More

    ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಯತ್ನ

    ಹಾನಗಲ್ಲ: ಜನಪರ, ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಪಕ್ಷಾತೀತವಾಗಿ ಶ್ರಮಿಸಲು ತಾಲೂಕು ಸ್ವಾಭಿಮಾನಿ ನಾಗರಿಕ ಹಿತರಕ್ಷಣೆ ವೇದಿಕೆ ಸಿದ್ಧವಾಗಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಡಾ.ಪ್ರಕಾಶಗೌಡ ಪಾಟೀಲ ಹೇಳಿದರು.

    ತಾಲೂಕಿನ ಮಾರನಬೀಡ ಗ್ರಾಮದಲ್ಲಿ ತಾಲೂಕು ಸ್ವಾಭಿಮಾನಿ ನಾಗರಿಕ ಹಿತರಕ್ಷಣೆ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತಸೆ ಶಿಬಿರದಲ್ಲಿ ಅವರು ಮಾತನಾಡಿದರು.

    ಸಾಮಾಜಿಕ ಕಳಕಳಿ ಹೊಂದಿರುವ ಜನರನ್ನು ಒಗ್ಗೂಡಿಸಿ, ಕೆಳಸ್ತರದಲ್ಲಿ ಇರುವವರನ್ನು ಮುಖ್ಯವಾಹಿನಿಗೆ ತರುವ ಗುರಿ ಹೊಂದಲಾಗಿದೆ. ಆರೋಗ್ಯ ತಪಾಸಣೆ- ಚಿಕಿತ್ಸೆ, ಕೃಷಿ ತರಬೇತಿ, ಸರ್ಕಾರದ ಯೋಜನೆಗಳ ಕಾರ್ಯಾಗಾರಗಳನ್ನು ಆಯೋಜಿಸಲಿದ್ದೇವೆ ಎಂದರು.

    ಮಾಜಿ ಸಚಿವ ಮನೋಹರ ತಹಸೀಲ್ದಾರ್ ಮಾತನಾಡಿ, ನೇತ್ರದಾನ ಮಹಾದಾನ, ಕಣ್ಣಿಲ್ಲದವರ ಬಾಳಿಗೆ ಬೆಳಕು ನೀಡುವ ಮಹತ್ಕಾರ್ಯ ಕೈಗೊಳ್ಳಲು ನಮ್ಮ ಮರಣಾನಂತರ ನೇತ್ರದಾನ ಮಾಡುವ ಸಂಕಲ್ಪ ಮಾಡಬೇಕು ಎಂದರು.

    ಪ್ರಕಾಶಗೌಡ ಪಾಟೀಲ ನೇತೃತ್ವದ ಸಂಘಟನೆ, ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಪಕ್ಷಾತೀತವಾಗಿ ಬೆಳೆಯಬೇಕು. ಜನರ ಸಮಸ್ಯೆಗೆ ಪರಿಹಾರ ನೀಡಬೇಕು. ಸ್ವಾಭಿಮಾನವಿಲ್ಲದ ಬದುಕು ಶೂನ್ಯ. ಹೆಸರಿಗೆ ತಕ್ಕಂತೆ ಬೆಳೆಯಬೇಕು. ಎಲ್ಲ ಅಂಗಗಳಲ್ಲಿ ಕಣ್ಣು ಬಹುಮುಖ್ಯ. ಮರಣಾನಂತರ ಅವುಗಳನ್ನು ಮಣ್ಣು ಮಾಡುವ ಬದಲು ಅಗತ್ಯವಿರುವವರಿಗೆ ನೀಡಬೇಕು. ಎಲ್ಲ ಅಂಗಗಳನ್ನೂ ದಾನ ಮಾಡುವ ಪರಿಪಾಠ ಇಂದಿನ ವೈಜ್ಞಾನಿಕ ದಿನಗಳಲ್ಲಿ ಅಗತ್ಯವಾಗಿದೆ ಎಂದರು.

    ಸಂಘಟನೆ ಅಧ್ಯಕ್ಷ ಎಸ್.ಎಂ. ಕೋತಂಬರಿ ಮಾತನಾಡಿ, ಮಾನವನ ಜೀವನ ಸಮಾಜಮುಖಿಯಾಗಿರಬೇಕು. ದೇವರು ನೀಡಿದ ಅವಯವಗಳನ್ನು ಮರಣಾನಂತರ ಅಗತ್ಯವಿರುವವರಿಗೆ ದಾನ ಮಾಡಬೇಕು. ಅಂಗವೈಕಲ್ಯ ನೀಗಿಸಲು ಶ್ರಮಿಸೋಣ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕೈಜೋಡಿಸೋಣ, ಎಲ್ಲ ಗ್ರಾಮಗಳಲ್ಲಿ ನಮ್ಮ ಘಟಕಗಳನ್ನು ಬೆಳೆಸಲಿದ್ದೇವೆ. ಹನಿ ನೀರಾವರಿ, ಮಣ್ಣು ಪರೀಕ್ಷೆ, ಇಸ್ರೇಲ್ ಮಾದರಿ ಕೃಷಿ ಪದ್ಧತಿ ತರಬೇತಿ ಶಿಬಿರ ಹಮ್ಮಿಕೊಳ್ಳಲಿದ್ದೇವೆ. ಯುವಕರು ಈ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಸದ್ಗುರು ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಗ್ರಾಪಂ ಅಧ್ಯಕ್ಷ ಈರಣ್ಣ ಮರೋಡಿ, ಉಪಾಧ್ಯಕ್ಷ ಪುಟ್ಟಪ್ಪ ನರೇಗಲ್, ತಾಪಂ ಮಾಜಿ ಸದಸ್ಯ ಸುರೇಶ ರ್ನೆಮನಿ, ಶಿವಾ ಸಹಕಾರಿ ಸಂಘದ ಅಧ್ಯಕ್ಷ ಬಸಣ್ಣ ಸಂಶಿ, ಪ್ರಭುಗೌಡ ಬೈಲವಾಳ, ಗುಡದಯ್ಯ ಸುಂಕದ, ಮಾಲತೇಶ ಸುಂಕದ, ಸಂಘಟನೆ ಪದಾಧಿಕಾರಿ ಹಾಶಂಪೀರ ಇನಾಂದಾರ, ಮಾಲತೇಶ ಗಂಟೇರ, ರವೀಂದ್ರ ಚಿಕ್ಕೇರಿ, ಬಸವರಾಜ ಕ್ಯಾಮೋಜಿ, ಎಂ.ಎಂ. ಹರವಿ, ಅಶೋಕ ಸಂಶಿ ಇದ್ದರು. ಪ್ರಧಾನ ಕಾರ್ಯದರ್ಶಿ ಜಗದೀಶ ಕೊಂಡೋಜಿ ಸ್ವಾಗತಿಸಿದರು, ಕಿರಣ ಹೂಗಾರ ನಿರೂಪಿಸಿದರು.

    ಎಂ.ಎಂ. ಜೋಶಿ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ನಡೆದ ನೇತ್ರ ತಪಾಸಣೆ ಶಿಬಿರದಲ್ಲಿ 200ಕ್ಕೂ ಅಧಿಕ ಜನರು ಕಣ್ಣಿನ ತಪಾಸಣೆಗೆ ಒಳಗಾದರು. ಅವರಲ್ಲಿ ಅಗತ್ಯವಿದ್ದ 40 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts