More

    ಸಾಧನೆ, ಸೌಲಭ್ಯಕ್ಕೂ ಸ್ಯಾಟ್ಸ್​ ಸೈ

    ಬೆಳಗಾವಿ: ಜಾಗೃತಿ ಕೊರತೆಯಿಂದಾಗಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದ ಶಾಲಾ&ವಿದ್ಯಾರ್ಥಿಗಳಿಗೆ, ಮಕ್ಕಳ ಶೈಕ್ಷಣಿಕ ಸುಧಾರಣೆ ದಾಖಲೀಕರಣಕ್ಕೆ ಪರದಾಡುತ್ತಿದ್ದ ಶಿಕ್ಷಕರಿಗೆ ಹಾಗೂ ಮಕ್ಕಳನ್ನು ಮತ್ತೊಂದು ಶಾಲೆಗೆ ದಾಖಲಿಸುವುದಕ್ಕಾಗಿ ಅಲೆದಾಡುತ್ತಿದ್ದ ಪಾಲಕರಿಗೆ ಸ್ಯಾಟ್ಸ್​ (ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್​ ವ್ಯವಸ್ಥೆ) ವರದಾನವಾಗಿ ಪರಿಣಮಿಸಿದೆ.

    ಆರು ವರ್ಷಗಳಿಂದ ಅನುಷ್ಠಾನದಲ್ಲಿರುವ “ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್​ ವ್ಯವಸ್ಥೆ’ ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಿದ್ದು, ವಿದ್ಯಾರ್ಥಿಗಳ ಸಾಧನೆ ತಿಳಿಯಲು ಮಾತ್ರವಲ್ಲ, ಅವರಿಗೆ ಯಾವೆಲ್ಲ ಸರ್ಕಾರಿ ಸೌಲಭ್ಯಗಳು ಎಷ್ಟರ ಮಟ್ಟಿಗೆ ತಲುಪುತ್ತಿವೆ ಎಂಬುದನ್ನೂ ತಿಳಿಸಿಕೊಡುತ್ತಿದೆ. ಆ ಮೂಲಕ ಪದೇ ಪದೆ ಯೋಜನೆಯ ಫಲಾನುಭವಿಗಳಾದವರನ್ನೂ ಟ್ರಾಕ್​ ಮಾಡಿ, ಅದನ್ನು ಸೌಲಭ್ಯದಿಂದ ವಂಚಿತಗೊಳ್ಳಲಿದ್ದ ವಿದ್ಯಾರ್ಥಿಗಳಿಗೆ ವಿತರಿಸಲು ಸಹಾಯಕವಾಗಿದೆ.

    ರಾಜ್ಯಾದ್ಯಂತ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ವಿತರಿಸಲಾಗುವ 9 ಅಂಕಿಗಳ ಗುರುತಿನ ಸಂಖ್ಯೆಯಿಂದ ಆಯಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಾಲೆ ಹಾಗೂ ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳುತ್ತಿರುವ ಮಾಹಿತಿ ಪಡೆಯಬಹುದಾಗಿದೆ. ಸರ್ಕಾರ ವಿತರಿಸುವ ಸೌಲಭ್ಯಗಳಿಗೆ ಇದೀಗ ಸ್ಯಾಟ್ಸ್​ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಲಾಗಿದೆ.

    ಹಾಜರಾತಿ, ಶಿಷ್ಯವೇತನ, ಪಠ್ಯಪುಸ್ತಕ ವಿತರಣೆ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯದ ಹಾಲು, ಆರೋಗ್ಯ ತಪಾಸಣೆ, ಬೈಸಿಕಲ್​, ಸಮವಸ ಹಾಗೂ ಅಂಗವಿಕಲ ಮಕ್ಕಳಿಗೆ ವೀಲ್​ಚೇರ್​ ವಿತರಣೆಗೆ ಸೇರಿದಂತೆ ಇಲಾಖೆಯ ಎಲ್ಲ ಉಪಕ್ರಮಗಳ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಿ, ಒಬ್ಬರಿಗೇ ಸೌಲಭ್ಯಗಳ ಪುನರಾವರ್ತನೆ ಆಗದಂತೆ ಹಾಗೂ ಸೌಲಭ್ಯ ವಿತರಿಸುವಲ್ಲಿ ಎನ್​ಜಿಒಗಳು ಮಾಡುತ್ತಿರುವ ಅವ್ಯವಹಾರಕ್ಕೂ ಕಡಿವಾಣ ಹಾಕಲಾಗುತ್ತಿದೆ. ಟಿಸಿ ವರ್ಗಾವಣೆಯೂ ಸ್ಯಾಟ್ಸ್​ ಮೂಲಕವೇ ಆಗುವುದರಿಂದ ಶಿಕ್ಷಕರು ಹಾಗೂ ಪಾಲಕರ ಸಮಯ ಹಾಗೂ ಶಕ್ತಿ ಅಪವ್ಯಯ ತಪ್ಪಿಸಿದೆ ಎನ್ನುತ್ತಾರೆ ಬೆಳಗಾವಿ ಜಿಲ್ಲಾ ಉಪನಿರ್ದೇಶಕ ಕಚೇರಿ ಸಿಬ್ಬಂದಿ.

    ಯುನಿಕ್​ ಡೈಸ್​ ಸಂಖ್ಯೆ: ಸ್ಯಾಟ್ಸ್​ ಸಂಖ್ಯೆಯಂತೆಯೇ ಶಾಲೆಗಳಿಗೂ ಡೈಸ್​ ಸಂಖ್ಯೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕಾ ಅವಧಿಯ ವೈಯಕ್ತಿಕ ಮಾಹಿತಿ, ದಾಖಲಾತಿ, ಹಾಜರಾತಿ, ಸೌಲಭ್ಯ, ವರ್ಗಾವಣೆ, ಶಾಲೆಯ ಶೈಕ್ಷಣಿಕ ಪ್ರಗತಿ ಕುರಿತು, ಶಾಲೆಯಲ್ಲಿನ ಸೌಲಭ್ಯ, ಶಿಕ್ಷಕರ ಸಂಖ್ಯೆ ಸೇರಿದಂತೆ ಸ್ಕೂಲ್​ ರಿಪೋರ್ಟ್​ ಕಾರ್ಡ್​ ಸಹ ಲಭ್ಯವಿದೆ. ಶಾಲೆಗಳನ್ನು ಉನ್ನತಿಕರಣಕ್ಕೂ ಇದೇ ಡೈಸ್​ ಸಂಖ್ಯೆ ಮೂಲಕ ದತ್ತಾಂಶ ವಿಶ್ಲೇಷಣೆಗೊಳಪಡಿಸಲಾಗುತ್ತದೆ. ಕೆಲ ಪುಸ್ತಕಗಳು ಇನ್ನೂ ವಿತರಣೆ ಆಗದ ಕಾರಣ ಸ್ಯಾಟ್ಸ್​ನಲ್ಲಿ ನಿಖರ ಮಾಹಿತಿ, ಲಭ್ಯವಾಗುತ್ತಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.

    300 ಮಹಾ ವಿದ್ಯಾರ್ಥಿಗಳು ರಾಜ್ಯಕ್ಕೆ: ಬೆಳಗಾವಿ ವಿಭಾಗದಲ್ಲಿ ಮೊದಲ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 2022ರಲ್ಲಿ 3.91 ಲಕ್ಷ ಹಾಗೂ 22&23 ಶೈಕ್ಷಣಿಕ ವರ್ಷದಲ್ಲಿ 3.85 ಲಕ್ಷ ವಿದ್ಯಾರ್ಥಿಗಳಿಗೆ ಸ್ಯಾಟ್ಸ್​ ಸಂಖ್ಯೆ ವಿತರಿಸಲಾಗಿದೆ. 2021&22ರ ಸಾಲಿನಲ್ಲಿ ಗಡಿ ಜಿಲ್ಲೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳು ಹೊರ ರಾಜ್ಯದ ಶಾಲೆಗಳಲ್ಲಿ ತಮ್ಮ ಮುಂದಿನ ತರಗತಿ ಪ್ರವೇಶಾತಿ ಪಡೆದಿದ್ದರು. ಅದರಂತೆ ಈ ಬಾರಿ ನೆರೆಯ ಮಹಾರಾಷ್ಟ್ರದ ಸುಮಾರು 300 ಜನ ವಿದ್ಯಾರ್ಥಿಗಳು ಬೆಳಗಾವಿ ವಿಭಾಗದ ಶಾಲೆಗಳಲ್ಲಿ ಹೊರರಾಜ್ಯದಿಂದ ಬಂದು ಅಕ್ಷರಾಭ್ಯಾಸ ನಡೆಸಿರುವುದು ಸ್ಯಾಟ್ಸ್​ ದತ್ತಾಂಶ ಬಹಿರಂಗಪಡಿಸಿದೆ. ನಿಯಮಿತ ಹಾಗೂ ಪಾರದರ್ಶಕವಾಗಿ ಶೈಕ್ಷಣಿಕ ಸೌಲಭ್ಯ ಒದಗಿಸಲು ಇದೊಂದು ಉತ್ತಮ ತಂತ್ರಾಂಶ. ಹೊರದೇಶದಲ್ಲಿನ ಶಾಲೆಗಳಲ್ಲೂ ರಾಜ್ಯ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಸ್ಯಾಟ್ಸ್​ ಸಂಖ್ಯೆ ನಮೂದಿಸಿದರೆ ಅವರ ಶೈಕ್ಷಣಿಕ ಮಾಹಿತಿ ಸಿಗಲಿದೆ.

    ವಿದ್ಯಾರ್ಥಿಗಳು ಎರಡೆರಡು ಶಾಲೆಗಳಲ್ಲಿ ಪ್ರವೇಶಾತಿ ಪಡೆಯುವುದಕ್ಕೂ ಸ್ಯಾಟ್ಸ್​ ದತ್ತಾಂಶದಿಂದ ಕಡಿವಾಣ ಬಿದ್ದಿದೆ.
    ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯ ಸಾಧನೆ ಆಯಾ ತರಗತಿವಾರು ಸ್ಯಾಟ್ಸ್​ನಲ್ಲಿ ನಮೂದಿಸಲಾಗುತ್ತಿದೆ. ಇದರಿಂದ ಸೌಲಭ್ಯಗಳ ಪುನರಾವರ್ತನೆ ತಡೆಯುವುದರ ಸಮಯದ ಉಳಿತಾಯವಾಗುತ್ತಿದೆ.
    | ಎಸ್​.ಎಸ್​.ಬಿರಾದಾರ
    ಅಪರ ಆಯುಕ್ತ, ಧಾರವಾಡ ವಲಯ

    | ಶಿವಾನಂದ ಕಲ್ಲೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts