More

    ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ

    ಬೂದಿಕೋಟೆ: ಸರ್ಕಾರದ ವಿವಿದ ಸವಲತ್ತು ಪಡೆಯಲು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿರಿ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು. ಬಂಗಾರಪೇಟೆ ತಾಲೂಕು ಬೂದಿಕೋಟೆ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ಉದ್ಘಾಟಿಸಿ ಮಾತನಾಡಿದರು.

    ಸಾರ್ವಜನಿಕರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಇತ್ಯರ್ಥಪಡಿಸುವ ಸಲುವಾಗಿ ಕಂದಾಯ ಅದಾಲತ್ ಆಯೋಜಿಸಲಾಗಿದೆ. ಕರೊನಾ ಲಾಕ್‌ಡೌನ್ ನಂತರ ಆಡಳಿತದ ವೇಗ ಹೆಚ್ಚಿಸಲು ಕಂದಾಯ ಅದಾಲತನ್ನು ಪುನಾ ಆರಂಭಿಸಿದ್ದೇವೆ. ಜಿಲ್ಲೆಯ ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನಗಳಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮನೆಯಲ್ಲಿ ದುಡಿಯುತ್ತಿದ್ದ ವ್ಯಕ್ತಿ ಮರಣ ಹೊಂದಿದಲ್ಲಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಲ್ಲಿ 20 ಸಾವಿರ ರೂ. ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬಹುದು. ಪಹಣಿಯಲ್ಲಿ ಏನಾದರು ಲೋಪದೋಷಗಳಿದ್ದರೆ, ಹೆಸರು ತಿದ್ದುಪಡಿ, ಕಾಲಂ ನಂ.3 ಮತ್ತು 30ರಲ್ಲಿ ಕಂಡು ಬರುವ ವ್ಯತ್ಯಾಸ ಸೇರಿ ಸುಮಾರು 7ರಿಂದ 8 ಲೋಪದೋಷ ಸರಿಪಡಿಸಲು ಅರ್ಜಿ ಸಲ್ಲಿಸಬಹುದು ಎಂದರು.

    ತಹಸೀಲ್ದಾರ್ ದಯಾನಂದ ಮಾತನಾಡಿ, ಕಂದಾಯ ಇಲಾಖೆಯ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದೆ. ತಾಲೂಕು ಹಾಗೂ ಜಿಲ್ಲಾಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಯೋಜನೆಯನ್ನು ರೂಪಿಸಿದೆ ಎಂದರು.
    ಉಪ ತಹಸೀಲ್ದಾರ್ ಮುನಿಯಪ್ಪ, ಸಿಡಿಪಿಒ ರಮ್ಯಾ, ಎಪಿಎಂಸಿ ಕಾರ್ಯದರ್ಶಿ ರೂಪಾ, ಕಾರ್ಮಿಕ ನಿರೀಕ್ಷಕ ರೇಣುಕಾಪ್ರಸಾದ್, ರಾಜಸ್ವ ನಿರೀಕ್ಷಕ ಲೋಕೇಶ್, ವೈದ್ಯರಾದ ಪ್ರತೀಕ್.ಎನ್ ಸ್ವಾಮಿ, ಅರಣ್ಯಾಧಿಕಾರಿ ಸಾವಿತ್ರಿ, ಗ್ರಾಮ ಲೆಕ್ಕಿಗರಾದ ಸುರೇಶ್, ಚೇತನ್ ಇತರರಿದ್ದರು.

    ಪ್ರಚಾರದ ಕೊರತೆ: ಅದಾಲತ್‌ಗೆ ಇಲಾಖೆ ಅಧಿಕಾರಿಗಳು ಸರಿಯಾಗಿ ಪ್ರಚಾರ ಮಾಡದ ಕಾರಣ ಸಾರ್ವಜನಿಕರು ಕುಂದು ಕೊರತೆಗಳೊಂದಿಗೆ ನಿರೀಕ್ಷಿತ ಮಟ್ಟದಲ್ಲಿ ಭಾಗವಹಿಸಲಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ರೀತಿ ಪ್ರಚಾರ ಮಾಡಿ ಅದಾಲತ್ ನಡೆಸಬೇಕು, ಮುಂಚಿತವಾಗಿಯೇ ಸಾರ್ವಜನಿಕರಿಂದ ಅರ್ಜಿ ಪಡೆದು ಅದಾಲತ್ ದಿನ ಪರಿಹಾರ ಸೂಚಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಹಸೀಲ್ದಾರ್‌ಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts