More

    ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮ

    ಹಾವೇರಿ: ನನ್ನ ಅವಧಿಯಲ್ಲಿ ಯಾವುದೇ ಸಮಾಜಕ್ಕೆ ನೋವಾಗದಂತೆ ಕೆಲಸ ಮಾಡುತ್ತಿದ್ದೇನೆ. ಇಂತಹ ಸಮಯದಲ್ಲಿ ಕೆಲ ಘಟನೆಗಳನ್ನು ಎದುರಿಸುವುದು ಅನಿವಾರ್ಯ. ಈಗಾಗಲೇ ಕೆಲವರನ್ನು ಮಂತ್ರಿ ಮಾಡಿದ್ದರೂ ಮತ್ತೆ ಅದೇ ಸಮಾಜದವರು ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟರೆ ಕಷ್ಟ , ಇದು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾವಾವೇಶದಿಂದ ಹೇಳಿದರು.

    ತಾಲೂಕಿನ ನರಸೀಪುರದಲ್ಲಿರುವ ನಿಜಶರಣ ಅಂಬಿಗರಚೌಡಯ್ಯನವರ ಗುರುಪೀಠದಲ್ಲಿ ಬುಧವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ, ವಚನ ಮಹಾರಥೋತ್ಸವ, 900ನೇ ಜಯಂತಿ, ಲಿಂ. ಶಾಂತಮುನಿ ಸ್ವಾಮೀಜಿಗಳ ನಾಲ್ಕನೇ ಪುಣ್ಯಸ್ಮರಣೋತ್ಸವ, ಶಾಂತಭೀಷ್ಮಚೌಡಯ್ಯ ಸ್ವಾಮೀಜಿಗಳ 3ನೇ ವರ್ಷದ ಪೀಠಾರೋಹಣ ವಾರ್ಷಿಕ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ರಾಜ್ಯದಲ್ಲಿನ ವಾಸ್ತವಿಕತೆ ತಿಳಿಯದೇ ಕೆಲವರು ಮಾತನಾಡಿರುವುದರಿಂದ ಗೊಂದಲ ಉಂಟಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದವರಲ್ಲಿ 15ರಿಂದ 16 ಜನರು ಸಚಿವರನ್ನಾಗಿ ಮಾಡಬೇಕಿದೆ. ಇದಕ್ಕಾಗಿ ನಾನು ಶ್ರಮಪಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಮಂಗಳವಾರದ ಹರಿಹರ ಪಂಚಮಸಾಲಿ ಸಮಾಜದ ಬೆಳ್ಳಿ ಬೆಡಗು ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮೀಜಿಗಳ ಹೇಳಿಕೆಯಿಂದ ಮುನಿಸಿಕೊಂಡಿದ್ದ ಯಡಿಯೂರಪ್ಪ ಅವರು ಇಂದು ಈ ವೇದಿಕೆಯಲ್ಲಿ ಉತ್ತರ ನೀಡಿದಂತಿತ್ತು.

    ನಿಡುಮಾಮಿಡಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿಗಳು ನಿನ್ನೆಯ ಘಟನೆಗೆ ನೊಂದುಕೊಂಡು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗಬೇಕು ಎಂಬುದು ನನ್ನ ಹಂಬಲ. ನಾಡಿನ ಅಭಿವೃದ್ಧಿಗೆ ಎಲ್ಲ ಸ್ವಾಮೀಜಿಗಳ ಸಹಕಾರವಿರಲಿ ಎಂದು ಕೋರಿದರು.

    ಬಿಎಸ್​ವೈಗೆ ಸ್ವಾಮೀಜಿಗಳಿಂದ ನೈತಿಕ ಬೆಂಬಲ

    ರಾಜ್ಯದ ಪ್ರತಿನಿಧಿಯ ಎದುರು ಗುರುಗಳು ಸೌಜನ್ಯ ಮರೆತು ಮಾತನಾಡಬಾರದು. ಬೇಡಿಕೆಗಳನ್ನು ದರ್ಪದಿಂದ ಕೇಳಬಾರದು. ಬೆದರಿಸುವ ತಂತ್ರಗಳನ್ನು ಅನುಸರಿಸಬಾರದು. ಯಡಿಯೂರಪ್ಪ ಅವರು ರಾಜ್ಯದ 6 ಕೋಟಿ ಜನರ ಪ್ರತಿನಿಧಿ. ಅವರು ತಮ್ಮ ಕೈಲಾದಷ್ಟು ಸಹಾಯವನ್ನು ಎಲ್ಲ ಸಮುದಾಯಗಳಿಗೂ ಮಾಡುತ್ತಿದ್ದಾರೆ. ಅಂತಹವರನ್ನು ಬೆದರಿಸುವ ಕೆಲಸ ಯಾವ ಮಠಾಧೀಶರೂ ಮಾಡಬಾರದು. ಒಂದು ವೇಳೆ ಮಾಡಿದರೆ ಅದು ನಾಡಿನ ಜನತೆಗೆ ಮಾಡುವ ಅವಮಾನದಂತೆ ಭಾವಿಸಬೇಕು ಎಂದು ಬೆಂಗಳೂರು ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶ್ರೀ ಚನ್ನಮಲ್ಲವೀರಭದ್ರ ಸ್ವಾಮೀಜಿಗಳು ಬಿಎಸ್​ವೈ ಬೆಂಬಲಿಸಿ ಮಾತನಾಡಿದರು.

    ಯಡಿಯೂರಪ್ಪ ಅವರು ಸಮಗ್ರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಟ್ಟುಕೊಂಡು ಕೆಲಸ ಮಾಡಬೇಕು. ನಿಮಗೆ ಕೆಟ್ಟ ಹೆಸರು ತರುವವರನ್ನು ದೂರವಿಡಿ. ಇತಿಹಾಸದಲ್ಲಿ ನಿಮ್ಮ ಸೇವೆ ಅಜರಾಮರವಾಗಿರಬೇಕು. ಬಲಿಷ್ಠರಿಗೆ ತಲೆಬಾಗಬೇಡಿ. ಅವಕಾಶ ವಂಚಿತರಿಗೆ ಹೆಚ್ಚಿನ ಸಹಾಯ ಮಾಡಿ. ನಿಮಗೆ ಶಕ್ತಿಯಿದೆ, ಕರ್ನಾಟಕವನ್ನು ಉನ್ನತಿಯತ್ತ ಕೊಂಡೊಯ್ಯಿರಿ ಎಂದರು.

    ಕಾವಿಧಾರಿಗಳ ಪರ ಕ್ಷಮೆ ಕೋರಿದ ದಿಂಗಾಲೇಶ್ವರ ಶ್ರೀ

    ಹರಿಹರ ಪಂಚಮಸಾಲಿ ಪೀಠದಲ್ಲಿ ಮಂಗಳವಾರ ನಡೆದ ಘಟನೆಯಿಂದ ಸಿಎಂಗೆ ನೋವಾಗಿದ್ದರೆ, ಕಾವಿಧಾರಿಗಳ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಕಾವಿಧಾರಿಗಳಿಗೆ ಒಂದು ಸೀಮೆ ಇರುತ್ತೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಎಂತಹ ಬಿರುಗಾಳಿ ಬಂದರೂ ಅಲುಗಾಡದ ಬಂಡೆಯಂತೆ ಬಿಎಸ್​ವೈ ಇದ್ದಾರೆ. ಇಂತಹ ಘಟನೆಗಳಿಂದ ಧೃತಿಗೇಡಬೇಡಿ ಎಂದು ಬಾಲೇಹೊಸೂರ ದಿಂಗಾಲೇಶ್ವರ ಸ್ವಾಮೀಜಿ ಧೈರ್ಯ ತುಂಬಿದರು.

    ಯಡಿಯೂರಪ್ಪ ಅವರು ಆಕಳಿದ್ದಂತೆ, ಅವರನ್ನು ರಮಿಸಿ ಹಿಂಡಿಸಿಕೊಳ್ಳಬೇಕು. ಬೆದರಿಸಲು ಯತ್ನಿಸಿದರೆ ಆಕಳು ಹಾಲು ಕೊಡುವುದಿಲ್ಲ ಎಂದು ಪರೋಕ್ಷವಾಗಿ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗಳಿಗೆ ತಿರುಗೇಟು ನೀಡಿದರು.

    ಎಸ್​ಟಿಗೆ ಸೇರಿಸಿ, ಚರ್ಮದ ಪಾದರಕ್ಷೆ ಮಾಡಿಸುತ್ತೇನೆ: ಸದಾ ತಮ್ಮ ಮಾತಿನಿಂದ ವಿವಾದಕ್ಕೊಳಗಾಗುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರು ನರಸೀಪುರ ಕಾರ್ಯಕ್ರಮದಲ್ಲೂ ವಿವಾದಕ್ಕೊಳಗಾದರು.

    ವಿವಿಧ 39 ಪರ್ಯಾಯ ಪದಗಳಿಂದ ಕರೆಯುತ್ತಿರುವ ಗಂಗಾಮತ ಸಮಾಜವು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದು, ನಮ್ಮ ಸಮಾಜವನ್ನು ಎಸ್​ಟಿಗೆ ಸೇರ್ಪಡೆಗೊಳಿಸಬೇಕು. ಈ ಕೆಲಸವನ್ನು ಮಾಡಲೇಂದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹುಟ್ಟಿ ಬಂದಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿಯೇ ಈ ಕೆಲಸ ಮಾಡಿಕೊಟ್ಟರೆ, ಬಸವಣ್ಣನವರಿಗೆ ಮಾದಿಗರ ಹರಳಯ್ಯನವರು ಮಾಡಿಕೊಟ್ಟಂತೆ ನನ್ನ ಬಲತೊಡೆಯ ಹಾಗೂ ನನ್ನ ಪತ್ನಿಯ ಎಡ ತೊಡೆಯ ಚರ್ಮದಿಂದ ಪಾದರಕ್ಷೆ ಮಾಡಿಕೊಡುತ್ತೇನೆ. ಅಂಬಿಗರು ನಂಬಿಕಸ್ತರು, ದೆಹಲಿಗೆ ಹೋಗಿ ಪ್ರಧಾನಿಗಳನ್ನು ಭೇಟಿ ಮಾಡಿ ಎಸ್​ಟಿಗೆ ಸೇರಿಸಿ. ನಮ್ಮ ಸಮಾಜದ ಮುಂದಿನ 5 ವರ್ಷ ನಿಮ್ಮನ್ನೇ ಸಿಎಂ ಮಾಡುತ್ತೇ ಎಂದು ಮಾಜಿ ಸಚಿವ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts