More

    ಸರ್ವರ್ ಕಾಟ, ಪಡಿತರಕ್ಕೆ ಸಾರ್ವಜನಿಕರ ಪರದಾಟ

    ಬೆಳಗಾವಿ: ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಕಾರಣದಿಂದಾಗಿ ಗ್ರಾಹಕರು ಪಡಿತರ ಧಾನ್ಯಗಳನ್ನು ಪಡೆಯಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆವೈ) ಹಾಗೂ ರಾಜ್ಯ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (ಎನ್‌ಎಸ್‌ಎಫ್‌ಎ) ಅಡಿಯಲ್ಲಿ ಪಡಿತರಧಾನ್ಯ ಪಡೆದುಕೊಳ್ಳಲು ಪಡಿತರ ಚೀಟಿದಾರರು ಏಕಕಾಲಕ್ಕೆ ಎರಡೆರಡು ಬಾರಿ ಬಯೋಮೆಟ್ರಿಕ್ ಕೊಡಬೇಕು. ಪರಿಣಾಮ ಸರ್ವರ್ ದೋಷವಿದ್ದ ಕಾರಣ ಪಡಿತರ ಚೀಟಿದಾರರು ರೇಷನ್ ಪಡೆಯಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.

    ಸದ್ಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1746 ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯ ಪಡೆಯಲು ಬಯೋಮೆಟ್ರಿಕ್ ಪದ್ಧತಿ ಅಳವಡಿಸಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಬಯೋಮೆಟ್ರಿಕ್ ಕಡ್ಡಾಯಗೊಳಿಸಿದ್ದರಿಂದ ನೂರಾರು ಮಂದಿ ಪಡಿತರ ಧಾನ್ಯದಿಂದ ವಂಚಿತರಾಗುತ್ತಿದ್ದಾರೆ.
    ನಾಲ್ಕೈದು ದಿನಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ಭುಗಿಲೆದ್ದಿರುವ ಸರ್ವರ ಸಮಸ್ಯೆಗಳಿಂದಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಪಡಿತರ ಚೀಟಿದಾರರು ನಡುವ ನಿತ್ಯ ಗಲಾಟೆಗಳು ನಡೆಯುತ್ತಿದೆ. ಆಯಾ ತಿಂಗಳ ಪಡಿತರ ಆಯಾ ತಿಂಗಳಲ್ಲಿಯೇ ಪಡೆಯಬೇಕು. ಇಲ್ಲದೆ ಹೋದಲ್ಲಿ ಪಡಿತರದಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ, ಪಡಿತರ ಚೀಟಿದಾರರು ಧಾನ್ಯ ಪಡೆದುಕೊಳ್ಳಲು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಸರತಿಯಲ್ಲಿ ಕಾಯುತ್ತಿದ್ದಾರೆ. ಆದರೂ, ಪಡಿತರ ಧಾನ್ಯ ಸಿಗುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ.

    ಗ್ರಾಮೀಣ ಪ್ರದೇಶದಲ್ಲಿ ನ್ಯಾಯ ಬೆಲೆ ಅಂಗಡಿಕಾರರು ಸರ್ವರ್ ಬಂದ್ ಆಗಿದೆ ಎಂದು ಎಲ್ಲ ಪಡಿತರರ ಚೀಟಿದಾರರಿಗೆ ಮುಂಗಡವಾಗಿ 5 ರಿಂದ 10 ಕೆಜಿ ಅಕ್ಕಿ ನೀಡುತ್ತಿದ್ದಾರೆ. ಸರ್ವರ್ ಆರಂಭವಾದ ಬಳಿಕ ಇನ್ನೂಳಿದ ಅಕ್ಕಿ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದಾರೆ. ಆದರೆ, ನಾಲ್ಕು ದಿನದಿಂದ ಸರ್ವರ್ ಸಮಸ್ಯೆ ಪರಿಹರಿದಿಲ್ಲ. ಈ ತಿಂಗಳು ಪೂರ್ಣಗೊಳ್ಳುತ್ತ ಬಂತು. ಆದರೆ, ಆಹಾರ ಧಾನ್ಯ ಸಿಗುತ್ತಿಲ್ಲ ಎಂದು ಬಿಪಿಎಲ್ ಪಡಿತರ ಚೀಟಿದಾರ ರಾಹುಲ್ ನಾಯಕ್, ರಾಮಪ್ಪ ಭಜಂತ್ರಿ ದೂರಿದ್ದಾರೆ.

    ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆಗಳಿಂದಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ. ಬಯೋಮೆಟ್ರಿಕ್ ವ್ಯವಸ್ಥೆಯಿಂದಾಗಿ ಹಂಚಿಕೆ ವ್ಯವಸ್ಥೆ ದಾರಿ ತಪ್ಪುತ್ತಿದೆ. ಹಳೆಯ ವ್ಯವಸ್ಥೆಯನ್ನೇ ಮರು ಜಾರಿ ಮಾಡಿದರೆ ಸಮಸ್ಯೆ ಇತ್ಯರ್ಥಪಡಿಸಬಹುದು.
    | ರಾಜಶೇಖರ ತಳವಾರ ರಾಜ್ಯ ಉಪಾಧ್ಯಕ್ಷ, ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ

    ರಾಜ್ಯದಲ್ಲಿ ಪಿಎಂಜಿಕೆವೈ ಹಾಗೂ ಎನ್‌ಎಸ್‌ಎಫ್‌ಎ ಯೋಜನೆ ಅಡಿಯಲ್ಲಿ ಆಹಾರಧಾನ್ಯ ಪಡೆಯಲು ಎರಡೆರಡು ಬಾರಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯಗೊಳಿಸಿದ್ದರಿಂದ ಸರ್ವರ್ ಸಮಸ್ಯೆ ಉದ್ಭವಿಸಿದೆ. ಈಗಾಗಲೇ ಸರ್ವರ್ ಸಮಸ್ಯೆ ಪರಿಹರಿಸಲು ಎನ್‌ಐಸಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ (ಸೆ.20)ಸಮಸ್ಯೆ ಇತ್ಯರ್ಥವಾಗಲಿದೆ.
    | ಶ್ರೀಶೈಲ ಬಿ.ಕಂಕಣವಾಡಿ ಉಪನಿರ್ದೇಶಕ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts