More

    ಸಾಮಾಜಿಕ ಅಂತರದಲ್ಲಿ ಪಾದರಕ್ಷೆ ಪಾಳೆ

    ಎಂ.ಎಸ್. ಹಿರೇಮಠ ಸಂಶಿ

    ಏನ್ ಮಾಡೋದ್ರೀ ಸಾಹೆಬ್ರ, ಕರೊನಾ ಸಲುವಾಗಿ ಲಾಕ್​ಡೌನ್ ಆದಮ್ಯಾಲ ಬ್ಯಾಂಕಿಗೆ ಬಂದ ರೊಕ್ಕ ತಗೊಳದು ಬಾಳ ಕಷ್ಟ ಆಗೇತ್ರೀ. ಮಾಸಾಶನ ಹಣ ತಗೊಂಡ ಹೋಗಬೇಕಂತ ಬಂದಿನ್ರೀ, ಆದ್ರೆ ಬ್ಯಾಂಕಿನೋರ್ ಹತ್ತ ಗಂಟೆಕ್ ಬರ್ತಾರ. ಅಲ್ಲಿತಕ ಯಾಕ ನಿಲ್ಲೋದ್ ಅಂತ ಹೇಳಿ ನಮ್ಮ ಪಾದರಕ್ಷೆಗಳನ್ ಪಾಳೇಕ್ ಇಟ್ಟ ಕಟ್ಟಿ ಮ್ಯಾಲ ಕುಂತೇವ್ರಿ..!

    ಇವು ಸಂಶಿ ಗ್ರಾಮದ ವಿಜಯ ಬ್ಯಾಂಕಿನ ಎದುರು ಹಿರಿಯರ ನಾಗರಿಕರಿಂದ ಕೇಳಿ ಬಂದ ಮಾತುಗಳು. ಬ್ಯಾಂಕ್​ಗಳಲ್ಲಿ ವ್ಯವಹಾರ ಮಾಡಲು ತೆರಳುವ ಪ್ರತಿಯೊಬ್ಬ ಗ್ರಾಹಕರು ತಮ್ಮ ಸರದಿಗಾಗಿ ನಿತ್ಯ ಬ್ಯಾಂಕ್ ಮುಂದೆ ಸಾಮಾಜಿಕ ಅಂತರದಲ್ಲಿ ಪಾದರಕ್ಷೆ ಇಟ್ಟು ಕಾಯುವ ದೃಶ್ಯ ಕಂಡು ಬರುತ್ತಿದೆ.

    ಕರೊನಾ ವೈರಸ್ ಭೀತಿಯಿಂದಾಗಿ ಎಲ್ಲೆಡೆ ಬ್ಯಾಂಕ್​ಗಳಲ್ಲಿಗ ನಿರ್ದಿಷ್ಟ ಗ್ರಾಹಕರಿಗೆ ಒಳಗಡೆ ಅವಕಾಶ ಕಲ್ಪಿಸಿ ಬಹುತೇಕರಿಗೆ ಹೊರಗೆ ನಿಲ್ಲಿಸಿ ವ್ಯವಹಾರ ಮಾಡಲಾಗುತ್ತಿದೆ. ಇದರಿಂದ ಅನಿವಾರ್ಯವಾಗಿ ಗ್ರಾಹಕರು ಬಿಸಿಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಿದೆ. ಹೀಗಾಗಿ ಬ್ಯಾಂಕ್ ಮುಂದೆ ಒಂದು ಮೀಟರ್ ಅಂತರದಲ್ಲಿ ಹಾಕಲಾಗಿರುವ ಬಾಕ್ಸ್​ನಲ್ಲಿ ಪಾದರಕ್ಷೆ ಇಟ್ಟು ಕಾಯುವುದು ಅನಿವಾರ್ಯವಾಗಿದೆ.

    ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಒಳಗೆ ಹೆಚ್ಚು ಜನ ಇರಬಾರದು ಎಂಬ ಕಾರಣಕ್ಕಾಗಿ ಬ್ಯಾಂಕ್ ಆಡಳಿತ ಮಂಡಳಿಗಳು ನಿರ್ದೇಶನ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

    ಸಂಶಿಯ ಕೆಸಿಸಿ ಮತ್ತು ವಿಜಯಾ ಬ್ಯಾಂಕ್​ಗಳಲ್ಲಿ ಗ್ರಾಮ, ಹೊಸಳ್ಳಿ, ಪಶುಪತಿಹಾಳ ಸೇರಿ ಅಂದಾಜು 30,000 ಕ್ಕೂ ಅಧಿಕ ಖಾತೆದಾರರಿದ್ದಾರೆ. ಹಾಗಾಗಿ ಗ್ರಾಹಕರು ಒಮ್ಮೇಲೆ ಬ್ಯಾಂಕಿಗೆ ಬಂದರೆ ಜನದಟ್ಟಣೆಯಾಗುತ್ತದೆ. ಹೀಗಾಗಿ ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ವ್ಯವಸ್ಥಿತ ಕ್ರಮ ಅನುಸರಿಸಲಾಗಿದೆ.

    ಟೋಕನ್ ವ್ಯವಸ್ಥೆ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಟೋಕನ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ 300 ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ. ವಿಜಯ ಬ್ಯಾಂಕಿನಲ್ಲಿ ವ್ಯವಸ್ಥಾಪಕರು ಸೇರಿ ಎಂಟು ಜನ ಸಿಬ್ಬಂದಿ ಇದ್ದಾರೆ. ಗ್ರಾಹಕರು ಒಬ್ಬರ ನಂತರ ಒಬ್ಬರು ವ್ಯವಹರಿಸಲು ಆಸನ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಧರಿಸಿ ಬ್ಯಾಂಕಿಗೆ ಬರುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ. ಎಲ್ಲರಿಗೂ ಸಾನಿಟೈಸರ್ ನೀಡಿ ವ್ಯವಹರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

    ಥರ್ಮಲ್ ಸ್ಕ್ಯಾನಿಂಗ್: ಬ್ಯಾಂಕಿನಲ್ಲಿ ಒಳ ಬರುವ ಎಲ್ಲ ಗ್ರಾಹಕರನ್ನು ಮೊದಲಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ಮಾಡಿ, ಬಳಿಕ ವ್ಯವಹಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

    ಬ್ಯಾಂಕ್ ಮುಂದಿಲ್ಲ ನೆರಳಿನ ವ್ಯವಸ್ಥೆ: ಮೊದಲೆಲ್ಲ ಗ್ರಾಹಕರು ಗುಂಪು ಗುಂಪಾಗಿಯೇ ಸೇರಿ ಬ್ಯಾಂಕಿನಲ್ಲಿ ವ್ಯವಹರಿಸುತ್ತಿದ್ದರಿಂದ ಹೊರಗಡೆ ನೆರಳು ಒದಗಿಸುವ ಅಗತ್ಯವಿರಲಿಲ್ಲ. ಆದರೀಗ ಕರೊನಾದಿಂದ ಸಾಮಾಜಿಕ ಅಂತರಕ್ಕೆ ಮನ್ನಣೆ ನೀಡಲಾಗಿದೆ. ಹಾಗಾಗಿ ನಿರ್ದಿಷ್ಟ ಜನರಿಗೆ ಮಾತ್ರ ಒಳಗಡೆ ಪ್ರವೇಶ ಕಲ್ಪಿಸಿರುವುದರಿಂದ ಹೊರಗೆ ಉಳಿದ ಗ್ರಾಹಕರು ಅಕ್ಕಪಕ್ಕದ ಮನೆ, ಅಂಗಡಿ ಕಟ್ಟೆಗಳ ಮೇಲೆ ಕುಳಿತುಕೊಳ್ಳಬೇಕಿದೆ. ವಯಸ್ಕರು ಹೇಗೋ ಬಿಸಿಲಿನಲ್ಲಿ ನಿಂತು ವ್ಯವಹಾರ ಮುಗಿಸಿ ಹೋಗುತ್ತಾರೆ. ಆದರೆ, ಮಾಸಿಕ ಮಾಸಾಶನ ಪಡೆಯಲು ಬರುವ ಹಿರಿಯ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.

    ಕರೊನಾ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗ್ರಾಹಕರಿಗೆ ಟೋಕನ್ ಮತ್ತು ಥರ್ಮಲ್ ಸ್ಕಾ್ಯನಿಂಗ್ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕ್ ಮುಂದೆ ಮೀಟರ್ ಅಂತರದಲ್ಲಿ ಬಾಕ್ಸ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. ಮುಂಭಾಗದಲ್ಲಿ ಶ್ಯಾಮಿಯಾನ್ ಹಾಕಿಸುವ ಬಗೆಗೆ ಚಿಂತನೆ ಇದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದ್. ಗ್ರಾಹಕರು ಸಹಕಾರ ನೀಡುತ್ತಿದ್ದಾರೆ.
    | ನಿತೇಶ ಶಣೈವ್ಯವಸ್ಥಾಪಕ ವಿಜಯ ಬ್ಯಾಂಕ್ ಸಂಶಿ

    ಹಣ ಪಡೆಯಲು ಬ್ಯಾಂಕಿಗೆ ಬಂದರೆ ಗಂಟೆಗಟ್ಟಲೆ ಬಿಸಿಲಿನಲ್ಲಿ ಸರದಿಯಲ್ಲಿ ನಿಲ್ಲಬೇಕು. ಬಿಸಿಲಿನಲ್ಲಿ ನಿಲ್ಲಲಾಗದೆ ಬ್ಯಾಂಕ್ ಬಳಿ ಇರುವ ಮನೆಗಳ ಕಟ್ಟೆಗಳ ಮೇಲೆ ನೆರಳಿಗೆ ನಿಂತು ಸರದಿಯಲ್ಲಿ ಕಾಯುತ್ತಿದ್ದೇನೆ.
    | ಸಿದ್ಧಪ್ಪ ಗರಡ್ಡಿ ಹಿರಿಯ ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts