More

    ಸರ್ಕಾರಿ ಶಾಲಾ ಮಕ್ಕಳಿಗೆ ಅರಣ್ಯ ದರ್ಶನ


    ಹನಗೋಡು: ಶಾಲಾ ಕೊಠಡಿಯೊಳಗೆ ಕುಳಿತು ಕಾಡು, ವನ್ಯಪ್ರಾಣಿಗಳು, ಪಕ್ಷಿ ಪ್ರಭೇದಗಳು, ಗಿಡ-ಮರ ಹಾಗೂ ಪರಿಸರದ ಬಗ್ಗೆ ಅರಿಯುತ್ತಿದ್ದ ಮಕ್ಕಳು ನಾಗರಹೊಳೆಯ ಪ್ರಕೃತಿಯ ಮಡಿಲಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.


    ಅರಣ್ಯ ಇಲಾಖೆಯ ಚಿಣ್ಣರ ವನದರ್ಶನ ಯೋಜನೆಯಡಿ ದೊಡ್ಡಹೆಜ್ಜೂರು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಒಂದು ದಿನದ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಮಂಗಳವಾರ ಕರೆದೊಯ್ದು ಅಲ್ಲಿ ಅರಣ್ಯದ ಮಹತ್ವ, ವನ್ಯಜೀವಿಗಳ ಸಂರಕ್ಷಣೆ, ಪರಿಸರ ಉಳಿವಿನ ಅಗತ್ಯತೆ ಕುರಿತು ವೀರನಹೊಸಹಳ್ಳಿ ವನ್ಯಜೀವಿ ವಲಯದ ಆರ್‌ಎ್ಒ ನಮನಾ ನಾರಾಯಣನಾಯಕ್, ಡಿಆರ್‌ಎಫ್‌ಒ ಚಂದ್ರೇಶ್, ಪರಿಸರ ತಜ್ಞ ಗೋಪಿ ಅವರು ಅರಣ್ಯದ ಮಹತ್ವ ತಿಳಿಸಿಕೊಟ್ಟರು.


    ಪ್ರಾಣಿಗಳ ಕಂಡು ಪುಳಕಿತ: ನಾಗರಹೊಳೆ ಉದ್ಯಾನವನದಲ್ಲಿ ಮಕ್ಕಳನ್ನು ವಾಹನದಲ್ಲಿ ಸಫಾರಿಗೆ ಕರೆದೊಯ್ದು, ಜಿಂಕೆ, ಕಡವೆ, ಆನೆ, ಕಾಡೆಮ್ಮೆ, ನವಿಲು, ಕಾಡುಹಂದಿ ಸೇರಿದಂತೆ ವಿವಿಧ ಜಾತಿಯ ಪ್ರಾಣಿ-ಪಕ್ಷಿಗಳನ್ನು ಪರಿಚಯಿಸಿದರು. ಪ್ರಾಣಿಗಳು ಕಂಡಾಗಲಂತೂ ಮಕ್ಕಳು ಪುಳಕಿತರಾಗಿ ಆಶ್ಚರ್ಯ-ಸಂತಸದಿಂದ ವೀಕ್ಷಿಸಿದರು.
    ಗಿಡ-ಮರಗಳ ಪರಿಚಯ: ಕಾಡಿನಲ್ಲಿ ಶ್ರೀಗಂಧ, ತೇಗ, ಬೀಟೆ, ಹೊನ್ನೆ, ಮತ್ತಿ, ನೆಲ್ಲಿಕಾಯಿ, ಬೂರಗ ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಪರಿಚಯಿಸಿ ಈ ಮರಗಳಿಂದಾಗುವ ಅನುಕೂಲಗಳನ್ನು ತಿಳಿಸಿಕೊಟ್ಟರು. ಹತ್ತಾರು ಪಕ್ಷಿಗಳನ್ನು ವೀಕ್ಷಿಸುವಂತೆ ಮಾಡಿದರು. ಅರಣ್ಯದಲ್ಲಿ ನಡಿಗೆ ಮೂಲಕ ಅರಣ್ಯದಲ್ಲಿನ ಗಿಡ-ಮರಗಳು, ನದಿ, ತೊರೆ, ಪ್ರಾಣಿ-ಪಕ್ಷಿಗಳ ಬಗ್ಗೆ ಅರಿತುಕೊಂಡರು. ವಿವಿಧ ಪ್ರಾಣಿಗಳ ಹೆಜ್ಜೆ ಗುರುತು, ಹಿಕ್ಕೆಗಳನ್ನು ಪರಿಚಯಿಸಿದರು.

    ಕುತೂಹಲದ ಪ್ರಶ್ನೆಗಳು: ಅರಣ್ಯ, ಪ್ರಾಣಿ-ಪಕ್ಷಿಗಳ ಕುರಿತ ಮಕ್ಕಳಲ್ಲಿನ ಕುತೂಹಲ ಮೂಡಿತ್ತು. ಅರಣ್ಯದಲ್ಲಿ ಲಕ್ಷಾಂತರ ಮರಗಳು ಬಿದ್ದಿದ್ದರೂ ಏಕೆ ತೆಗೆಯುತ್ತಿಲ್ಲ? ಅಪಾಯಕಾರಿ ಪ್ರಾಣಿಗಳನ್ನೇಕೆ ಸಂರಕ್ಷಿಸಬೇಕು? ಇಲ್ಲಿ ಮರಗಳೇಕೆ ಕಡಿಯುತ್ತಿಲ್ಲ? ಎಂಬಿತ್ಯಾದಿ ಕುತೂಹಲಕಾರಿ ಪ್ರಶ್ನೆಗಳನ್ನು ಅರಣ್ಯಾಧಿಕಾರಿಗಳಿಗೆ ಕೇಳಿ ಉತ್ತರ ಪಡೆದುಕೊಂಡರು.


    ನಾಗರಹೊಳೆ ಸಂರಕ್ಷಿತ ಪ್ರದೇಶ, ವನ್ಯಸಂಪತ್ತು ಬಗೆಗಿನ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಪರಿಸರ ಮತ್ತು ವನ್ಯಪ್ರಾಣಿಗಳ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಸಹ ಏರ್ಪಡಿಸಿದ್ದರು. ಒಟ್ಟಾರೆ ಅರಣ್ಯವನ್ನೇ ಕಾಣದಿದ್ದ ಮಕ್ಕಳಿಗೆ ಹಾಗೂ ಶಿಕ್ಷಕರಿಗೂ ಈ ವನದರ್ಶನ ಅಪಾರ ಮಾಹಿತಿ ದರ್ಶನ ಮಾಡಿಸಿತು.
    ವನದರ್ಶನದಲ್ಲಿ ಸಿಆರ್‌ಪಿ ಶ್ರೀನಿವಾಸಮೂರ್ತಿ, ಮುಖ್ಯ ಶಿಕ್ಷಕ ಸತೀಶಕುಮಾರ್, ಅರಣ್ಯ ರಕ್ಷಕ ಶಿವಣ್ಣ, ದೇವರಾಜ್ ಸೇರಿದಂತೆ ಶಾಲಾ ಶಿಕ್ಷಕರು ಭಾಗವಹಿಸಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts