More

    ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಹಾವನೂರು ವರದಿ

    ಶಿವಮೊಗ್ಗ: ಸ್ವಾತಂತ್ರ್ಯೂರ್ವ ಮತ್ತು ಸ್ವಾತಂತ್ರ್ಯೊತ್ತರ ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತಂದ ಮೊಟ್ಟಮೊದಲ ಪ್ರಯತ್ನವೇ ಹಾವನೂರು ಆಯೋಗದ ವರದಿ ರಚನೆ ಮತ್ತು ಜಾರಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್ ಹೇಳಿದರು.

    ಕುವೆಂಪು ವಿವಿಯಲ್ಲಿ ಗುರುವಾರ ಬೆಂಗಳೂರಿನ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ, ಕುವೆಂಪು ವಿವಿಯ ಒಬಿಸಿ ಘಟಕ ಮತ್ತು ಸಮಾಜಶಾಸ್ತ್ರ ವಿಭಾಗಗಳ ವಿಚಾರ ಸಂಕಿರಣದಲ್ಲಿ ‘ಹಿಂದುಳಿದ ವರ್ಗಗಳ ಕುರಿತ ಹಾವನೂರು ಆಯೋಗದ ವರದಿಯ ಶಿಫಾರಸು ಪರಿಣಾಮ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

    1919ರಲ್ಲಿ ಮಿಲ್ಲರ್ ಆಯೋಗ ಮತ್ತು 1961ರಲ್ಲಿ ನಾಗಣ್ಣಗೌಡ ಆಯೋಗಗಳು ಹಿಂದುಳಿದ ವರ್ಗಗಳ ಕುರಿತು ವರದಿ ಸಲ್ಲಿಸಿದ್ದರೂ ಹಲವು ಲೋಪಗಳಿಂದ ಸಾಮಾಜಿಕ ನ್ಯಾಯ ಅನುಷ್ಠಾನಗೊಂಡಿರಲಿಲ್ಲ. 1975ರಲ್ಲಿ ಸಲ್ಲಿಕೆಯಾದ ಹಾವನೂರು ವರದಿ ವೈಜ್ಞಾನಿಕ ಮಾದರಿಯಲ್ಲಿ ತಯಾರಾಗಿದ್ದು, ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿತು ಎಂದರು.

    ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಿ ಶೋಷಿತ ಸಮುದಾಯಗಳನ್ನು ಮುನ್ನೆಲೆಗೆ ತರಲಾಯಿತು. ಮುಂದೆ ಕೇಂದ್ರದ ಮಂಡಲ್ ಆಯೋಗ ಸಹ ಹಾವನೂರು ವರದಿಯ ಮಾದರಿ ಅನುಕರಿಸಿದ್ದು, ಅದರ ಗುಣಮಟ್ಟ ತಿಳಿಸುತ್ತದೆ ಎಂದು ಹೇಳಿದರು.

    ಹಾವನೂರರು 378 ಹಳ್ಳಿಗಳಿಗೆ ಭೇಟಿ ನೀಡಿ 3.5 ಲಕ್ಷಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿ ತಯಾರಿಸಿದ ವರದಿಯಿಂದ ಕರ್ನಾಟಕದ ಜನಸಮುದಾಯದೊಳಗೆ 1975ರಷ್ಟರಲ್ಲೇ ವ್ಯವಸ್ಥಿತ ಸಾಮಾಜಿಕ ನ್ಯಾಯ ದೊರೆಯುವ ಕಾಲ ಆರಂಭವಾಯಿತು. ಇಂಥದ್ದೆ ಸೌಲಭ್ಯವನ್ನು ಕೇಂದ್ರ ಸರ್ಕಾರ ಮಂಡಲ್ ವರದಿ ಜಾರಿ ಮಾಡುವ ಮೂಲಕ 1990ರಲ್ಲಿ ನೀಡಿತು. ಅದರಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿರುವ ಶೇ.27 ಮೀಸಲಾತಿ ಶೇ. 11-12ರ ಪ್ರಮಾಣದ ಫಲವನ್ನು ದಾಟಿಲ್ಲ ಎಂದು ವಿಷಾದಿಸಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ, 20ನೇ ಶತಮಾನದ ಕೊನೆಯ ಭಾಗದಲ್ಲಿ ಡಿ. ದೇವರಾಜ ಅರಸು ಅವರು ಭೂ ಸುಧಾರಣೆ, ಜೀತಮುಕ್ತ ಕಾಯ್ದೆ, ಮಲಹೊರುವ ಪದ್ಧತಿ ನಿಷೇಧದಂತಹ ಕ್ರಾಂತಿಕಾರಕ ಸುಧಾರಣೆಗಳನ್ನು ಜಾರಿ ಮಾಡುವ ಮೂಲಕ ಸಮಸಮಾಜ ನಿರ್ಮಾಣ ಮಾಡುವಲ್ಲಿ ಹಾವನೂರು ಅವರ ಕೊಡುಗೆಯಿದೆ ಎಂದರು.

    ಡಿ. ದೇವರಾಜು ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ಆರ್. ಅನುರಾಧಾ ಪಟೇಲ್ ಮಾತನಾಡಿ, ಹಿಂದುಳಿದ ವರ್ಗಗಳಡಿ ಕರ್ನಾಟಕದಲ್ಲಿ 1,065 ಜಾತಿಗಳಿದ್ದು, ಅವರನ್ನು ವ್ಯವಸ್ಥಿತವಾಗಿ ಗುರುತಿಸಿ ಸಾಮಾಜಿಕ ಅಸಮತೋಲನ ನಿವಾರಣೆಗೆ ಕಾರಣೀಭೂತವಾದದ್ದು ಹಾವನೂರು ವರದಿ. ಅದರ ಶಿಫಾರಸುಗಳ ಪರಿಣಾಮವೇ ಇಂದು ಮೀಸಲಾತಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇತ್ಯಾದಿ ಫಲಗಳು ದೊರೆಯುತ್ತಿವೆ ಎಂದರು.

    ಆಫ್ರಿಕಾ ಸಂವಿಧಾನ ಪಿತಾಮಹ ಹಾವನೂರು: ಹಾವೇರಿ ಜಿಲ್ಲೆಯ ಹಾವನೂರು ಗ್ರಾಮದ ಶೋಷಿತ ಸಮುದಾಯದಲ್ಲಿ ಜನಿಸಿದ ಎಲ್.ಜಿ.ಹಾವನೂರು ಡಿ. ದೇವರಾಜು ಅರಸು ಸಂಪುಟದಲ್ಲಿ ಕಾನೂನು ಮಂತ್ರಿಯಾಗಿದ್ದರು. ಅವರು 1972-74ರ ನಡುವೆ ತಯಾರಿಸಿದ ಕರ್ನಾಟಕದ ಹಿಂದುಳಿದ ವರ್ಗಗಳ ಕುರಿತ ವರದಿಯು ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು. ರಿಪಬ್ಲಿಕ್ ಆಫ್ ಆಫ್ರಿಕಾ ದೇಶದ ಸಂವಿಧಾನ ರಚನೆ ಕಾರ್ಯವನ್ನು ಹಾವನೂರು ಮಾಡುತ್ತಾರೆ. ಆಫ್ರಿಕಾದ ಸಂವಿಧಾನ ಪಿತಾಮಹ ಎಂದು ಕರೆಯಲಾಗುತ್ತದೆ. ಇಂದಿರಾ ಗಾಂಧಿ ಅವರು ರಚಿಸಿದ 1980ರ ಮಂಡಲ್ ಆಯೋಗವು ಹಾವನೂರು ವರದಿಯನ್ನು ಮಾದರಿಯಾಗಿ ಪರಿಗಣಿಸಿತ್ತು. ಹಾವನೂರರ ವರದಿಯನ್ನು ದೇವರಾಜ್ ಅರಸು ಬೈಬಲ್ ಆಫ್ ಬ್ಯಾಕ್​ವರ್ಡ್ ಕ್ಲಾಸಸ್ ಎಂದು ಕರೆದಿದ್ದಾರೆ ಎಂದು ಕಾರ್ಯಕ್ರಮ ನಂತರದ ಸಂವಾದದಲ್ಲಿ ಎಚ್.ಕಾಂತರಾಜು ಹೇಳಿದರು.

    ಪರೀಕ್ಷಾಂಗ ಕುಲಸಚಿವ ಪ್ರೊ. ವೆಂಕಟೇಶ್ವರುಲು, ಒಬಿಸಿ ವಿಭಾಗದ ಡಾ. ವಿಜಯ್ಕುಮಾರ್, ಸಮಾಜಶಾಸ್ತ್ರ ವಿಭಾಗದ ಡಾ. ಚಂದ್ರಶೇಖರ್, ಆಯೋಗದ ಸದಸ್ಯ ಪ್ರೊ. ಗುರುಲಿಂಗಯ್ಯ ಹಾಜರಿದ್ದರು. ವಿವಿಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳೂ ಮತ್ತು ಸಂಶೋಧನಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts