More

    ಸಾಧಕ ಕೃಷಿಕ ಹೊಸಕೊಪ್ಪದ ನಿಂಗಪ್ಪ

    ಗಿರೀಶ ದೇಶಪಾಂಡೆ ಹಾನಗಲ್ಲ

    ಕೃಷಿಯಲ್ಲಿ ಸಾಧನೆ ಮಾಡುವುದು ಇಂದು ಕಷ್ಟಕರ. ಅತಿವೃಷ್ಟಿ, ಬರಗಾಲ, ವಾತಾವರಣದಲ್ಲಿಯ ವೈಪರೀತ್ಯ… ಹೀಗೆ ಹತ್ತು ಹಲವು ಸಮಸ್ಯೆಗಳನ್ನು ದಾಟಿ ಹರ ಸಾಹಸ ಮಾಡಿದರೂ ಯಶಸ್ಸು ಕಾಣುವುದು ಸುಲಭವಲ್ಲ. ಪರಿಸ್ಥಿತಿ ಹೀಗಿರುವಾಗ ಸರ್ಕಾರಿ ಉದ್ಯೋಗದಲ್ಲಿದ್ದುಕೊಂಡು, ಉಳಿದ ಸಮಯವನ್ನು ತೋಟಗಾರಿಕೆ ಮತ್ತು ಕೃಷಿ ಕಾರ್ಯಗಳಿಗೆ ವಿನಿಯೋಗಿಸಿ ಸಫಲರಾದ ತಾಲೂಕಿನ ಹೊಸಕೊಪ್ಪ ಗ್ರಾಮದ ನಿಂಗಪ್ಪ ಹುಡೇದವರ ಮಾದರಿಯಾಗಿದ್ದಾರೆ.

    ಕಂದಾಯ ಇಲಾಖೆಯ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ನಿಂಗಪ್ಪ, ಪೂರ್ವಜರಿಂದ ಬಂದಿರುವ 2.04 ಎಕರೆ ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಕೃಷಿಯನ್ನು ಉಪಜೀವನಕ್ಕಾಗಿ ಮಾಡದೇ, ಕೃಷಿಯನ್ನು ಉದ್ಯಮವನ್ನಾಗಿ ಮಾರ್ಪಡಿಸಿದ್ದರಿಂದ ಹೆಚ್ಚು ಆದಾಯ ಕಾಣುತ್ತಿದ್ದಾರೆ. ಎರಡು ಮೂರು ಕಡೆಗಳಲ್ಲಿ ಹಂಚಿ ಹೋಗಿದ್ದ ಪಿತ್ರಾರ್ಜಿತ ಜಮೀನನ್ನು ಚಿಕ್ಕಪ್ಪನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಒಂದೇ ಕಡೆ ಇಬ್ಬರಿಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

    ಏನೇನು ಬೆಳೆದಿದ್ದಾರೆ? :

    ಒಂದು ಎಕರೆಯಲ್ಲಿ ಅಡಕೆ ತೋಟ ಮಾಡಿದ್ದು, 3 ವರ್ಷದ ಅಡಕೆ ಮರಗಳಲ್ಲಿ ಅಲ್ಲಲ್ಲಿ ಹಿಂಗಾರು ಬಿಡಲು ಆರಂಭವಾಗಿದೆ. ಇದರಲ್ಲಿ ಮಧ್ಯಂತರ ಬೆಳೆಗಳಾಗಿ ಕಳೆದ ವರ್ಷ ಶುಂಠಿ ಬೆಳೆದಿದ್ದರು. ಅಡಕೆ ಬೆಳೆಯಲು ಜೌಳು ನಿಯಂತ್ರಣಕ್ಕಾಗಿ ಬಸಿಗಾಲುವೆ ನಿರ್ವಿುಸಿ, ಶುಂಠಿ ಬೆಳೆದಿದ್ದರಿಂದ ಹೆಚ್ಚು ಲಾಭ ಬಂದಿದೆ. ಅಡಕೆಯೂ ಸಮೃದ್ಧವಾಗಿ ಬೆಳೆದುನಿಲ್ಲಲು ಸಾಧ್ಯವಾಗಿದೆ. ನಿಂಗಪ್ಪ ತನ್ನ ತಂದೆ ಅರ್ಜುನಪ್ಪ ಅವರ ಸಹಕಾರದೊಂದಿಗೆ ಆಕಳುಗಳನ್ನು ಸಾಕಿದ್ದು, ಕೊಟ್ಟಿಗೆ ಗೊಬ್ಬರವನ್ನೇ ಅವಲಂಬಿಸಿ ಬೇಸಾಯ ಮಾಡುತ್ತಿದ್ದಾರೆ.

    ಒಂದು ಎಕರೆ ಪ್ರದೇಶದಲ್ಲಿ 120 ಕ್ವಿಂಟಾಲ್ ಶುಂಠಿ ಬೆಳೆದು 4 ಲಕ್ಷ ರೂಪಾಯಿ ಆದಾಯ ಪಡೆದು ಸಾಧನೆ ಮಾಡಿದ್ದಾರೆ. ಪ್ರಸ್ತುತ ವರ್ಷ ನುಗ್ಗೆ, ಹಸಿಮೆಣಸಿನಕಾಯಿ, ಟೊಮೆಟೋ, ಬದನೆ ಸೇರಿದಂತೆ ವಿವಿಧ ತರಕಾರಿಗಳನ್ನೂ ಬೆಳೆದಿದ್ದಾರೆ. ತೋಟದ ಬದುವಿನಲ್ಲಿ ಲಿಂಬೆ ಮತ್ತು ತೆಂಗಿನಗಿಡಗಳನ್ನೂ ಹಚ್ಚಿದ್ದಾರೆ. ದೀರ್ಘಾವಧಿ ಬೆಳೆಯಾದ ಅಡಕೆಯಲ್ಲಿ ಮಧ್ಯಂತರ ಬೆಳೆಯಾಗಿ ಬೆಳೆದಿರುವ ಹಸಿಮೆಣಸಿನಕಾಯಿಯಿಂದ ರೈತ ನಿಂಗಪ್ಪ ಒಂದು ಲಕ್ಷ ರೂ.ಗಳಷ್ಟು ಆದಾಯ ನಿರೀಕ್ಷಿಸುತ್ತಿದ್ದಾರೆ. ಮೆಣಸಿನ ಗಿಡಗಳಲ್ಲಿ ಕಳೆ ನಿಯಂತ್ರಣಕ್ಕಾಗಿ ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯನ್ನು ಅಳವಡಿಸಿ, ನೀರುಣಿಸಲು ಹನಿ ನೀರಾವರಿ ಪದ್ಧತಿ ಸಂಯೋಜಿಸಿದ್ದಾರೆ. ಇನ್ನುಳಿದ ಒಂದು ಎಕರೆ ಜಮೀನಿನಲ್ಲಿ ಏಪ್ರಿಲ್ ತಿಂಗಳಲ್ಲಿ ಅಡಕೆ ಮತ್ತು ಶುಂಠಿ ನಾಟಿ ಮಾಡಲು ಪೂರ್ವ ಸಿದ್ಧತೆ ಕೈಗೊಂಡಿರುವ ರೈತ ನಿಂಗಪ್ಪ, ಸದ್ಯ ಈ ಜಮೀನನ್ನು ಬೀಳುಬಿಡದೆ, ಕಲ್ಲಂಗಡಿ ಬೆಳೆದಿದ್ದು, 50 ಸಾವಿರ ರೂ. ಆದಾಯದ ನಿರೀಕ್ಷೆ ಹೊಂದಿದ್ದಾರೆ.

    ನಿಂಗಪ್ಪ ಚಾಲಕ ವೃತ್ತಿಯಲ್ಲಿದ್ದರೂ, ಪ್ರವೃತ್ತಿಯಲ್ಲಿ ರೈತನಾಗಿದ್ದುದು ಅವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts