More

    ಸರ್ವಾಧಿಕಾರಿ ಧೋರಣೆ ತೋರುತ್ತಿದ್ದ ಹಕ್ರೆ

    ಸಾಗರ: ತಾಪಂನಲ್ಲಿ 4 ವರ್ಷ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಹಕ್ರೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವ ಸಭೆ, ಕಾರ್ಯಕ್ರಮಗಳನ್ನು ಮಾಡಿರಲಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ ದೂರಿದರು.

    ಮಾ.10ರಂದು ಹಕ್ರೆ ವಿರುದ್ಧ ನಾನೂ ಸೇರಿ 10 ಸದಸ್ಯರು ಅವಿಶ್ವಾಸ ಮಂಡಸಿದ್ದು ಯಶಸ್ವಿಯಾಗಿತ್ತು. ಅವರ ಜತೆ ಇರುವುದು ಕೇವಲ ಐವರು ಸದಸ್ಯರು. ಆದರೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಅಶೋಕ ಬರದವಳ್ಳಿ ಕಾನೂನು ಬಾಹಿರವಾಗಿ ಮೂವರು ಸದಸ್ಯರನ್ನು ಅಮಾನತು ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಅವಿಶ್ವಾಸ ಗೊತ್ತುವಳಿ ಯಶಸ್ವಿಯಾಗಿದೆ ಎಂದು ಜಿಪಂ ಅಧ್ಯಕ್ಷರ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಹಕ್ರೆ ಹೈಕೋರ್ಟ್​ಗೆ ರಿಟ್ ಸಲ್ಲಿಸಿದ್ದಾರೆ. ರಾಜ್ಯ ಉಚ್ಚ ನ್ಯಾಯಾಲಯ ಆ.10ರವರೆಗೆ ತಾತ್ಕಾಲಿಕ ತಡೆ ನೀಡಿದೆ. ಹಕ್ರೆ ಅವರನ್ನು ಅಧ್ಯಕ್ಷರೆಂದು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದರು.

    ತಮ್ಮ ಮಾತು ಕೇಳುತ್ತಿಲ್ಲ ಎಂದು ತಾಪಂ ಇಒ ವಿರುದ್ಧ ಮಲ್ಲಿಕಾರ್ಜುನ ಹಕ್ರೆ ನರೇಗಾ ಭ್ರಷ್ಟಾಚಾರ ಆರೋಪ ಹೊರಿಸುತ್ತಿದ್ದಾರೆ. ಸಭೆ ನಡೆಸಲು ಅವಕಾಶ ಕೊಡುತ್ತಿಲ್ಲ ಎನ್ನುತ್ತಿರುವ ಅವರು, ಬಹುಮತ ಇಲ್ಲ ಎಂಬುದನ್ನು ಮರೆತಿದ್ದಾರೆ. ಸಭೆ ನಡೆಸಲು ಕನಿಷ್ಠ 8 ಸದಸ್ಯರು ಇರಬೇಕೆಂಬ ಅರಿವಿರಬೇಕು. ಹಕ್ರೆ ಪ್ರಕರಣಕ್ಕೂ, ಶಾಸಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

    ತಾಪಂ ಸದಸ್ಯರಾದ ಕೆ.ಎಚ್.ಪರಶುರಾಮ್ ದೇವೇಂದ್ರಪ್ಪ ಯಲಕುಂದ್ಲಿ, ಸುವರ್ಣಾ ಟೀಕಪ್ಪ, ರಘುಪತಿ ಭಟ್, ಸವಿತಾ ದೇವರಾಜ್, ಪ್ರತಿಮಾ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts