More

    ಸಾಧನೆಗೂ ಮುನ್ನ ಗುರಿಯ ಸ್ಪಷ್ಟತೆ ಇರಲಿ

    ಗದಗ: ಶಿಕ್ಷಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಶಿಕ್ಷಣ ನೀಡಬೇಕು. ಪಾಠ ಬೋಧನೆ ಮೊದಲು ಮಕ್ಕಳ ಮನೋಭೂಮಿಕೆ, ಆಸಕ್ತಿಯ ಬಗ್ಗೆ ತಿಳಿದುಕೊಂಡಾಗ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ ಹೇಳಿದರು.

    ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಎಸ್​ಎಸ್​ಎಲ್​ಸಿ ಉತ್ತಮ ಫಲಿತಾಂಶಕ್ಕಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಹಲವು ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರತಿ ವ್ಯಕ್ತಿಯ ಜೀವನದಲ್ಲಿ ಪ್ರೌಢ ಶಿಕ್ಷಣ ಮಹತ್ವದ್ದಾಗಿದೆ. ಯಾವುದೇ ಸಾಧನೆಗೂ ಮುನ್ನ ಗುರಿಯ ಬಗ್ಗೆ ಸ್ಪಷ್ಟ ಅರಿವಿರಬೇಕು. ಶಾಲೆಯ ಮುನ್ನೋಟದ ಬಗ್ಗೆ ಮುಖ್ಯ ಶಿಕ್ಷಕರು ಸ್ಪಷ್ಟ ಚಿತ್ರಣ ಹೊಂದಿರಬೇಕು. ಸಾಮಾಜಿಕ ಪಿಡುಗುಗಳಿಗೆ, ದುಶ್ಚಟಗಳಿಗೆ ಮಕ್ಕಳು ಒಳಗಾಗದಂತೆ ಶಿಕ್ಷಕರು ಮತ್ತು ಪಾಲಕರು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ 285 ಪ್ರೌಢಶಾಲೆಗಳಲ್ಲಿ ಬಾಲಕ, ಬಾಲಕಿಯರು ಸೇರಿ 13,404 ವಿದ್ಯಾರ್ಥಿಗಳು ಇದ್ದಾರೆ ಎಂದರು.

    ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ 4 ಸಾವಿರ ಮಕ್ಕಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಡಿ. 1ರಿಂದ ಆರಂಭಗೊಂಡ ಓದಿನ ಮನೆಯಲ್ಲಿ 4500 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪರೀಕ್ಷಾ ಭಯ ನಿವಾರಣೆಗಾಗಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ಜಿಲ್ಲಾ ಡಯಟ್ ಉಪನ್ಯಾಸಕ ಎಸ್.ಜಿ. ಗಾಂಜಿ, ಜಿಲ್ಲೆಯ ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು ಹಾಗೂ ವಿವಿಧ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಸಭೆಯಲ್ಲಿ ಭಾಗವಹಿಸಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts