More

    ಸರ್ಕಾರದ ನೆರವಿಲ್ಲದೇ ಮೆಗಾ ಡೇರಿ ಆರಂಭ


    ಹಾಸನ : ಜಿಲ್ಲೆಯನ್ನು ಕಡೆಗಣಿಸುತ್ತಿರುವ ಸರ್ಕಾರದಿಂದ ಯಾವುದೇ ನೆರವು ಕೋರದೆ ರೈತರ ಅಭಿವೃದ್ಧಿಗಾಗಿ 500 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ಆರಂಭಿಸಲಾಗುವುದು ಎಂದು ಹಾಸನ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರೂ ಆದ ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

    ಚನ್ನರಾಯಪಟ್ಟಣ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಿಲ್ಲೆಯ ಸಹಕಾರಿ ಒಕ್ಕೂಟ ವತಿಯಿಂದ ಶುಕ್ರವಾರ ಅಯೋಜಿಸಿದ್ದ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ಸಹಕಾರಿ ರಂಗದಲ್ಲಿ ಶಿಸ್ತುಬದ್ಧ ಆಡಳಿತದಿಂದ ಜಿಲ್ಲೆಯ ಸಹಕಾರಿ ರಂಗಗಳು ಉತ್ತಮ ಸಾಧನೆ ಮಾಡಿವೆ. ರಾಜ್ಯದ 13 ಒಕ್ಕೂಟಗಳಲ್ಲೇ ಹಾಲಿಗೆ ಅತಿಹೆಚ್ಚಿನ ದರ ನೀಡುವ ಮೂಲಕ ಜಿಲ್ಲೆಯ ರೈತರ ನೆರವಿಗೆ ಹಾಸನ ಹಾಲು ಒಕ್ಕೂಟ ನಿಂತಿದೆ ಎಂದರು.


    ನೆರೆಯ ಹೈದರಾಬಾದ್‌ನಲ್ಲಿ ಡೇರಿ ಘಟಕ ಆರಂಭ ಮಾಡಲಾಗುತ್ತಿದ್ದು, ಅಂಡಮಾನ್‌ಗೆ ಐಸ್‌ಕ್ರೀಂ ಮತ್ತು ಸೇನೆಗೆ ಹಾಲು ಪೂರೈಸುವ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪಡೆದ ಶಾಸಕ ಸಿ.ಎನ್.ಬಾಲಕೃಷ್ಣ ರಾಜ್ಯದ 224 ಶಾಸಕರುಗಳಲ್ಲೇ ಅತ್ಯಂತ ಕ್ರಿಯಾಶೀಲ ಕೆಲಸಗಾರ. ಸಹಕಾರಿ ಕ್ಷೇತ್ರದ ಅವರ ಸಾಧನೆ ಅಮೂಲ್ಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಸಲುವಾಗಿ ತಾಲೂಕಿನ 350 ಹಳ್ಳಿಗಳಲ್ಲಿ ಡೇರಿ ತೆರೆಯಲಾಗಿದೆ. ಉಳಿದ ಹಳ್ಳಿಗಳಲ್ಲಿಯೂ ಮಾರ್ಚ್ ಒಳಗೆ ಡೇರಿ ಆರಂಭಿಸಿ ಪ್ರತಿ ಹಳ್ಳಿಯಲ್ಲಿಯೂ ಜನರ ಜೀವನವನ್ನು ಸುಭದ್ರಗೊಳಿಸಲಾಗುವುದು ಎಂದರು.


    ಸಕ್ಕರೆ ಕಾರ್ಖಾನೆ ಖಾಸಗೀಕರಣದಿಂದ ರೈತರನ್ನು, ಕಾರ್ಖಾನೆಯನ್ನು ಮತ್ತು ನೌಕರರನ್ನು ಉಳಿಸುವ ಕೆಲಸ ಮಾಡಲಾಗಿದೆ. ಖಾಸಗೀತನದ ವಿರುದ್ಧ ಹೋರಾಟ, ಟೀಕೆಗಳಿಗೆ ಹೆದರಿದ್ದರೆ ಇವತ್ತು ಕಾರ್ಖಾನೆ ಮುಚ್ಚಬೇಕಾಗಿತ್ತು. ಸದ್ಯವೀಗ ಲಾಭದಲ್ಲಿರುವ ಕಾರ್ಖಾನೆಯಿಂದ 4ನೇ ಬಾರಿಗೆ ಸಕ್ಕರೆ ವಿತರಣೆ, ಸರ್ಕಾರದ ಸಾಲ ತೀರಿಸಿ, ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ 25 ಕೋಟಿ ರೂ. ಠೇವಣಿ ಇಡಲಾಗಿದೆ. ಇದರೊಂದಿಗೆ ಕಾರ್ಖಾನೆಯ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಉಳಿಸಲಾಗಿದೆ ಎಂದರು.


    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಮಾತನಾಡಿದರು. ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪಡೆದ ಶಾಸಕರನ್ನು ವಿವಿಧ ಸಹಕಾರಿ ಸಂಘಗಳು ಅಭಿನಂದಿಸಿದವು. ರೈತರ ಆರೋಗ್ಯ ಸಂಜೀವಿನಿ ಯಶ್ವಸಿನಿ ಆರೋಗ್ಯ ವಿಮೆಯ ಬಾಂಡ್‌ಗಳನ್ನು ಫಲಾನುಭವಿಗಳಿಗೆ ಇದೇ ಸಂದರ್ಭ ವಿತರಿಸಲಾಯಿತು.


    ಪುರಸಭೆ ಅಧ್ಯಕ್ಷೆ ರಾಧಾ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪುಟ್ಟಸ್ವಾಮಿಗೌಡ, ರಾಜ್ಯ ಹಾಲು ಮಾರಾಟ ಮಹಾಮಂಡಲ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜೇಗೌಡ, ನಿರ್ದೇಶಕ ಸತೀಶ್, ಪುಟ್ಟಸ್ವಾಮಿಗೌಡ, ಎಚ್‌ಎಸ್‌ಸ್‌ಕೆ ಅಧ್ಯಕ್ಷ ಸಿ.ಎನ್.ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಂಜುಂಡೇಗೌಡ, ಮುಖಂಡರಾದ ಬಿ.ಎಚ್.ಶಿವಣ್ಣ, ಪರಮಕೃಷ್ಣೇಗೌಡ, ಅನಿಲ್‌ಮರಗೂರು, ವಿ.ಎನ್.ರಾಜಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts