More

    ಸಾಗರ ಕೋರ್ಟ್ ಜಾಗ ಸ್ವಾಧೀನಕ್ಕೆ ವಿರೋಧ; ಹೆದ್ದಾರಿ ಪ್ರಾಧಿಕಾರದ ವಿರುದ್ಧ ಮಾ.2ಕ್ಕೆ ವಕೀಲರ ಸಂಘದ ಪ್ರತಿಭಟನೆ

    ಸಾಗರ: ನಗರದ ಬಿ.ಎಚ್.ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ನ್ಯಾಯಾಲಯದ ಪಕ್ಕದಲ್ಲಿರುವ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ನಿರ್ಧಾರವನ್ನು ಖಂಡಿಸಿ ಮಾ.2ರಂದು ವಕೀಲರ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಕೀಲರ ಸಂಘದ ಉಪಾಧ್ಯಕ್ಷ ಎಚ್.ಆರ್.ಶ್ರೀಧರ್ ತಿಳಿಸಿದರು.
    ಸಾಗರದ ನ್ಯಾಯಾಲಯ ಆವರಣದಲ್ಲಿ ಸೋಮವಾರ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರಾಧಿಕಾರದ ಅವೈಜ್ಞಾನಿಕ ನಿರ್ಧಾರದ ವಿರುದ್ಧ ಕರೆಯಲಾಗಿದ್ದ ವಕೀಲರ ಸಭೆಯಲ್ಲಿ ಅವರು ಮಾತನಾಡಿದರು.
    ಸಾಗರ ನ್ಯಾಯಾಲಯಕ್ಕೆ 125 ವರ್ಷಗಳ ಇತಿಹಾಸವಿದೆ. ಐದು ವಿವಿಧ ನ್ಯಾಯಾಲಯ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು ನ್ಯಾಯಾಲಯ ನಿರ್ವಹಣೆ, ಪಾರ್ಕಿಂಗ್ ಇತರ ಕೆಲಸಕ್ಕೆ ಇರುವ ಜಾಗ ಕಡಿಮೆಯಾಗುತ್ತಿದೆ. ಇದೀಗ ಹೆದ್ದಾರಿ ಅಗಲೀಕರಣದ ನೆಪದಲ್ಲಿ ನ್ಯಾಯಾಲಯದ ಜಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರಾಧಿಕಾರದ ಕ್ರಮ ಖಂಡನೀಯ. ರಸ್ತೆ ಅಗಲೀಕರಣ ಮಾಡುವಾಗ ಎರಡೂ ಭಾಗದಲ್ಲೂ ಭೂಸ್ವಾಧೀನ ಮಾಡಿಕೊಳ್ಳಬೇಕು. ಆದರೆ ಪ್ರಾಧಿಕಾರ ಕೇವಲ ನ್ಯಾಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪೊಲೀಸ್ ಠಾಣೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯ, ತಹಸೀಲ್ದಾರ್ ಕಚೇರಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದು ಇದರ ಉದ್ದೇಶವೇನು ಎಂದು ಪ್ರಶ್ನಿಸಿದರು, ಯಾರದ್ದೋ ಕುಮ್ಮಕ್ಕಿನಿಂದ ಅಗಲೀಕರಣ ಹೆಸರಿನಲ್ಲಿ ರಸ್ತೆಯ ಒಂದೇ ಕಡೆ ಭೂಸ್ವಾಧೀನ ಮಾಡಲಾಗುತ್ತಿದೆ ಎಂದು ದೂರಿದರು.
    ರಸ್ತೆ ಅಗಲೀಕರಣ ಸಂದರ್ಭದಲ್ಲಿ ನ್ಯಾಯಾಲಯದ ಜಾಗವನ್ನು ಸ್ವಾಧೀನ ಮಾಡಿಕೊಳ್ಳಬೇಡಿ ಎಂದು ಹಿಂದೆ ಮನವಿ ಸಲ್ಲಿಸಲಾಗಿತ್ತು. ವೈಯಕ್ತಿಕ ಹಿತಾಸಕ್ತಿ ಪರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಂತಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಜಾಗವನ್ನು ಉಳಿಸಿಕೊಳ್ಳಲು ಮಾ. 2ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನ್ಯಾಯಾಲಯದ ಜಾಗ ಉಳಿಸಿಕೊಳ್ಳಲು ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts