More

    ಸಮಾಜ ಸೇವೆಯಲ್ಲೂ ವಿತರಕರು ಮುಂದು

    ಹೊಳೆನರಸೀಪುರ: ತಾಲೂಕಿನ ವಿತರಕರು ತಮ್ಮ ವ್ಯಾಪಾರಕ್ಕೆ ಸೀಮಿತವಾಗದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಸೇವೆ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹೋಟೆಲ್‌ಗಳೇ ಇರಲಿಲ್ಲ. ಅಂತಹ ಕಷ್ಟದ ಸಂದರ್ಭದಲ್ಲಿ ತಾಲೂಕು ವಿತರಕರ ಸಂಘದ ಸದಸ್ಯರು ಕರ್ತವ್ಯನಿರತ ಪೊಲೀಸರಿಗೆ ಅನೇಕ ದಿನ ಊಟ ಹಾಕಿ ಕರ್ತವ್ಯಕ್ಕೆ ಪ್ರೋತ್ಸಾಹ ನೀಡಿದ್ದು ಶ್ಲಾಘನೀಯ ಎಂದು ನಗರಠಾಣೆ ಸಬ್‌ಇನ್ಸ್‌ಪೆಕ್ಟರ್ ಅರುಣ್ ಮೆಚ್ಚುಗೆ ವ್ಯಕ್ತಪಡಿಸಿದರು.

    ತಾಲೂಕು ವಿತರಕರ ಸಂಘ ಮಂಗಳವಾರ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ, ಚುನಾವಣಾ ಸಮೀಕ್ಷೆ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಪಟ್ಟಣದಲ್ಲಿ ನೀವು ನೀಡಿದ ಧನಸಹಾಯದಿಂದ ನಾವು ಸಿಸಿ ಕ್ಯಾಮರಾ ಅಳವಡಿಸಿದ್ದೆವು. ಅದರಿಂದಾಗಿ ಮಹಿಳೆಯ ಕೊಲೆ ಪ್ರಕರಣ, ಇಬ್ಬರ ಸಾವಿಗೆ ಕಾರಣವಾಗಿದ್ದ ಅಪರಿಚಿತ ವಾಹನ ಪತ್ತೆಗೆ ಸಹಕಾರಿ ಆಯಿತು ಎಂದರು.

    ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್ ಸನ್ಮಾನ ಸ್ವೀಕರಿಸಿ ಮಾತನಾಡಿ, ವರ್ತಕರು ವ್ಯಾಪಾರದ ಜತೆಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇಂದಿನ ದಿನದಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ತುಂಬ ಹೆಚ್ಚಾಗಿದೆ. ಮಕ್ಕಳು ಹೆಚ್ಚು ಮೊಬೈಲ್ ಬಳಸಿದರೆ ಕಣ್ಣಿನ ಮತ್ತು ಮೆದುಳಿನ ಮೇಲೆ ಕೆಟ್ಟಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

    ಸಂಘದ ಅಧ್ಯಕ್ಷ ಎಚ್.ವಿ. ಸುರೇಶ್‌ಕುಮಾರ್ ಮಾತನಾಡಿ, ವಿತರಕರಿಗೆ ಕೆಲವು ಕಂಪನಿಗಳು ಮೇಲಿಂದ ಮೇಲೆ ತೊಂದರೆ ನೀಡುತ್ತಿದ್ದವು. ಇಂತಹ ಕೆಲವು ಕಂಪನಿಗಳ ವಿರುದ್ಧ ಹೋರಾಡಿ ನ್ಯಾಯ ದೊರಕಿಸಿಕೊಳ್ಳಲು ಸ್ಥಾಪನೆ ಆದ ವಿತರಕರ ಸಂಘ ಇಂದು ದೇಶಾದ್ಯಂತ ಅತ್ಯಂತ ಬಲಿಷ್ಠ ಸಂಘವಾಗಿದೆ ಎಂದರು.

    ಸನ್ಮಾನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸರ್ಕಾರಿ ಪ್ರೌಢಶಾಲೆಯ ಪ್ರತಿಕ್ಷಾ ಹಾಗೂ ವಿಕಾಶ್ ದೇವಾಂಗ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಚುನಾವಣೆ ಸಮೀಕ್ಷೆ ಸ್ಪರ್ಧೆಯಲ್ಲಿ ಹೆಚ್ಚು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಯೋಗಾನಂದ, ನವ್ಯಾ ಅವರಿಗೆ ನಗದು ಬಹುಮಾನ ನೀಡಲಾಯಿತು. 35 ವರ್ಷಕ್ಕೂ ಹೆಚ್ಚುಕಾಲ ವ್ಯಾಪಾರ ಮಾಡಿ ನಿವೃತ್ತಿ ಪಡೆದ ಶ್ರೀನಿವಾಸ್ ಹಾಗೂ ರಿಯಾಸ್ ಪಾಶ ಅವರನ್ನು ಸನ್ಮಾನಿಸಲಾಯಿತು.

    ರಾಮನಾಥ್, ರೋಹಿತ್, ಚಂದ್ರು, ಮಹೇಂದ್ರಬಾಬು, ಶ್ರೀನಿವಾಸ್, ನಾಗಪ್ಪ, ಶಂಕರನಾರಾಯಣ್, ರಾಮಣ್ಣಿ, ಅಶ್ವಥ್, ಕಾರ್ತಿಕ್, ಜೀವನ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಾಸುದೇವ್ ಮೂರ್ತಿ ನಿರೂಪಿಸಿದರು, ಗೌತಮ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts