More

    ಸಾಧನೆ ಮುಂದಿಟ್ಟು ಮತ ಕೇಳಿ

    ಮಂಡ್ಯ: ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷದವರು ನಿಮ್ಮ ಸಾಧನೆ ಇಟ್ಟು ಮತ ಕೇಳಿ. ಅದನ್ನು ಬಿಟ್ಟು ಪ್ರಚೋದನೆಗೊಳಿಸು ವಂತಹ ಹೇಳಿಕೆ ನೀಡುವುದು ಬೇಡ ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ವಾಗ್ದಾಳಿ ನಡೆಸಿದರು.
    ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಗ್ರಾಮಸ್ಥರು ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಹಾಗೂ ವಿವಿಧ ಪಕ್ಷದ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದುಡ್ಡಿಗಾಗಿ ದುದ್ದ ಅಲ್ಲ. ಸ್ವಾಭಿಮಾನಕ್ಕೂ ಬದ್ಧ, ಸಮರಕ್ಕೂ ಸಿದ್ಧ ಸ್ಲೋಗನ್ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿರುವವರು ನಾಲಗೆ ಹಿಡಿತ ಇಟ್ಟುಕೊಂಡು ರಾಜಕಾರಣ ಮಾಡಬೇಕು ಎಂದು ಹರಿಹಾಯ್ದರು.
    ದುದ್ದ ಹೋಬಳಿಯ ಜನ ನನ್ನಂತ ನೂರಾರು ಜನಕ್ಕೆ ಪ್ರತಿನಿತ್ಯ ರಾಜಕೀಯ ಪಾಠ ಹೇಳುತ್ತಾರೆ. ಆದ್ದರಿಂದ ನಿಮ್ಮಂತವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಮುಂದೆ ಇರುವುದು ಅಭಿವೃದ್ಧಿ ಅಷ್ಟೇ. ಸಾವಿರ ಜನ ಸಾವಿರ ಮಾತನಾಡಲಿ, ಅದರ ಅಗತ್ಯ ಇಲ್ಲ. ರಾಜಕೀಯ ಬದಲಾವಣೆ ಆಗಬೇಕಾದರೆ ದುದ್ದ ಹೋಬಳಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಹುಳ್ಳೇನಹಳ್ಳಿ ಗ್ರಾಮದ ಮಹಾಜನತೆ ಬಹುಮತ ಕೊಟ್ಟು ಗೆಲ್ಲಿಸುವ ಮೂಲಕ ನಾಂದಿ ಹಾಡಬೇಕು ಎಂದು ಹೇಳಿದರು.
    ನನ್ನ ರಾಜಕೀಯ ಜೀವನದಲ್ಲಿ ಯಾರ ಹತ್ತಿರ ಲಂಚ ಪಡೆದಿದ್ದೇನೆಂದು ಹೇಳಿಸಲಿ. ಮೂರು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯ, ನಾನು ಮೂರು ಬಾರಿ ಶಾಸಕ ಹಾಗೂ ಲೋಕಸಭಾ ಸದಸ್ಯ, ಸಚಿವರಾಗಿ ಕೆಲಸ ನಿರ್ವಹಿಸಿದ್ದೇನೆ. ಯಾರ ಹತ್ತಿರ ಬೆರಳು ತೋರಿಸದೆ ಇರುವ ರೀತಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇನೆ. ನನ್ನ ಸಂಪಾದನೆ ಮಾಡಿದ ಹಣದಲ್ಲಿ ಶೇ.15 ರಿಂದ 20 ಭಾಗವನ್ನು ಪ್ರತಿನಿತ್ಯ ಜನರಿಗೆ ಖರ್ಚು ಮಾಡಿದ್ದೇವೆ. ನನ್ನ ರಾಜಕೀಯದ ಯೋಗ್ಯತೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹತ್ತಿರ ನಿಂತು ಕೇಳಿ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.
    ಏ.18ರಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪಾಂಡವಪುರದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತೆರಳಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನಂತರ ಪಾಂಡವ ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ರಾಜ್ಯ ನಾಯಕರು ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

    ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಬಿ.ಬೆಟ್ಟಸ್ವಾಮಿ, ಮುಖಂಡರಾದ ಹುಳ್ಳೇನಹಳ್ಳಿ ನಾಗರಾಜು, ಜಯಶಂಕರ್, ಯೋಗೇಶ್, ರೇಖಾ ಸುರೇಶ್, ಗಾಯತ್ರಿ ಇತರರಿದ್ದರು. ಇದೇ ವೇಳೆ ಹುಳ್ಳೇನಹಳ್ಳಿ ಗ್ರಾಮದ ಶ್ಯಾಮ್ ಸುಂದರ್ ಮತ್ತು ಅವರ ಬೆಂಬಲಿಗರು ರೈತ ಸಂಘ ತೊರೆದು ಶಾಸಕ ಸಿ.ಎಸ್. ಪುಟ್ಟರಾಜು ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts