More

    ಸರ್ಕಾರಿ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ

    ರಾಣೆಬೆನ್ನೂರ: ನಗರದ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅಳವಡಿಸಿದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ತಿಂಗಳುಗಳೇ ಕಳೆದರೂ ದುರಸ್ತಿ ಕಾರ್ಯವಾಗಿಲ್ಲ. ಆದ್ದರಿಂದ ಆಸ್ಪತ್ರೆಗೆ ಬರುವ ಜನತೆ ಕುಡಿಯುವ ನೀರಿಗಾಗಿ ಪರದಾಡಬೇಕಿದೆ.

    ಆಸ್ಪತ್ರೆಗೆ ಬರುವ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನಗರಸಭೆ ವತಿಯಿಂದ 2018ರಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ. ಜನತೆ 1 ರೂ. ಕ್ವಾನ್ ಹಾಕಿದರೆ, 1 ಲೀಟರ್ ನೀರು ಬರುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಶುದ್ಧ ಕುಡಿಯುವ ನೀರಿನ ಘಟಕ ಆರಂಭದಲ್ಲಿ ಕಾರ್ಯನಿರ್ವಹಿಸಿರುವುದನ್ನು ಬಿಟ್ಟರೆ, ಪದೆ ಪದೇ ಕೆಟ್ಟು ನಿಲ್ಲುವ ದಿನಗಳೇ ಹೆಚ್ಚಾಗಿವೆ.

    ಈ ಬಾರಿ ಕಳೆದ ಮಾರ್ಚ್ ತಿಂಗಳಲ್ಲಿಯೇ ಘಟಕ ಬಂದ್ ಆಗಿದ್ದು, ಏಳು ತಿಂಗಳು ಕಳೆಯುತ್ತ ಬಂದರೂ ಆಸ್ಪತ್ರೆಯ ವೈದ್ಯರಾಗಲಿ, ನಗರಸಭೆ ಅಧಿಕಾರಿಗಳಾಗಲಿ ದುರಸ್ತಿ ಕಾರ್ಯಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸದ್ಯ ತಾಲೂಕು ಆಸ್ಪತ್ರೆಯ ಅರ್ಧ ಭಾಗವನ್ನು ಕೋವಿಡ್-19 ರೋಗಿಗಳಿಗಾಗಿ ಮೀಸಲಿಡಲಾಗಿದೆ. ಇನ್ನೂಳಿದ ಕಡೆಗಳಲ್ಲಿ ಕೋವಿಡ್-19 ಪರೀಕ್ಷೆ ಸೇರಿ ಇತರ ಕಾರ್ಯಚಟುವಟಿಕೆ ನಡೆಸಲಾಗುತ್ತಿದೆ. ಹೀಗಾಗಿ ಆಸ್ಪತ್ರೆಗೆ ನಿತ್ಯವೂ ರೋಗಿಗಳು ಸೇರಿ ನೂರಾರು ಜನರು ಭೇಟಿ ನೀಡುತ್ತಿದ್ದಾರೆ.

    ಕೋವಿಡ್-19 ಪಾಸಿಟಿವ್ ರೋಗಿಗಳಿಗೆ ಪ್ರತ್ಯೇಕವಾಗಿ ಕುಡಿಯುವ ನೀರು ನೀಡಲಾಗುತ್ತಿದೆ. ಆದರೆ, ಆಸ್ಪತ್ರೆಗೆ ಇತರ ಕಾರ್ಯಗಳಿಗಾಗಿ ಬರಲು ಜನತೆಗೆ ಕುಡಿಯಲು ಹನಿ ನೀರು ದೊರೆಯುತ್ತಿಲ್ಲ. ಹೀಗಾಗಿ ಜನತೆ ಅಕ್ಕಪಕ್ಕದ ಪೆಟ್ರೋಲ್ ಬಂಕ್, ಗೂಡಂಗಡಿ ಹುಡಿಕಿಕೊಂಡು ಹೋಗಿ ನೀರು ಕುಡಿಯುವ ಪರಿಸ್ಥಿತಿ ನಿರ್ವಣವಾಗಿದೆ.

    ಆದ್ದರಿಂದ ತಾಲೂಕು ಆಸ್ಪತ್ರೆ ವೈದ್ಯರು ಹಾಗೂ ನಗರಸಭೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಪಡಿಸಿ ಜನತೆಗೆ ಕುಡಿಯುವ ನೀರು ದೊರಕುವಂತೆ ಮಾಡಬೇಕು ಎಂಬುದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಗ್ರಹವಾಗಿದೆ.

    ಆಸ್ಪತ್ರೆಗೆ ರೋಗಿಗಳು ಮಾತ್ರವಲ್ಲದೇ ಅವರ ಜತೆಗೆ ಇತರ ಜನರು ಬರುತ್ತಾರೆ. ಅವರ ಅನುಕೂಲಕ್ಕಾಗಿ ನಗರಸಭೆಯಿಂದ ನಿರ್ವಿುಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಬಂದ್ ಬಿದ್ದಿದೆ. ಹೀಗಾಗಿ ಜನತೆ ನೀರಿಗಾಗಿ ಪರದಾಡಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು.
    | ಆನಂದ ಎಚ್., ಸ್ಥಳೀಯ ನಿವಾಸಿ

    ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದ್ದು, ಗಮನಕ್ಕೆ ಬಂದಿದೆ. ಕರೊನಾ ಸಲುವಾಗಿ ಆಸ್ಪತ್ರೆಗೆ ಬರುವವರ ಸಂಖ್ಯೆ ಕಡಿಮೆ ಇರುವ ಕಾರಣ ದುರಸ್ತಿ ಮಾಡಿಸಿರಲಿಲ್ಲ. ಆದರೀಗ ಆಸ್ಪತ್ರೆಗೆ ಹೆಚ್ಚಿನ ಜನ ಬರುತ್ತಿರುವ ಹಿನ್ನೆಲೆಯಲ್ಲಿ ನೀರಿನ ಅವಶ್ಯಕತೆಯಿದೆ. ಈ ಬಗ್ಗೆ ಕೂಡಲೇ ನಗರಸಭೆ ಅಧಿಕಾರಿಗಳಿಗೆ ತಿಳಿಸಿ, ದುರಸ್ತಿ ಪಡಿಸಲಾಗುವುದು.
    | ಡಾ. ಪರಮೇಶಪ್ಪ, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts