More

    ಸರ್ಕಾರ ರೈತರು, ಸೈನಿಕರ ಕಾಳಜಿ ವಹಿಸಲಿ

    ಬಸವನಬಾಗೇವಾಡಿ: ರೈತರು ಹಾಗೂ ಸೈನಿಕರು ಈ ದೇಶದ ಆಸ್ತಿಯಾಗಿದ್ದು ಅವರು ರಾಷ್ಟ್ರದ ಎರಡು ಕಣ್ಣುಗಳು ಇದ್ದಂತೆ. ಅವರಿಗೆ ಯಾವುದೇ ರೀತಿ ತೊಂದರೆಯಾಗದ ಹಾಗೇ ಸರ್ಕಾರಗಳು ನಡೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

    ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಲಿಂ.ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ 11ನೇ ಪುಣ್ಯಾರಾಧನೆ, ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರ ಪಟ್ಟಾಧಿಕಾರದ ದಶಮಾನೋತ್ಸವ, ಸಂಗನಬಸವ ಕಲ್ಯಾಣಮಂಟಪ, ನೂತನ ರಥೋತ್ಸವ ಲೋಕಾರ್ಪಣೆ, ಸಾಮೂಹಿಕ ವಿವಾಹದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ರಾಜ್ಯದಲ್ಲಿ ಭೀಕರ ಬರಗಾಲ ಇದೆ. ತೋಟಗಾರಿಕೆ ಬೆಳೆಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ. ರೈತರು ಮಕ್ಕಳೊಂದಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬರುವ ದಿನಗಳಲ್ಲಿ ಸರಿಯಾದ ಮಳೆ, ಬೆಳೆ ಬರಲಿ ಎಂದು ಪ್ರಾರ್ಥಿಸುತ್ತೇನೆ. ನನ್ನ ಜೀವನವನ್ನು ರೈತರಿಗೆ ಮುಡಿಪಾಗಿಡುತ್ತೇನೆ ಎಂದು ಹೇಳಿದರು.

    ನಾಡಿನ ಅನೇಕ ವೀರಶೈವ ಮಠಮಾನ್ಯಗಳು ಅಕ್ಷರ, ಅನ್ನ ದಾಸೋಹ, ವಸತಿ, ಜ್ಞಾನ ನೀಡುವ ಕಾರ್ಯವನ್ನು ಶತ-ಶತಮಾನಗಳಿಂದ ಮಾಡುತ್ತ ಬಂದಿವೆ. ರಾಜ್ಯದ ಮಠ ಮಾನ್ಯಗಳು ಸರ್ಕಾರದ ಸರಿಸಮನಾಗಿ ನಾಡಿನ ಏಳಿಗೆಗೆ ಶ್ರಮಿಸುತ್ತಿವೆ. ಬಸವಣ್ಣನವರ ಕಾಯಕ, ದಾಸೋಹ ತತ್ವ ಅಳವಡಿಸಿಕೊಂಡು ತ್ರಿವಿಧ ದಾಸೋಹದಲ್ಲಿ ತೊಡಗಿಕೊಂಡಿವೆ. ರಾಜ್ಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಠಮಾನ್ಯಗಳು ಮಾಡುತ್ತಿವೆ ಎಂದು ಹೇಳಿದರು.
    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಠಗಳ ಅಭಿವೃದ್ಧಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಮಠಾಧೀಶರು ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

    ಹುಬ್ಬಳ್ಳಿಯ ಡಾ.ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಠಗಳಲ್ಲಿ ಜಾತಿ ವ್ಯವಸ್ಥೆ ಇರುವುದಿಲ್ಲ. ನಮ್ಮ ಮಠಕ್ಕೆ ಬರುವ ಜನರಿಗೆ ಜಾತಿ ಕೇಳುವುದಿಲ್ಲ. ಸಹಪಂಕ್ತಿ ಭೋಜನ ಮೂಲಕ ಸಮಾನತೆ ಎತ್ತಿಹಿಡಿದಿದ್ದೇವೆ ಎಂದು ಹೇಳಿದರು.

    ಗದಗದ ಡಾ.ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ, ಭಕ್ತರ ಕಲ್ಯಾಣೋತ್ಸವಕ್ಕಾಗಿ ಅಭಿನವ ಸಂಗನಬಸವ ಶ್ರೀಗಳು ಬೃಹತ್ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ. ಅದನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಬೆಳೆಸಬೇಕು. ಲಿಂ.ಮಹಾಂತ ಶ್ರೀಗಳು ತಮ್ಮ ಅಪಾರ ಜ್ಞಾನದ ಮೂಲಕ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದರು.

    ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಡಾ.ಮಹಾದೇವ ಶ್ರೀಗಳು, ಬಳಗಾನೂರದ ಮಂಜುಳಾತಾಯಿ, ಮುತ್ತಗಿಯ ರುದ್ರಮುನಿ ಶಿವಾಚಾರ್ಯ ಶ್ರೀಗಳು, ನೇತೃತ್ವ ವಹಿಸಿದ್ದ ಅಭಿನವ ಸಂಗನಬಸವ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ್ದ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಲಿಂಬೆ ಅಭಿವೃದ್ಧಿ ಮಂಡಳಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಸಾಹಿತಿ ಪ.ಗು.ಸಿದ್ದಾಪುರ ಮಾತನಾಡಿದರು.

    ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪಾಸಾಹೇಬಗೌಡ ಪಟ್ಟಣಶೆಟ್ಟಿ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ(ಸಾಸನೂರ), ರಮೇಶ ಭೂಸನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಮುಖಂಡರಾದ ಉಮೇಶ ಕಾರಜೋಳ, ರವಿ ಖಾನಾಪೂರ, ರಘು ಕೌಟಿಲ್ಯ ಇತರರಿದ್ದರು.

    ವಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಸ್ವಾಗತಿಸಿದರು. ಸಂಗಮೇಶ ಗೆಣ್ಣೂರ, ಕೆ.ಸುನಂದಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts