More

    ಸಾರ್ವಜನಿಕ ರಸ್ತೆ ತಡೆಗೆ ಅವಕಾಶವಿಲ್ಲ

    ಚಿತ್ರದುರ್ಗ: ತಾಲೂಕಿನ ಕಡ್ಲೇಗುದ್ದು, ಸಾಸಲು ಗ್ರಾಮಗಳ ಮಾರ್ಗವಾಗಿ ಕಬ್ಬಿಣದ ಅದಿರು ಲಾರಿಗಳು ಸಂಚರಿಸುವಾಗ ಪದೇ ಪದೆ ಲಾರಿ ತಡೆದು ಪ್ರತಿಭಟನೆ ನಡೆಸುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನ್ನೆಲೆಯಲ್ಲಿ ಸಾರ್ವಜನಿಕ ರಸ್ತೆ ತಡೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

    ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕಬ್ಬಿಣದ ಅದಿರು ಸಾಗಿಸುವ ವಾಹನಗಳ ರಹದಾರಿ ಕುರಿತು ಗಣಿ ಮಾಲೀಕರು, ಅದಿರು ಸಾಗಾಣಿಕೆದಾರರು, ಸ್ಥಳೀಯ ಗ್ರಾಮಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

    ಸ್ಥಳೀಯ ಗ್ರಾಮಸ್ಥರಿಗೆ ದೂಳಿನ ಸಮಸ್ಯೆ, ಕೃಷಿ ಚಟುವಟಿಕೆಗೆ ತೊಂದರೆ, ವಾಹನ ಸಂಚಾರ ದಟ್ಟಣೆ ಸೇರಿ ಗಣಿಬಾಧಿತ ಪ್ರದೇಶಗಳಲ್ಲಿ ಉಂಟಾಗುತ್ತಿರುವ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಆ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳ ಸಮರ್ಪಕ ಅನುಷ್ಠಾನಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡು ಡಿಸಿ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

    ಗಣಿಬಾಧಿತ ಗ್ರಾಮಗಳ ರಸ್ತೆ ವಿಸ್ತರಣೆ, ದುರಸ್ತಿ ಹಾಗೂ ಸ್ಕೈವಾಕ್ ಸೇರಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಭಿವೃದ್ಧಿ ಕಾರ್ಯಕ್ಕೆ ಗಣಿ ಕಂಪನಿಗಳು ಮುಂದಾಗಬೇಕು. ಉಪ ಸಮಿತಿ ಶಿಫಾರಸು, ಎಲ್ಲ ಸಲಹೆ-ಸೂಚನೆಗಳಿಗೆ ಗಣಿ ಕಂಪನಿಗಳು ಕಡ್ಡಾಯವಾಗಿ ಬದ್ಧರಿರಬೇಕು. ಇಲ್ಲದಿದ್ದರೆ, ಅದಿರು ಸಾಗಾಣಿಕೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.

    ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಮಾತನಾಡಿ, ಸಾರ್ವಜನಿಕ ರಸ್ತೆಗಳಲ್ಲಿ ವಾಹನ ತಡೆದರೆ ಎಫ್‌ಐಆರ್ ದಾಖಲಿಸಲು ಅವಕಾಶವಿದೆ. ಮುಂದಿನ ದಿನಗಳಲ್ಲೂ ಹೀಗೆ ಮುಂದುವರೆದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಜಾನ್‌ಮೈನ್ಸ್ನ ಧನಂಜಯ ಮಾತನಾಡಿ, ಕಳೆದ 5 ತಿಂಗಳಿಂದ ಕಬ್ಬಿಣದ ಅದಿರು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಹೊಸಪೇಟೆಯಿಂದ ಅದಿರು ತಂದು ಘಟಕ ನಡೆಸಲಾಗುತ್ತಿದ್ದು, ತೊಂದರೆ ಉಂಟಾಗಿದೆ. ಹೀಗಾಗಿ ಸ್ಥಳೀಯವಾಗಿ ಸಾಗಾಣಿಕೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಡಿಸಿಗೆ ಮನವಿ ಮಾಡಿದರು.

    ಆರೋಗ್ಯದ ಮೇಲೆ ದುಷ್ಪರಿಣಾಮ: ಗಣಿಗಾರಿಕೆ ಆರಂಭದ ವೇಳೆ 10ರಿಂದ 15 ಲಾರಿಗಳ ಸಂಚಾರ ಇತ್ತು. ಪ್ರಸ್ತುತ ದಿನಗಳಲ್ಲಿ ನಿತ್ಯ 150ಕ್ಕೂ ಹೆಚ್ಚು ಲಾರಿ ಸಂಚರಿಸುತ್ತಿವೆ. ದೂಳಿನ ಸಮಸ್ಯೆಯಿಂದಾಗಿ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿವೆ. ಕಿರಿದಾದ ರಸ್ತೆ ಕಾರಣಕ್ಕೆ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಕಡ್ಲೇಗುದ್ದು, ಮೇಗಳಹಳ್ಳಿ, ಕಾಗಳಗೇರಿ ಗ್ರಾಮಸ್ಥರು ಅಳಲು ತೋಡಿಕೊಂಡರು.

    ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಮಹೇಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಆರ್‌ಟಿಒ ಭರತ್ ಎಂ. ಕಾಳೇಸಿಂೆ, ಪರಿಸರ ಅಧಿಕಾರಿ ಪ್ರಕಾಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts