More

    ಸಹೋದರಿ ಮಾದಕವಸ್ತು ವ್ಯಸನಿಯಾದಾಗ ಎಲ್ಲಿದ್ರಿ?

    ಹಾವೇರಿ: ಇಂದ್ರಜಿತ್ ಲಂಕೇಶ ಹೀರೋ ಆಗಲು ಹೊರಟಿದ್ದಾರೆ. ಅವರ ಸಹೋದರಿ ಗೌರಿ ಲಂಕೇಶ ಮಾದಕವಸ್ತು ವ್ಯಸನಿಯಾದಾಗ ಇಂದ್ರಜಿತ್ ಎಲ್ಲಿ ಹೋಗಿದ್ದರು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಪ್ರಶ್ನಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಕುರಿತು ಇಂದ್ರಜಿತ್ ಲಂಕೇಶ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

    ‘ಫಿಲ್ಮ್ ಇಂಡಸ್ಟ್ರಿಯಲ್ಲಿ ನವ ನಟ, ನಟಿಯರು ಡ್ರಗ್ ಅಡಿಕ್ಟ್ ಆಗಿದ್ದಾರೆ ಎನ್ನುತ್ತೀರಿ. ಫಿಲ್ಮ್ ಲ್ಯಾಂಡ್ ಸುಧಾರಣೆಯಾಗಬೇಕು ಎನ್ನುತ್ತೀರಿ. ನಿಮ್ಮ ಸಹೋದರಿಯೇ ಅಡಿಕ್ಟ್ ಆದಾಗ, ಯಾಕೆ ಮಾತನಾಡಲಿಲ್ಲ. ಮೃತ ಚಿರಂಜೀವಿ ಸರ್ಜಾ ಅವರ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ಸರ್ಜಾ ಕುಟುಂಬ ಡ್ರಗ್ಸ್ ತಗೊಳಲ್ಲ. ಅವರದೇ ಆದರ್ಶ ಇಟ್ಟುಕೊಂಡು ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು. ‘ಇಂದ್ರಜಿತ್ ಅವರು ಡ್ರಗ್ಸ್ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ. 2009ರಿಂದಲೇ ರಾಜ್ಯದಲ್ಲಿ ಡ್ರಗ್ಸ್, ಸೆಕ್ಸ್ ಮಾಫಿಯಾ ಕೆಲಸ ಮಾಡುತ್ತಿದೆ. ನಾವು ಆ ಸಮಯದಲ್ಲಿಯೇ ಪಬ್​ವೊಂದರ ಮೇಲೆ ದಾಳಿ ಮಾಡಿದ್ದೇವು. ಆದರೆ, ಸರ್ಕಾರ ಈ ವಿಷಯದ ಕುರಿತು ಗಮನ ಹರಿಸದೇ ನನ್ನನ್ನು ಟಾರ್ಗೆಟ್ ಮಾಡಿತ್ತು. ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಕಾಲೇಜ್, ಹೈಸ್ಕೂಲ್ ಮಟ್ಟದವರೆಗೆ ತಲುಪಿರುವುದು ಅಪಾಯಕಾರಿ ಸಂಗತಿ. ಡ್ರಗ್ಸ್ ಮಾಫಿಯಾದಲ್ಲಿ ಪೊಲೀಸ್, ರಾಜಕಾರಣಿಗಳು ಇದ್ದಾರೆ. ಇವರ ಸಹಕಾರವಿಲ್ಲದೆ ಡ್ರಗ್ಸ್ ಪೂರೈಕೆ ಸಾಧ್ಯವೇ ಇಲ್ಲ. ಪೊಲೀಸರಿಗೆ ಇಂಚಿಂಚೂ ಮಾಹಿತಿ ಗೊತ್ತಿರುತ್ತದೆ. ಅಲ್ಲದೆ, ಮುಂಬೈ, ಗೋವಾ ದೆಹಲಿಯಿಂದ ಡ್ರಗ್ಸ್ ಬರುತ್ತದೆ. ದುಡ್ಡು, ರಾಜಕೀಯ ಒತ್ತಡ ಬಂದ ತಕ್ಷಣವೇ ಪೊಲೀಸರು ಬಾಯಿ ಮುಚ್ಚಿಕೊಳ್ಳುತ್ತಾರೆ. ಈಗ ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಹಾರಾಡುತ್ತಿದ್ದಾರೆ. ಇದು ಸಾಧ್ಯವೇ ಇಲ್ಲ’ ಎಂದರು. ಶ್ರೀರಾಮ ಸೇನೆ ಮುಖಂಡರು ಇದ್ದರು.

    ಹ್ಯಾರಿಸ್ ಪುತ್ರನಿಗೆ ಲಿಂಕ್
    ಡ್ರಗ್ಸ್ ಮಾಫಿಯಾದಲ್ಲಿ ಹ್ಯಾರಿಸ್ ಪುತ್ರ ಇದ್ದಾನೆ ಎಂದು ಆರೋಪಿಸಿದ ಮುತಾಲಿಕ, ‘ನಮ್ಮ ಕೈಯಲ್ಲಿ ಹುಡುಕೋಕೆ ಆಗಿಲ್ಲ ಎಂದು ಪೊಲೀಸರು ಹೇಳಿದರೆ ಡ್ರಗ್ಸ್ ಮಾಫಿಯಾದಲ್ಲಿ ಯಾರ್ಯಾರು, ಎಲ್ಲಿದ್ದಾರೆಂದು ನಾನೇ ತೋರಿಸುತ್ತೇನೆ’ ಎಂದು ಸವಾಲು ಹಾಕಿದರು.

    ತನಿಖೆ ಚುರುಕುಗೊಳಿಸಲು ಒತ್ತಾಯ
    ಕಳೆದ ವರ್ಷ ಶಿಗ್ಗಾಂವಿ ತಾಲೂಕಿನ ಕುನ್ನೂರಿನ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಹಾಸ್ಟೆಲ್ ಸಿಬ್ಬಂದಿಯನ್ನು ಅಮಾನತು ಮಾಡಿ ತನಿಖೆ ನಡೆಸಿ. ವಿದ್ಯಾರ್ಥಿ ಮೃತಪಟ್ಟು 8 ತಿಂಗಳು ಕಳೆದಿದ್ದು, ತನಿಖೆಯ ಯಾವುದೇ ಪ್ರಗತಿ ಕಾಣುತ್ತಿಲ್ಲ. ಮೃತ ವಿದ್ಯಾರ್ಥಿಯ ತಂದೆ ಸಂಶಯ ವ್ಯಕ್ತಪಡಿಸಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಜತೆಗೆ, ತನಿಖೆ ನಡೆಸಬೇಕು ಎಂದು ಗೃಹಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾರೊಬ್ಬರೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೃತ ಬಾಲಕಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣಕ್ಕೆ ಸಂಬಂಧಪಟ್ಟ ಚಾರ್ಜ್​ಶೀಟ್ ಅನ್ನು ಕೂಡಲೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇಲ್ಲವಾದಲ್ಲಿ ಶ್ರೀರಾಮ ಸೇನೆಯಿಂದ ಹೋರಾಟ ನಡೆಸಲಾಗುವುದು ಎಂದು ಪ್ರಮೋದ ಮುತಾಲಿಕ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts