಗಂಗಾ ಶಾಲೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಎನ್‌ಎ.ಗಿರೀಶ್, ಎನ್. ಅಡಿವೆಪ್ಪ ಇತರರಿದ್ದರು. ಟಿ,ಎಚ್.ಎಂ. ಶಿವಕುಮಾರಸ್ವಾಮಿ ಸಂಗಡಿಗರು ಸಂಗೀತ ಹಾಡಿದರು. ವೀರಪ್ಪ ಎಂ.ಭಾವಿ, ಸುಜಾತಾ, ವಿ.ಬಿ. ತನುಜಾ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts