More

    ಸಾಕಷ್ಟು ಗ್ರಾಮಕ್ಕಿಲ್ಲ ಬಸ್

    ತುಮಕೂರು: ಶಕ್ತಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿದ್ದರೂ ಜಿಲ್ಲೆಯ ಸಾಕಷ್ಟು ಗ್ರಾಮಗಳಿಗೆ ಇನ್ನೂ ಕೆಎಸ್‌ಆರ್‌ಟಿಸಿ ಬಸ್ ತಲುಪಿಲ್ಲ. ಜಿಲ್ಲೆಯಲ್ಲಿ 2,726 ಹಳ್ಳಿಗಳಿದ್ದು, 2,062ಹಳ್ಳಿಗಳಿಗೆ ಮಾತ್ರ ಬಸ್ ಸಂಪರ್ಕವಿದೆ.

    ಕೆಎಸ್‌ಆರ್‌ಟಿಸಿ ಗುರುತಿರುವ 391 ರಾಷ್ಟ್ರೀಯ ವಲಯಕ್ಕೆ ಸಂಪೂರ್ಣ ಬಸ್ ಸೌಲಭ್ಯ ಒದಗಿಸಲಾಗಿದೆ. ರಾಷ್ಟ್ರೀಕೃತವಲ್ಲದ ಒಟ್ಟು 2,335 ಹಳ್ಳಿಗಳನ್ನು ಗುರುತಿಸಿದ್ದು, ಈ ಪೈಕಿ 2,062 ಹಳ್ಳಿಗಳಿಗೆ ಮಾತ್ರ ಸೌಲಭ್ಯವಿದೆ.

    ತುಮಕೂರು ತಾಲೂಕಿನ 338 ಹಳ್ಳಿಗಳ ಪೈಕಿ 18 ಹಳ್ಳಿಗೆ ಬಸ್ ಸೌಲಭ್ಯವಿಲ್ಲ, ಗುಬ್ಬಿ ತಾಲೂಕಿನಲ್ಲಿ 290 ಹಳ್ಳಿಗಳ ಪೈಕಿ 24 ಗ್ರಾಮಕ್ಕೆ ಬಸ್ ಹೋಗುತ್ತಿಲ್ಲ. ಕುಣಿಗಲ್‌ನಲ್ಲಿ 262ರ ಪೈಕಿ 18 ಗ್ರಾಮಗಳು ಬಸ್‌ಗಾಗಿ ಕಾಯುತ್ತಿವೆ. ಆಶ್ಚರ್ಯ ಎಂಬಂತೆ ತುರುವೇಕೆರೆಯ ಎಲ್ಲ ಗ್ರಾಮಗಳಿಗೂ ಬಸ್ ಸೌಲಭ್ಯವಿದೆ ಎಂದು ಕೆಎಸ್‌ಆರ್‌ಟಿಸಿ ಅಂಕಿ-ಅಂಶ ನೀಡಿದೆ.

    ತಿಪಟೂರು ತಾಲೂಕಿನ 197 ಗ್ರಾಮಗಳ ಪೈಕಿ 10, ಚಿಕ್ಕನಾಯಕನಹಳ್ಳಿ ತಾಲೂಕಿನ 235 ಗ್ರಾಮಗಳ ಪೈಕಿ 43 ಗ್ರಾಮಗಳು ಸರ್ಕಾರಿ ಬಸ್ ನೋಡೇ ಇಲ್ಲ. ಶಿರಾ ತಾಲೂಕಿನ 232 ರಾಷ್ಟ್ರೀಕೃತ ಗ್ರಾಮಗಳ ಪೈಕಿ 18, ಮಧುಗಿರಿಯಲ್ಲಿ 323ರ ಪೈಕಿ 33, ಕೊರಟಗೆರೆ 252ರ ಪೈಕಿ ಬರೋಬ್ಬರಿ 76 ಹಾಗೂ ಪಾವಗಡ ತಾಲೂಕಿನ 154ರ ಪೈಕಿ 33 ಗ್ರಾಮಗಳಿಗೆ ಬಸ್ ಸೌಲಭ್ಯ ಒದಗಿಸಬೇಕಿದೆ. ಜಿಲ್ಲೆಯ ಶೇ.89.73 ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಸೇವೆ ಒದಗಿಸಿದ್ದು ಇನ್ನೂ ಶೇ.11 ಹಳ್ಳಿಗಳಲ್ಲಿ ಕನಿಷ್ಠ ಒಂದು ಬಸ್ ಕೂಡ ಸಂಚರಿಸದಿರುವುದು ಸಾರಿಗೆ ಸೇವೆ ಸಮರ್ಪಕವಾಗಿ ಲಭ್ಯವಾಗದಂತಾಗಿದೆ.ಸುತ್ತು ಮಾರ್ಗ, ಪ್ರಯಾಣಿಕರ ಕೊರತೆ, ಅಂತರಾಜ್ಯ ಪರವಾನಗಿ, ರಸ್ತೆಯ ಸಮಸ್ಯೆ ಮತ್ತಿತರರ ಕಾರಣದಿಂದ ಬಸ್ ಕಾರ್ಯಾಚರಣೆ ಕೈಗೊಳ್ಳಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸಮಸ್ಯೆಯಾಗಿದೆ.

    ಜನಪ್ರತಿನಿಧಿಗಳಿಂದ 100 ಮಾರ್ಗಕ್ಕೆ ಟಿಪ್ಪಣಿ: ಜಿಲ್ಲೆಯ ಸಂಸದರು ಹಾಗೂ 11 ಕ್ಷೇತ್ರದ ಶಾಸಕರು ಸೇರಿ 2023ರಲ್ಲಿ ಒಟ್ಟು 100 ಮಾರ್ಗಗಳಲ್ಲಿ ಬಸ್ ಸೌಲಭ್ಯ ಒದಗಿಸಬೇಕು ಎಂದು ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗಕ್ಕೆ ಟಿಪ್ಪಣಿ ನೀಡಿದ್ದು ಈ ಪೈಕಿ ಸಾಧ್ಯವಿರುವ 87 ಮಾರ್ಗಗಳಲ್ಲಿ ಮಾತ್ರ ಬಸ್ ಸೌಲಭ್ಯ ಒದಗಿಸಲಾಗಿದೆ. ಇನ್ನೂ 13 ಮಾರ್ಗಗಳಲ್ಲಿ ವಿವಿಧ ಕಾರಣಗಳ ನೆಪ ಮಾಡಿಕೊಂಡು ಇನ್ನೂ ಸೇವೆ ಒದಗಿಸಲು ಸಾಧ್ಯವಾಗಿಲ್ಲ.

    ಕೊರಟಗೆರೆ ತಾಲೂಕಿನಿಂದ ಶೂನ್ಯ ಟಿಪ್ಪಣಿ : ವಿವಿಧ ಮಾರ್ಗಗಳಲ್ಲಿ ಬಸ್ ಸೇವೆ ಒದಗಿಸುವಂತೆ ಜಿಲ್ಲೆಯ ಬಹುತೇಕ ಶಾಸಕರು ಟಿಪ್ಪಣಿ ನೀಡಿದ್ದರೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಒಂದೂ ಟಿಪ್ಪಣಿ ನೀಡದಿರುವುದು ಆಶ್ಚರ್ಯ ಮೂಡಿಸಿದೆ. 2023 ಜನವರಿಯಿಂದ ಮಾರ್ಚ್​​​ವರೆಗೂ ಕೊರಟಗೆರೆ ಕ್ಷೇತ್ರದಿಂದ ಬಸ್ ಸೌಲಭ್ಯ ಒದಗಿಸುವಂತೆ ಶಾಸಕರು ಯಾವುದೇ ಟಿಪ್ಪಣಿ ನೀಡಿಲ್ಲ. ಬಸ್ ಅಗತ್ಯವಿರುವ ವಿದ್ಯಾರ್ಥಿಗಳು ಶಾಸಕರನ್ನು ಸಂಪರ್ಕಿಸುವುದೇ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳು ಶಾಸಕರ ಗಮನಕ್ಕೆ ಬಂದಿಲ್ಲ ಎನಿಸಿದೆ. ಉಳಿದಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ 18 ಮಾರ್ಗದಲ್ಲಿ ಬಸ್ ಕೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts