More

    ಸಾಲ ಮನ್ನಾಕ್ಕೆ ರೈತರ ಆಗ್ರಹ

    ಚಿತ್ರದುರ್ಗ: ಮಳೆ-ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದು, ಎಲ್ಲಾ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

    ನ್ಯಾಯಯುತ ಎಲ್ಲಾ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮೂಲಕ ಮನವಿ ರವಾನಿಸಿದರು.

    ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಈರುಳ್ಳಿ, ರಾಗಿ, ಹತ್ತಿ ಹಾಗೂ ದ್ವಿದಳ ಧಾನ್ಯಗಳು ಮಳೆ ಇಲ್ಲದೆ ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಸಾಲ ಮಾಡಿ ಖರ್ಚು ಮಾಡಿರುವ ಹಣವೂ ಹಿಂದಿರುಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎಲ್ಲಾ ಬೆಳೆಗಳಿಗೂ ಎಕರೆಗೆ 25 ಸಾವಿರ ರೂ.ನಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ರೈತರ ಪಂಪ್‌ಸೆಟ್‌ಗಳ ಪರಿವರ್ತಕಗಳು ಸುಟ್ಟರೆ, ಮೊದಲು ಸರ್ಕಾರ ಉಚಿತವಾಗಿ ನೀಡುತ್ತಿತ್ತು. ಆದರೀಗ ರೈತರೆ ದುರಸ್ತಿ ಮಾಡಿಸಿಕೊಳ್ಳಲು ಆದೇಶಿಸಿದೆ. ಸ್ಪಿಂಕ್ಲರ್ ಸೆಟ್‌ಗಳಿಗೆ 4 ಸಾವಿರ ರೂ. ನಿಗದಿಪಡಿಸಿ, ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಇವೆರಡು ನಿರ್ಧಾರವನ್ನೂ ಸರ್ಕಾರ ಹಿಂದಕ್ಕೆ ಪಡೆದು ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

    ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಪ್ರತಿ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.

    ಸಂಘದ ಅಧ್ಯಕ್ಷ ಎಲ್.ಬಸವರಾಜಪ್ಪ, ಎಸ್.ಎಂ.ಶಿವಕುಮಾರ್, ಎಂ.ಸಿದ್ದಪ್ಪ, ಜಿ.ಪರಮೇಶ್ವರಪ್ಪ, ಗೌಡ್ರು ಪರಮಶಿವಣ್ಣ, ವೀರಣ್ಣ, ನಿರಂಜನಮೂರ್ತಿ, ಆರ್.ಶಾಂತಕುಮಾರ್, ಗಿರೀಶ್‌ರೆಡ್ಡಿ, ಎ.ಎಸ್.ಗುರುಸಿದ್ದಪ್ಪ, ಕುಬೇರಮ್ಮ, ಕುರುಬರಹಳ್ಳಿ ಶಿವಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts