More

    ಸಲಹೆ ನೀಡುವ ಕೆಲಸ ಮಾಡಲಿ

    ಪಾಂಡವಪುರ: ವಿಪಕ್ಷ ನಾಯಕರು ಸುಳ್ಳು ಆರೋಪಗಳ ಮೂಲಕ ಕಾಲೆಳೆಯುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸುವ ಜತೆಗೆ ಸರ್ಕಾರಕ್ಕೆ ಸಲಹೆ ನೀಡುವ ಕೆಲಸ ಮಾಡಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

    ತಾಲೂಕಿನ ಬೇಬಿ ಬೆಟ್ಟದ ರಾಮಯೋಗೀಶ್ವರ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಮಠದ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಯಾರು ಅಧಿಕಾರದಲ್ಲಿದ್ದಾಗ ಏನೂ ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳು ಇವೆ. ರಾಜ್ಯದ ಜನತೆ ಕಂಡರಿಯದ ರೀತಿಯಲ್ಲಿ ಮಳೆಯಾಗಿದೆ. ಮಳೆಯಿಂದ ಸೃಷ್ಟಿಯಾಗಿರುವ ಅವಾಂತರಗಳಿಗೆ ಕಾರಣ ಯಾರು ಎಂದು ವಿಪಕ್ಷ ನಾಯಕರು ಒಂದು ಕ್ಷಣ ಯೋಚಿಸಬೇಕು. ಚುನಾವಣೆಗೆ ಇನ್ನೂ ಕಾಲಾವಕಾಶವಿದೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಆಡಳಿತ ಪಕ್ಷದ ಜತೆಗೆ ವಿರೋಧ ಪಕ್ಷ ಮಾಡಬೇಕಿದೆ. ಎಲ್ಲವನ್ನು ಚುನಾವಣೆ ದೃಷ್ಟಿಯಿಂದ ನೋಡುವುದು ದುರಂತ ಎಂದು ಕಿಡಿಕಾರಿದರು.

    ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಎರಡು ತಂಡ ರಚನೆಯಾಗಿದೆ. ಮಳೆ ಕಾರಣ ಪ್ರವಾಸ ಮುಂದೂಡಲ್ಪಟ್ಟಿದೆ. ಹಾಗಾಗಿ ಯಡಿಯೂರಪ್ಪ ಅವರ ಪ್ರವಾಸಕ್ಕೆ ಬ್ರೇಕ್ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನು ಯಾವುದೇ ಹುದ್ದೆ ಅಥವಾ ಸ್ಥಾನಕ್ಕೆ ಆಸೆ ಪಟ್ಟವನಲ್ಲ. ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ನಮ್ಮ ಮುಂದಿರುವ ಗುರಿ ಎಂದರು.

    ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತಿರುವ ಡಾ.ಇಂದ್ರೇಶ್ ಅವರಂತೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಮುಖಂಡರು ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೆ.ಆರ್.ಪೇಟೆಗೆ ಮಾತ್ರ ನಮ್ಮ ಗೆಲುವು ಸೀಮಿತವಾಗಬಾರದು. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ಶಕ್ತಿ ಹೊಂದಿದೆ. ಜಿಲ್ಲೆಯ ಎರಡು ಕೈಗಾರಿಕೆಗಳಿಗೆ ಮರು ಜೀವ ಕೊಟ್ಟಿರುವುದು ಬಿಜೆಪಿ ಸರ್ಕಾರ ಮತ್ತು ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು. ಆರೋಪ ಮಾಡುವ ವಿಪಕ್ಷಗಳಿಗೆ ಇಲ್ಲಿನ ಜನರ ಮತ ಬೇಕಾಗಿದೆಯೇ ಹೊರತು ಜಿಲ್ಲೆಯ ಅಭಿವೃದ್ಧಿಯಲ್ಲ ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts