More

    ಸವಣೂರ ಪುರಸಭೆಗೆ ಬಿಜೆಪಿ ಅಧ್ಯಕ್ಷೆ, ಕಾಂಗ್ರೆಸ್ ಉಪಾಧ್ಯಕ್ಷ

    ಸವಣೂರ: ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ ವ್ಯಾಪ್ತಿಯ ಸವಣೂರ ಪುರಸಭೆಯಲ್ಲಿ ಬಹುಮತ ಇಲ್ಲದಿದ್ದರೂ ಮೀಸಲಾತಿಯ ಅನುಕೂಲದಿಂದಾಗಿ ಅಧ್ಯಕ್ಷ ಸ್ಥಾನ ಬಿಜೆಪಿಯ ಪಾಲಾಯಿತು. ಆದರೆ, ಕಾಂಗ್ರೆಸ್​ನ ಕೆಲ ಸದಸ್ಯರು ಬೆಂಬಲಿಸಲು ಮುಂದಾಗಿದ್ದರೂ ಬಿಜೆಪಿಯ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯು ಸ್ವಪಕ್ಷಿಯರ ಗೈರು ಹಾಜರಾತಿಯಿಂದಾಗಿ ಸೋಲನುಭವಿಸಿದ್ದರಿಂದ ಗೃಹ ಸಚಿವರು ಮುಜುಗರ ಅನುಭವಿಸುವಂತಾಯಿತು.

    ಬ ವರ್ಗ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಬಿಜೆಪಿಯ ಶೈಲಾ ಎಚ್. ಮುದಿಗೌಡ್ರ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಬಹುಮತ ಹೊಂದಿದ್ದರೂ ಈ ಮೀಸಲಾತಿಗೆ ಅರ್ಹರಾದವರು ಯಾರೂ ಕಾಂಗ್ರೆಸ್​ನಲ್ಲಿ ಇರಲಿಲ್ಲ.

    ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ಅಲ್ಲಾವುದೀನ್ ಮನಿಯಾರ್, ಬಿಜೆಪಿಯಿಂದ ಸದಾನಂದ ಕೆಮ್ಮಣಕೇರಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಸದಸ್ಯ ಅಲ್ಲಾವುದೀನ್ ಮನಿಯಾರ್ 13 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.

    ಉಪಾಧ್ಯಕ್ಷ ಸ್ಥಾನವೂ ಬಿಜೆಪಿಗೆ ಒಲಿಯುವಂತಹ ಸಾಧ್ಯತೆ ದಟ್ಟವಾಗಿತ್ತು. ಆದರೂ, ಕಾಂಗ್ರೆಸ್​ನ ಮನಿಯಾರ್ ಗೆಲುವು ಸಾಧಿಸಿದರು. ಏಕೆಂದರೆ, ಬಿಜೆಪಿಯ ನಾಲ್ವರು ಸದಸ್ಯರು ಹಾಗೂ ಬಿಜೆಪಿಯವರೇ ಆದ ಶಾಸಕ ಬೊಮ್ಮಾಯಿ ಹಾಗೂ ಸಂಸದ ಶಿವಕುಮಾರ ಉದಾಸಿ ಈ ಮತದಾನದಲ್ಲಿ ಗೈರಾದರು.

    ಒಟ್ಟು 27 ಸದಸ್ಯ ಬಲವುಳ್ಳ ಪುರಸಭೆಯಲ್ಲಿ ಕಾಂಗ್ರೆಸ್​ನ 15, ಬಿಜೆಪಿಯ 8, ಜೆಡಿಎಸ್​ನ 2 ಹಾಗೂ ಇಬ್ಬರು ಪಕ್ಷೇತರರು ಇದ್ದಾರೆ. ನಾಲ್ವರು ಕಾಂಗ್ರೆಸ್ ಸದಸ್ಯರು, ಜೆಡಿಎಸ್​ನ ಒಬ್ಬ ಸದಸ್ಯ, ಒಬ್ಬ ಪಕ್ಷೇತರರು ಬಿಜೆಪಿಯ ಉಪಾಧ್ಯಕ್ಷ ಅಭ್ಯರ್ಥಿ ಸದಾನಂದ ಕೆಮ್ಮಣಕೇರಿ ಅವರನ್ನು ಬೆಂಬಲಿಸಲು ಸಿದ್ಧರಾಗಿದ್ದರಿಂದ ಗೆಲುವು ಸುಲಭ ಎನ್ನುವಂತಿತ್ತು.

    ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಸದಸ್ಯರಾದ ಮಹೇಶ ಮುದಗಲ್ಲ, ಮಹದೇವ ಮಹೇಂದ್ರಕರ, ರೇಖಾ ಬಂಕಾಪೂರ ಹಾಗೂ ಭಾರತಿ ಹುಲ್ಲೂರ ಅವರು ಮತದಾನಕ್ಕೆ ಗೈರು ಹಾಜರಾದರು. ಕಾಂಗ್ರೆಸ್​ನ 3 ಸದಸ್ಯರು ಮತದಾನದಲ್ಲಿ ಭಾಗವಹಿಸದೆ ತಟಸ್ಥರಾದರು. ಈ ಹಿನ್ನೆಲೆಯಲ್ಲಿ ಕೆಮ್ಮಣಕೇರಿ ಅವರು ಕೇವಲ 7 ಮತ ಪಡೆದು ಮುಖಭಂಗ ಅನುಭವಿಸುವಂತಾಯಿತು. ಬಿಜೆಪಿಯವರೇ ತಮ್ಮ ಅಭ್ಯರ್ಥಿಯನ್ನು ಸೋಲಿಸಿದರು ಎಂಬ ಮಾತುಗಳು ಕೇಳಿಬಂದವು. ಸ್ವತಃ ಬೊಮ್ಮಾಯಿ ಹಾಗೂ ಉದಾಸಿ ಗೈರಾಗಿರುವುದು ಇದಕ್ಕೆ ಪುಷ್ಟಿ ನೀಡುವಂತಿತ್ತು.

    ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಕಾರ್ಯ ನಿರ್ವಹಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಪದಾಧಿಕಾರಿಗಳು ಪ್ರತ್ಯೇಕವಾಗಿ ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

    ಸವಣೂರ ಪುರಸಭೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಗೈರು ಹಾಜರಾಗಿ ಪಕ್ಷದ ಆದೇಶ ಉಲ್ಲಂಘಿಸಿದ 4 ಬಿಜೆಪಿ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿಸಲಾಗುವುದು.
    | ಬಸವರಾಜ ಬೊಮ್ಮಾಯಿ, ಗೃಹ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts