More

    ಸರ್ಕಾರದ ಮಾರ್ಗಸೂಚಿಯಂತೆ ಕ್ರಮಕೈಗೊಳ್ಳಿ

    ಹಾವೇರಿ: ಉದ್ಯೋಗ, ವ್ಯಾಸಂಗಕ್ಕಾಗಿ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಜಿಲ್ಲೆಗೆ ಮರಳುವವರನ್ನು ಸರ್ಕಾರದ ಎಸ್​ಒಪಿ ಮಾರ್ಗಸೂಚಿಯಂತೆ ತಪಾಸಣೆ, ಕ್ವಾರಂಟೈನ್ ನಿಗಾಕ್ಕೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ತಹಸೀಲ್ದಾರರಿಗೆ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಸೀಲ್ದಾರರೊಂದಿಗೆ ಬುಧವಾರ ವಿಡಿಯೋ ಸಂವಾದ ನಡೆಸಿದ ಅವರು ವಿದೇಶದಲ್ಲಿರುವವರು ಹಡಗು, ವಿಮಾನಗಳ ಮೂಲಕ ಸ್ವದೇಶಕ್ಕೆ ಬರಲಿದ್ದಾರೆ. ರಾಜ್ಯಕ್ಕೆ ಅಂದಾಜು 10,800 ಜನ ಮರಳಲಿದ್ದಾರೆ. ಇದರಲ್ಲಿ ಜಿಲ್ಲೆಗೆ ಹಿಂತಿರುಗುವವರ ಸಂಖ್ಯೆ ರಾಜ್ಯ ಸರ್ಕಾರದಿಂದ ರವಾನೆಯಾಗಲಿದೆ. ಈ ಪ್ರಯಾಣಿಕರು ಜಿಲ್ಲೆಗೆ ಪ್ರವೇಶಿಸುವ ಮುನ್ನ ಗಡಿ ಭಾಗದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸೂಕ್ತ ತಪಾಸಣೆ ಹಾಗೂ ಕ್ವಾರಂಟೈನ್​ಗೆ ಒಳಪಡಿಸುವ ಕುರಿತು ಕ್ರಮಕೈಗೊಳ್ಳಬೇಕು ಎಂದರು.

    ವಿಮಾನದ ಮೂಲಕ ಬೆಂಗಳೂರು ಹಾಗೂ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರನ್ನು ಏರ್​ಪೋರ್ಟ್​ನಲ್ಲಿಯೇ ತಪಾಸಣೆ ನಡೆಸಲಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಫಿವರ್, ಕೆಮ್ಮು, ಶೀತ, ಚಳಿಜ್ವರ, ತಲೆನೋವು, ಸುಸ್ತು, ಗಂಟಲ ಕೆರೆತ, ಉಸಿರಾಟದ ತೊಂದರೆ, ಮೈಕೈ ನೋವು, ಅತಿಸಾರ, ಎದೆನೋವು ಇತ್ಯಾದಿ ತೊಂದರೆಗಳಿಗೆ ಒಳಗಾಗಿರುವವರನ್ನು ಎ ವರ್ಗ ಎಂದು ಗುರುತಿಸಿ ಅಲ್ಲಿಯೇ ಡಿಸಿಎಚ್​ಸಿ (ಈಛಿಛಜ್ಚಿಚಠಿಛಿಛ ಇಟಡಜಿಛ ಏಛಿಚ್ಝಠಿಜ ಇಚ್ಟಛಿ ಇಛ್ಞಿಠಿಛ್ಟಿ) ವರ್ಗಾಯಿಸಲಾಗುವುದು. ಪ್ರಥಮ ಪರೀಕ್ಷೆ ನೆಗೆಟಿವ್ ಆದಲ್ಲಿ ಐದರಿಂದ ಏಳು ದಿನಗಳ ನಡುವೆ ಎರಡು ಪರೀಕ್ಷೆಯನ್ನು ಹಾಗೂ 12ದಿನಕ್ಕೆ ಮೂರನೇ ಪರೀಕ್ಷೆಯನ್ನು ನಡೆಸಿ ಅದು ನೆಗೆಟಿವ್ ಬಂದಲ್ಲಿ ಅವರನ್ನು ಸಂಬಂಧಪಟ್ಟ ಜಿಲ್ಲೆಗೆ ಏಳು ದಿನಗಳ ಗೃಹ ಪ್ರತ್ಯೇಕತೆ ಷರತ್ತಿಗೊಳಪಟ್ಟು ಕಳುಹಿಸಿಕೊಡಲಾಗುತ್ತದೆ. ಇದಲ್ಲದೆ ವಿದೇಶದಿಂದ ಬರುವ 60ವರ್ಷ ಮೇಲ್ಪಟ್ಟವರನ್ನು ಜಿಲ್ಲೆಯಲ್ಲಿ ತಪಾಸಣೆ ಮಾಡಿ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು. ಹಾಗೂ 60 ವರ್ಷದೊಳಗಿನವರನ್ನು ಯಾವುದೇ ರೋಗ ಲಕ್ಷಣವಿಲ್ಲದವರನ್ನು ತಪಾಸಣೆ ನಡೆಸಿ ನೇರವಾಗಿ ಅವರ ಮನೆಗೆ ಕಳುಹಿಸಿ ಗೃಹಪ್ರತ್ಯೇಕತೆಯಲ್ಲಿರಿಸಬೇಕು ಎಂದರು.

    ಜಿಲ್ಲೆಯ ಗಡಿ ಪ್ರವೇಶಕ್ಕೆ ಮುನ್ನ ಇವರನ್ನು ಚೆಕ್​ಪೋಸ್ಟ್ ಪ್ರದೇಶದ ಸ್ಥಳದಲ್ಲಿ ಕಡ್ಡಾಯವಾಗಿ ಪಲ್ಸ್ ಆಕ್ಸಿಮೀಟರ್ ಬಳಸಿ ಪರೀಕ್ಷೆ ಮಾಡಬೇಕು. ಕಡ್ಡಾಯವಾಗಿ ಇವರ ಮೊಬೈಲ್​ನಲ್ಲಿ ಕೋವಿಡ್ ಆರೋಗ್ಯ ಸೇತು ಆಪ್, ಕೋವಿಡ್ ಕ್ವಾರಂಟೈನ್ ವಾಚ್ ಆಪ್ ಹಾಗೂ ಆಪ್ತಮಿತ್ರ ಆಪ್​ಗಳನ್ನು ಅಳವಡಿಸಿಕೊಂಡಿರುವುದನ್ನು ಪರಿಶೀಲಿಸಬೇಕು. ಇಲ್ಲವಾದಲ್ಲಿ ಸ್ಥಳದಲ್ಲೇ ಡೌನ್​ಲೋಡ್​ವಾಡಿಕೊಳ್ಳಲು ತಿಳಿಸಬೇಕು. ಇದಕ್ಕಾಗಿ ಐಟಿ ಸಿಬ್ಬಂದಿಯೊಬ್ಬರನ್ನು ಚೆಕ್​ಪೋಸ್ಟ್​ಗಳಲ್ಲಿ ನೇಮಿಸಬೇಕು. ತಪಾಸಣೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಿಸಬೇಕು. ಜಿಲ್ಲೆಯೊಳಗೆ ಬರುವ ಪ್ರತಿ ವಿದೇಶಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಎಡಮುಂಗೈ ಮೇಲೆ ಕ್ವಾರಂಟೈನ್ ಸೀಲ್​ನ್ನು ಹಾಕಬೇಕು ಎಂದರು.

    ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಹಗುರವಾಗಿ ಪರಿಗಣಿಸಬೇಡಿ. ಚೆಕ್​ಪೋಸ್ಟ್​ಗಳಿಗೆ ಅಗತ್ಯವಾದ ವೈದ್ಯಕೀಯ ತಂಡ, ಐಟಿ ತಂಡ, ತಪಾಸಣಾ ತಂಡ, ಹೋಂ ಹಾಗೂ ಸಾಂಸ್ಥಿಕ ಕ್ವಾರಂಟೈನ್​ಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಎಸಿಗಳಾದ ಡಾ. ದಿಲೀಪ ಶಶಿ, ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಶಂಕರ ಜಿ.ಎಸ್, ಕಾರ್ವಿುಕ ಇಲಾಖೆ ಅಧಿಕಾರಿ ಲಲಿತಾ ಸಾತೇನಹಳ್ಳಿ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ಇತರರಿದ್ದರು.

    ಲಾಕ್​ಡೌನ್ ನಂತರ ಸೀಲ್​ಡೌನ್ ಬಿಸಿ

    ಸವಣೂರ: ಕರೊನಾ ಸೋಂಕಿತ ವ್ಯಕ್ತಿಗಳು ವಾಸಿಸುತ್ತಿದ್ದ ಪಟ್ಟಣದ ಹೊರವಲಯದ ಎಸ್​ಎಂ ಕೃಷ್ಣ ನಗರಕ್ಕೆ ಬುಧವಾರ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯರ ತಂಡ ಆಗಮಿಸಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿತು. ಅಲ್ಲದೆ, 7 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಿದ್ದಾರೆ.

    ಎಸ್​ಎಂ ಕೃಷ್ಣ ನಗರದಲ್ಲಿ 374 ಮನೆಗಳಿದ್ದು, ಪ್ರತ್ಯೇಕವಾಗಿ ಆರೋಗ್ಯ ತಪಾಸಣೆ ನಡೆಸಿ ಕರೊನಾ ಕುರಿತು ಜಾಗೃತಿ ಮೂಡಿಸಲಾಯಿತು. ಲಾಕ್​ಡೌನ್ ನಂತರ ಪಟ್ಟಣದ ಜನತೆಗೆ ಸೀಲ್​ಡೌನ್ ಬಿಸಿ ತಟ್ಟಿದೆ. ಎಸ್​ಎಂ ಕೃಷ್ಣ ನಗರವನ್ನು ಸಂಪೂರ್ಣ ಸೀಲ್​ಡೌನ್ ಮಾಡಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಆರ್​ಐ ಡಿ.ಎಂ. ಪಾಟೀಲ ಹಾಗೂ ತಂಡದವರು ದಿನಸಿ ಹಾಗೂ ಜೀವನ ಅವಶ್ಯಕ ವಸ್ತುಗಳ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ.

    ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ವ್ಯವಸ್ಥೆ

    ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಎಂದು ಗುರುತಿಸಲಾಗಿದೆ. ತಾಲೂಕಾವಾರು ಫಿವರ್ ಕ್ಲಿನಿಕ್ ಹಾಗೂ ಕೋವಿಡ್ ಗಂಟಲ ದ್ರವ ಮಾದರಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕೈಗೊಂಡಿದೆ. ಫೀವರ್ ಕೇಂದ್ರಗಳು: ಹಾವೇರಿ ನಗರದ ಕೆಇಬಿ ಕಲ್ಯಾಣಮಂಟಪ, ಬ್ಯಾಡಗಿ ಸಾರ್ವಜನಿಕ ಆಸ್ಪತ್ರೆ ಟ್ರೋಮಾ ಕೇರ್ ಸೆಂಟರ್, ಸವಣೂರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಖಾಲಿ ಇರುವ ಸಿಬ್ಬಂದಿ ಕ್ವಾರ್ಟರ್ಸ್, ಹಾನಗಲ್ಲನಲ್ಲಿ ಎಂಕೆಬಿಎಸ್ ಸ್ಕೂಲ್, ಶಿಗ್ಗಾಂವಿ ತಾಲೂಕಾಸ್ಪತ್ರೆ ಮೀಟಿಂಗ್ ಹಾಲ್, ರಾಣೆಬೆನ್ನೂರಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಖಾಲಿಯಿರುವ ಸಿಬ್ಬಂದಿ ಕ್ವಾರ್ಟರ್ಸ್, ಹಿರೇಕೆರೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಹಳೆ ಕ್ಯಾಂಟೀನ್​ನಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಾಗಿದೆ.

    ಸ್ವ್ಯಾಬ್ ಸಂಗ್ರಹ ಕೇಂದ್ರ: ಹಾವೇರಿ ನಗರದ ಜಿಲ್ಲಾಸ್ಪತ್ರೆ, ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರ, ಸವಣೂರ, ಶಿಗ್ಗಾಂವಿ ಹಾಗೂ ಹಾನಗಲ್ಲ ಕೇಂದ್ರಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ವಾ್ಯಬ್ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದೆ.

    ಕ್ವಾರಂಟೈನ್ ಕೇಂದ್ರ: ಹಾವೇರಿ ನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ನಿಲಯ (ಕೆಎಸ್​ಆರ್​ಟಿಸಿ ಡಿಪೋ ಹತ್ತಿರ) ಹಾಗೂ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ (ಸ್ಪೂರ್ತಿ ಬಡಾವಣೆ), ರಾಣೆಬೆನ್ನೂರ ನಗರದ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ನಿಲಯ (ಹುಣಸಿಕಟ್ಟಿ ರಸ್ತೆ), ಬ್ಯಾಡಗಿ ನಗರದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯ, ಹಿರೇಕೆರೂರ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆ ಹಾಗೂ ದೂದಿಹಳ್ಳಿ ಮುರಾರ್ಜಿ ದೇಸಾಯಿ ಬಾಲಕರ ಮತ್ತು ಬಾಲಕಿಯರ ವಸತಿ ಶಾಲೆ, ಸವಣೂರ ತಾಲೂಕು ಮಾದಾಪುರದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯ, ಹಾನಗಲ್ಲ ತಾಲೂಕು ಅಕ್ಕಿಆಲೂರು ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆ ಹಾಗೂ ಶಿಗ್ಗಾಂವಿ ನಗರದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಜಿಲ್ಲೆಯ ರಾಣೆಬೆನ್ನೂರ, ಹಿರೇಕೆರೂರು ಹಾಗೂ ಶಿಗ್ಗಾಂವಿ ಸಾಮಾನ್ಯ ಆಸ್ಪತ್ರೆಗಳಲ್ಲಿ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್​ಗಳನ್ನು (ಎಸ್​ಐಸಿ) ಆರಂಭಿಸಲಾಗಿದೆ.

    ನಿಟ್ಟುಸಿರು ಬಿಟ್ಟ ಜನ

    ಹಾವೇರಿ: ಎರಡು ದಿನಗಳಲ್ಲಿ ಇಬ್ಬರಲ್ಲಿ ಕರೊನಾ ಪತ್ತೆಯಾಗಿದ್ದರಿಂದ ಜಿಲ್ಲಾದ್ಯಂತ ಭೀತಿಯ ವಾತಾವರಣ ನಿರ್ವಣವಾಗಿತ್ತು. ಆದರೆ, ಬುಧವಾರ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದಿರುವುದರಿಂದ ಜನ ನಿಟ್ಟುಸಿರುವ ಬಿಡುವಂತಾಗಿದೆ.

    ಬುಧವಾರ ಮತ್ತೆ 56 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಿ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ 2,635 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಿದ್ದು, ಅದರಲ್ಲಿ 2,263ಜನರ ವರದಿ ನೆಗೆಟಿವ್ ಬಂದಿದೆ. ಇಬ್ಬರದು ಪಾಸಿಟಿವ್ ಬಂದಿದೆ. ಇನ್ನು 370 ಜನರ ಪರೀಕ್ಷಾ ವರದಿ ಬರಬೇಕಿದೆ. ಒಟ್ಟು 219 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಬುಧವಾರ ಒಬ್ಬರನ್ನು ಐಸಿಯುನಲ್ಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ. ಪಾಸಿಟಿವ್ ಪತ್ತೆಯಾಗಿರುವ ರೋಗಿ ನಂಬರ್ 639 ಹಾಗೂ 672 ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹೊಂದಿದ್ದ 21 ಜನರ ಗಂಟಲ ದ್ರವ ಪರೀಕ್ಷೆಗೆ ಕಳಿಸಲಾಗಿದ್ದು, ಅದರಲ್ಲಿ 8 ಜನರ ವರದಿ ನೆಗೆಟಿವ್ ಬಂದಿವೆ. 13 ಜನರ ವರದಿ ಬರಬೇಕಿದೆ. ದ್ವಿತೀಯ ಸಂಪರ್ಕ ಹೊಂದಿದ್ದ 25 ಜನರ ಮಾದರಿಯನ್ನು ವಾರದ ನಂತರ ಕಳಿಸಲಾಗುವುದು ಎಂದು ತಿಳಿಸಿದ್ದಾರೆ.

    ತಾಲೂಕುವಾರು ಅಕ್ಕಿ, ತೊಗರಿ ಬೇಳೆ ಹಂಚಿಕೆ

    ಹಾವೇರಿ: ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಮೇ ತಿಂಗಳ 1,33,620ಕ್ವಿಂಟಾಲ್ ಅಕ್ಕಿ ಮತ್ತು 3,891.08ಕ್ವಿಂಟಾಲ್ ತೊಗರಿಬೇಳೆಯನ್ನು ಹಂಚಿಕೆ ಮಾಡಲಾಗಿದೆ. ಬ್ಯಾಡಗಿ ತಾಲೂಕಿಗೆ 11,870 ಕ್ವಿಂಟಾಲ್ ಅಕ್ಕಿ ಹಾಗೂ 347.10 ಕ್ವಿಂಟಾಲ್ ತೊಗರಿಬೇಳೆ, ಹಾನಗಲ್ಲ ತಾಲೂಕಿಗೆ 22,950 ಕ್ವಿಂ. ಅಕ್ಕಿ ಹಾಗೂ 648.65 ಕ್ವಿಂ. ತೊಗರಿಬೇಳೆ, ಹಾವೇರಿ ತಾಲೂಕಿಗೆ 22,810 ಕ್ವಿಂ. ಅಕ್ಕಿ ಹಾಗೂ 688.08 ಕ್ವಿಂ. ತೊಗರಿಬೇಳೆ, ಹಿರೇಕೆರೂರ ತಾಲೂಕಿಗೆ 19,920 ಕ್ವಿಂ. ಅಕ್ಕಿ ಹಾಗೂ 593.53 ಕ್ವಿಂ. ತೊಗರಿಬೇಳೆ, ರಾಣೆಬೆನ್ನೂರ ತಾಲೂಕಿಗೆ 26,660ಕ್ವಿಂ. ಅಕ್ಕಿ ಹಾಗೂ 777.42ಕ್ವಿಂ. ತೊಗರಿಬೇಳೆ, ಸವಣೂರ ತಾಲೂಕಿಗೆ 14,080 ಕ್ವಿಂ. ಅಕ್ಕಿ ಹಾಗೂ 394.22 ಕ್ವಿಂ. ತೊಗರಿಬೇಳೆ, ಶಿಗ್ಗಾಂವಿ ತಾಲೂಕಿಗೆ 15,330 ಕ್ವಿಂ. ಅಕ್ಕಿ ಹಾಗೂ 442.08 ಕ್ವಿಂ. ತೊಗರಿಬೇಳೆ ಹಂಚಿಕೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts