More

    ಸರ್ಕಾರಿ ಕಾಲೇಜಿಗೆ ಒಲಿದ ಅದೃಷ್ಟ

    ಹಾಸನ: ದ್ವಿತೀಯ ಪಿಯು ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ (ಶೇ. 93) ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ಗೆ ದೊರೆಯುವ ಸೌಲಭ್ಯ ಪಡೆಯಲು ಅರ್ಹವಾಗಿದೆ.

    ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯಬೇಕೆಂಬ ಉದ್ದೇಶದಿಂದ ಜಾರಿಯಾಗಿರುವ ಕೆಪಿಎಸ್ ಪರಿಕಲ್ಪನೆಗೆ ಹಳೇಬೀಡಿನ ಸರ್ಕಾರಿ ವಿದ್ಯಾ ಸಂಸ್ಥೆ ಭಾಜನವಾಗಿರುವುದು ಜನರಲ್ಲಿ ಸಂತಸ ಮೂಡಿಸಿದೆ.

    ಖಾಸಗಿ ಕಾಲೇಜಿಗೆ ಗುಡ್ ಬೈ:
    20 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ ಸರ್ಕಾರಿ ಕಾಲೇಜಿನಲ್ಲಿ ಪ್ರಸ್ತುತ 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದು ಈ ಬಾರಿ ದಾಖಲಾತಿ ಹೆಚ್ಚುವ ನಿರೀಕ್ಷೆಯಿದೆ.
    ಪಿಯುಸಿ ಪ್ರವೇಶಾತಿ ಪ್ರಾರಂಭವಾಗಿ ಮೂರು ದಿನ ಕಳೆದಿದ್ದು ಆಗಲೇ 40 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹಳೇಬೀಡು ಸುತ್ತಮುತ್ತ ಸಾಕಷ್ಟು ಖಾಸಗಿ ಕಾಲೇಜುಗಳಿದ್ದರೂ ಇಲ್ಲಿನ ಬೋಧನಾ ಕೌಶಲ್ಯಕ್ಕೆ ಮನಸೋತಿರುವ ಪಾಲಕರು ಹಳೇಬೀಡಿನ ಸರ್ಕಾರಿ ಕಾಲೇಜಿಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗಿದ್ದಾರೆ.

    ಜಾವಗಲ್, ಹಾಸನ, ಹಗರೆ ಭಾಗದ ಗ್ರಾಮೀಣ ಮಕ್ಕಳಿಗೆ ಹಳೇಬೀಡು ಬಹಳ ಹತ್ತಿರ ಹಾಗೂ ಸಾರಿಗೆ ಸೌಕರ್ಯ ಹೊಂದಿರುವ ಕಾಲೇಜು ಎಂಬುದು ಪ್ಲಸ್ ಪಾಯಿಂಟ್. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 66 ಮಕ್ಕಳು ಉತ್ತಮ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

    50 ಲಕ್ಷ ರೂ. ಅನುದಾನ:
    ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಪ್ರತಿವರ್ಷ ಜಿಲ್ಲೆಯ ಒಂದು ಶಾಲೆಯನ್ನು ಸರ್ಕಾರ ಆಯ್ಕೆ ಮಾಡಿಕೊಳ್ಳುತ್ತಿದ್ದು, ಅಗತ್ಯ ಮೂಲಸೌಕರ್ಯ ಕಲ್ಪಿಸಲು 50 ಲಕ್ಷ ರೂ.ವರೆಗೆ ಅನುದಾನ ನೀಡಲಾಗುತ್ತದೆ. ಕ್ಷೇತ್ರ ಶಾಸಕ, ಪ್ರಾಂಶುಪಾಲರು ಹಾಗೂ ಸ್ಥಳೀಯರ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗಿದೆ. ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 2 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

    ಕೆಪಿಎಸ್ ಯೋಜನೆಯಡಿ ಶಿಕ್ಷಣ ಸಂಸ್ಥೆಗೆ ಹೊಸದಾಗಿ ಸುಸಜ್ಜಿತ ಕ್ರೀಡಾಂಗಣ, 24 ಗಂಟೆ ಶುದ್ಧ ಕುಡಿಯುವ ನೀರಿನ ಘಟಕ, ಎಲ್ಲ ತರಗತಿಗೂ ಸ್ಮಾರ್ಟ್ ಕ್ಲಾಸ್, ಸುಸಜ್ಜಿತ ಲ್ಯಾಬ್ ದೊರೆಯಲಿದೆ. ಕಾಲೇಜಿನಲ್ಲಿ ನುರಿತ 20 ಉಪನ್ಯಾಸಕರಿದ್ದು ವಿಷಯ ಬೋಧನೆಗೆ ಯಾವುದೇ ತೊಂದರೆಯಿಲ್ಲ ಎನ್ನುತ್ತಾರೆ ಪ್ರಾಂಶುಪಾಲ ಎನ್.ಆರ್. ಸೋಮಶೇಖರ್.

    ವಿದ್ಯಾರ್ಥಿಗಳ ಸಂತಸ:
    ಸರ್ಕಾರಿ ಕಾಲೇಜುಗಳೆಂದರೆ ಬೇಕಾಬಿಟ್ಟಿ ಕಲಿಕೆ ಎಂಬ ಅಪವಾದಕ್ಕೆ ನಮ್ಮ ಕಾಲೇಜು ತದ್ವಿರುದ್ಧವಾಗಿದೆ ಎನ್ನುತ್ತಾರೆ ವಿಜ್ಞಾನ ವಿಭಾಗದಲ್ಲಿ 567 ಅಂಕ ಪಡೆದು ಕಾಲೇಜಿಗೆ ಪ್ರಥಮ ರ‌್ಯಾಂಕ್ ಗಳಿಸಿರುವ ಪೂರ್ಣಪ್ರಜ್ಞ. ಎಲ್ಲ ಉಪನ್ಯಾಸಕರು ಅರ್ಥವಾಗುವಂತೆ ಪಾಠ ಮಾಡುತ್ತಿದ್ದರು. ರಜಾ ದಿನಗಳಲ್ಲಿ ಹೆಚ್ಚುವರಿ ತರಗತಿ ನಡೆಸುವ ಮೂಲಕ ಕಲಿಕೆಗೆ ಪ್ರೋತ್ಸಾಹಿಸಿದರು. ಹೀಗಾಗಿ ಅಧಿಕ ಅಂಕ ಗಳಿಸಲು ಸಾಧ್ಯವಾಯಿತು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts