More

    ಸಾಗರ: ಆಚಾಪುರದಲ್ಲಿ ಭತ್ತದ ಗದ್ದೆ ಸಂಪೂರ್ಣ ಜಲಾವೃತ

    ಸಾಗರ: ತಾಲೂಕಿನ ಆನಂದಪುರಂ ಹೋಬಳಿ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ಭತ್ತ ಮತ್ತು ಶುಂಠಿ ಗದ್ದೆ ಸಂಪೂರ್ಣ ಜಲಾವೃತವಾಗಿದೆ. ಲಕ್ಕವಳ್ಳಿ ಗ್ರಾಮದ 15 ಎಕರೆ ಗದ್ದೆ ಮತ್ತು ಶುಂಠಿ ಬೆಳೆ ಮಳೆ ನೀರಿನ ಪ್ರವಾಹಕ್ಕೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಲಕ್ಕವಳ್ಳಿ ಗ್ರಾಮದಲ್ಲಿ 40 ಎಕರೆ ನಾಟಿ ಮಾಡಿದ್ದ ಭತ್ತದ ಸಸಿ ನೀರು ಪಾಲಾಗಿದೆ. ಕುರುಬರಜಡ್ಡು ಗ್ರಾಮದ ಕೆರೆ ಕೋಡಿ ಹಾಗೂ ಹೊಳೆದಂಡೆ ಹಾಳಾಗಿದ್ದು, ನೀರು ಜಮೀನಿಗೆ ನುಗ್ಗುತ್ತಿದ್ದು, ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ.
    ಸಾಗರ ತಾಲೂಕಿನ ಭಾರಂಗಿ ಹೋಬಳಿಯ ಕರುಮನೆ ಗ್ರಾಮದ ಕೃಷ್ಣಮೂರ್ತಿ ಬಿನ್ ನಾರಾಯಣ ಭಟ್ ತಲಗಿಣಿ ಅವರ ತೋಟಕ್ಕೆ ಮಂಗಳವಾರ ಬೆಳಗ್ಗೆ ಮಳೆನೀರು ನುಗ್ಗಿ ಸಂಪೂರ್ಣ ಅಡಕೆ ತೋಟ ಜಲಾವೃತವಾಗಿದೆ.
    ಸಾಗರದ ನೆಹರು ನಗರದಲ್ಲಿ ಸೋಮವಾರ ಸುರಿದ ವಿಪರೀತ ಗಾಳಿ ಮಳೆಗೆ ಸಾವಿತ್ರಿ ವಿಜಯಕುಮಾರ್ ಎಂಬುವರ ಮನೆಯ ಗೋಡೆ ಹಾಗೂ ಛಾವಣಿ ಕುಸಿದಿದೆ.
    ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದೆ ಇದ್ದುದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯೊಳಗೆ ಇದ್ದ ದಿನಬಳಕೆ ವಸ್ತುಗಳು, ಆಹಾರ ವಸ್ತುಗಳು ನಾಶವಾಗಿವೆ. ಕೂಲಿನಾಲಿ ಮಾಡಿ ಬದುಕುತ್ತಿದ್ದ ಸಾವಿತ್ರಿ ಅವರ ಕುಟುಂಬ ಈಗ ಮನೆ ಇಲ್ಲದೆ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts