More

    ಸಾಮೂಹಿಕ ವಿವಾಹ ಏ.26ರಂದು

    ಹಾವೇರಿ: ಜಿಲ್ಲೆಯ ಕದರಮಂಡಲಗಿ ದೇವಾಲಯದಲ್ಲಿ ಏ. 26ರಂದು ಸಾಮೂಹಿಕ ವಿವಾಹವನ್ನು ವ್ಯವಸ್ಥಿತವಾಗಿ ಆಯೋಜಿಸಿ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಮುಜರಾಯಿ, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಸಿದ್ಧತೆ ಹಾಗೂ ಮುಜರಾಯಿ ಇಲಾಖೆ ಪ್ರಗತಿ ಪರೀಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಮೇ 24ರಂದು 2ನೇ ಸುತ್ತಿನಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗುವುದು. ರಾಜ್ಯದಲ್ಲಿರುವ ಎ ವರ್ಗದ ನೂರು ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಜಿಲ್ಲೆಯಲ್ಲಿ ಎ ದರ್ಜೆಯ ದೇವಾಲಯಗಳು ಇಲ್ಲದಿರುವುದರಿಂದ ಧಾರ್ವಿುಕ ದತ್ತಿ ಇಲಾಖೆಯಿಂದ ಸಪ್ತಪದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಶಾಸಕರನ್ನು ಸಂರ್ಪಸಿ ಸ್ಥಳ ನಿಗದಿಪಡಿಸಬೇಕು ಎಂದರು.

    ಏ. 26ರಂದು ಕದರಮಂಡಲಗಿಯಲ್ಲಿ ನಡೆಯಲಿರುವ ವಿವಾಹ ಕಾರ್ಯಕ್ರಮದ ಸಿದ್ಧತೆಗೆ ಅಧಿಕಾರಿಗಳು ಕ್ರಮವಹಿಸಬೇಕು. ಮಾ. 27ರಂದು ಅರ್ಜಿ ಸ್ವೀಕರಿಸಲು ಕೊನೆಯ ದಿನವಾಗಿದೆ. ಸಪ್ತಪದಿ ಕಾರ್ಯಕ್ರಮ ಕುರಿತು ಜಿಪಂ, ತಾಪಂ, ಗ್ರಾಪಂ ಕಚೇರಿ, ಸಾರ್ವಜನಿಕ ಸಮಾರಂಭ, ಉತ್ಸವ, ಜಾತ್ರೆಗಳಲ್ಲಿ ಪ್ರಚುರಪಡಿಸಬೇಕು ಎಂದರು.

    ವಿವಾಹವಾಗುವ ಜೋಡಿಗಳಿಗೆ 55 ಸಾವಿರ ರೂ. ಮೊತ್ತದ 8ಗ್ರಾಂ. ಚಿನ್ನದ ತಾಳಿ, ಎರಡು ಚಿನ್ನದ ಗುಂಡು, ವರನಿಗೆ ಶಲ್ಯ, ಪಂಚೆ ಹಾಗೂ ವಧುವಿಗೆ ರೇಷ್ಮೆ ಸೀರೆ ಕೊಡಲಾಗುವುದು ಎಂದರು.

    ಸಭೆಯಲ್ಲಿ ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಜಿಪಂ ಸದಸ್ಯರಾದ ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಂತೋಷ ಕೊಪ್ಪದ, ಮುಜರಾಯಿ ವಿಭಾಗದ ಶಿರಸ್ತೇದಾರ ಅಮೃತ ಪಾಟೀಲ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

    ಹಾವೇರಿಗೆ ಗೋರಕ್ಷಣಾ ಕೇಂದ್ರ: ರಾಜ್ಯದ ನೂರು ಎ ದರ್ಜೆಯ ದೇವಾಲಯಗಳಲ್ಲಿ ಗೋ ರಕ್ಷಣಾ ಕೇಂದ್ರ ತೆರೆಯಲಾಗುವುದು. ಜಿಲ್ಲೆಯ ಜನಪ್ರತಿನಿಧಿಗಳ ಮನವಿ ಮೇರೆಗೆ ಜಿಲ್ಲೆಯಲ್ಲಿಯೂ ಕೇಂದ್ರವನ್ನು ತೆರೆಯಲಾಗುವುದು. ಈ ಉದ್ದೇಶಕ್ಕಾಗಿ ಹತ್ತು ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಗುರುತಿಸಬೇಕು. ಜಿಲ್ಲೆಯಲ್ಲಿ ಎ ದರ್ಜೆ ದೇವಾಲಯಗಳು ಇಲ್ಲದಿದ್ದರೂ ಗೋ ರಕ್ಷಣಾ ಕೇಂದ್ರವನ್ನು ತೆರೆಯಲಾಗುವುದು. ಹಿಂದು ದೇವಾಲಯಗಳ ರಕ್ಷಣೆ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ಮುಂದಿನ ಒಂದೂವರೆ ತಿಂಗಳೊಳಗಾಗಿ ರಾಜ್ಯದ ಎಲ್ಲ ದೇವಾಲಯಗಳಿಗೂ ವಿವಿಧ ಹಂತದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗುವುದು. ಧಾರ್ವಿುಕ ದತ್ತಿ ಕಾಯ್ದೆ ಅನುಸಾರ ಮುಜರಾಯಿ ಇಲಾಖೆಯಲ್ಲಿ ಎ, ಬಿ ಮತ್ತು ಸಿ ದರ್ಜೆಯ ದೇವಾಲಯಗಳಾಗಿ ವರ್ಗೀಕರಿಸಲಾಗಿದೆ. ರಾಜ್ಯದಲ್ಲಿ ಒಂದು ನೂರು ದೇವಾಲಯಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಬಿ ಮತ್ತು ಸಿ ದರ್ಜೆಯ ದೇವಾಲಯಗಳಿಗೂ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಚಿಂತನೆ ನಡೆಸಿದೆ ಎಂದರು.

    ಮೀನುಗಾರರಿಗೆ ಸರ್ಕಾರದ ಪರಿಕರಗಳನ್ನು ಆಯಾ ಕ್ಷೇತ್ರಗಳ ಶಾಸಕರ ಮೂಲಕವೇ ವಿತರಿಸಬೇಕು. ಮೀನುಗಾರಿಕೆ ಕಡಿಮೆ ಇರುವ ಪ್ರದೇಶದಲ್ಲಿ ಮೀನು ಸಾಗಣೆಗೆ ಉತ್ತೇಜನ ನೀಡಲು ಇಲಾಖೆಯಿಂದ ಕೆರೆಗಳ ಪುನಶ್ಚೇತನ ಕೇಂದ್ರ, ಮೀನು ಮರಿಗಳ ಉತ್ಪಾದನೆ ಕೇಂದ್ರ ತೆರೆಯಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts