More

    ಸರ್ವಜ್ಞನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

    ಚಿತ್ರದುರ್ಗ: ಅತ್ಯಂತ ಸುಲಭ, ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥೈಸುವ ಶೈಲಿಯಲ್ಲಿ ತ್ರಿಪದಿ ರಚಿಸಿ ಸರ್ವಜ್ಞ ನೀಡಿದ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.

    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಕುಂಬಾರ ಗುಂಡಯ್ಯ ಮಹಾಸಂಸ್ಥಾನ, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಕುಂಬಾರ ಮಹಿಳಾ ಮಹಾಸಭಾದಿಂದ ತರಾಸು ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

    ಎಲ್ಲ ಬಲ್ಲವನು ಸರ್ವಜ್ಞ. ಶ್ರೇಷ್ಠ ಜೀವತತ್ವಗಳ ಕುರಿತು ಸಾವಿರಕ್ಕೂ ಅಧಿಕ ತ್ರಿಪದಿ ರಚಿಸಿ, ಇಡೀ ಮಾನವ ಕುಲಕ್ಕೆ ಮಾರ್ಗದರ್ಶನ ನೀಡಿದ ಮಹನೀಯ ಎಂದು ಬಣ್ಣಿಸಿದರು.

    ಶಿಕ್ಷಕಿ ಗೀತಾ ಭರಮಸಾಗರ ಮಾತನಾಡಿ, ಸರ್ವಜ್ಞರಲ್ಲಿನ ವಿದ್ಯೆ, ವಿನಯ, ಪರಿಪೂರ್ಣತೆ, ಲೋಕದ ಡೊಂಕು ತಿದ್ದುವ ದಿಟ್ಟತನ ಎಂದಿಗೂ ಮರೆಯುವಂತಿಲ್ಲ. ಕನ್ನಡ ಸಾಹಿತ್ಯ ಪರಂಪರೆ, ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರು ತ್ಯಾಗಿ, ಯೋಗಿ, ಮಹಾ ಶಿವಯೋಗಿಯಾಗಿದ್ದು, ಲೋಕಕ್ಕೆ ಅಜರಾಮರ ಎಂದು ವರ್ಣಿಸಿದರು.

    ಸರ್ವಜ್ಞ ಎಂಬ ಹೆಸರು ರಾಜಾಶ್ರಯದಲ್ಲಿ ನೀಡಿದ ಬಿರುದಾಗಿದೆ. ಅವರ ನಿಜನಾಮ ಪುಷ್ಪದತ್ತ. ತ್ರಿಪದಿಗಳ ಮೂಲಕ ಕನ್ನಡ ಅಸ್ಮಿತೆ ಅರ್ಥೈಸಿದ ಮೂಲಪುರುಷ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಚಿಕ್ಕವಯಸ್ಸಲ್ಲೇ ಮನೆತೊರೆದರು. ಇಡೀ ಜಗತ್ತನ್ನೇ ಜ್ಞಾನದೇಗುಲವನ್ನಾಗಿ ಮಾಡಲು ಪ್ರಯತ್ನಿಸಿದ ಮಹಾಕವಿ ಎಂದು ಬಣ್ಣಿಸಿದರು.

    ಬಸವಮೂರ್ತಿ ಕುಂಬಾರ ಗುಂಡಯ್ಯ ಶ್ರೀ, ಮಹಾಸಂಸ್ಥಾನದ ಅಧ್ಯಕ್ಷ ಕೆ.ಚಂದ್ರಪ್ಪ, ಕಾರ್ಯದರ್ಶಿ ಎ.ಎನ್.ಮಹಾಂತೇಶಪ್ಪ, ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಯರ‌್ರಿಸ್ವಾಮಿ, ಕಾರ್ಯದರ್ಶಿ ವೈ.ಮೃತ್ಯುಂಜಯ, ಮಹಾಸಭಾದ ಅಧ್ಯಕ್ಷೆ ಎಸ್.ಬೈಲಮ್ಮ, ಕಾರ್ಯದರ್ಶಿ ಹೇಮಾವತಿ, ಮುಖಂಡರಾದ ಚಂದ್ರಶೇಖರ್, ಮಲ್ಲಿಕಾರ್ಜುನ್, ರಂಗಕರ್ಮಿ ಕೆಪಿಎಂ ಗಣೇಶಯ್ಯ ಇತರರಿದ್ದರು.

    ಮೆರವಣಿಗೆ: ಜಯಂತಿ ಅಂಗವಾಗಿ ಗೌರಸಂದ್ರ ಮಾರಮ್ಮ ದೇಗುಲದಿಂದ ಹೊರಟ ಸರ್ವಜ್ಞರ ಭಾವಚಿತ್ರ ಮೆರವಣಿಗೆಗೆ ತಹಸೀಲ್ದಾರ್ ಡಾ.ನಾಗವೇಣಿ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts