More

    ಸಮಾಜದ ಪ್ರತಿಭೆ ಪ್ರೋತ್ಸಾಹಿಸುವುದು ಅಗತ್ಯ

    ಕುಮಟಾ: ಧರ್ಮ, ಸಂಸ್ಕಾರ, ಸಂಸ್ಕೃತಿ ಹಾಗೂ ಮೌಲ್ಯಗಳಿಗೆ ಹೆಸರಾದ ವಿಪ್ರ ಸಮಾಜ ಬದುಕನ್ನು ಎಲ್ಲ ಕೋನಗಳಿಂದ ದೈವಿಕ ಶ್ರದ್ಧೆಯಿಂದ ಕಂಡವರು. ಸಮಾಜದ ಪ್ರತಿಭೆ ಹಾಗೂ ಸಾಧಕರಿಗೆ ಪ್ರೋತ್ಸಾಹಿಸುವುದು ಅಭಿಮಾನದ ಕಾರ್ಯವಾಗಿದ್ದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂದು ಇಡಗುಂಜಿ ದೇವಸ್ಥಾನದ ಧರ್ಮದರ್ಶಿ ಡಾ. ಜಿ.ಜಿ.ಸಭಾಹಿತ ಅಗ್ರಹಾರ ಹೇಳಿದರು.

    ತಾಲೂಕಿನ ಹೆಗಡೆಯ ವಿಪ್ರ ಒಕ್ಕೂಟ ಹಾಗೂ ವೇದ ಸಂಸ್ಕೃತ ಅಕಾಡೆಮಿ ಸಹಯೋಗದಲ್ಲಿ ಸ್ಥಳೀಯ ಮಹಾಗಣಪತಿ ಸಂಸ್ಕೃತ ಪಾಠಶಾಲೆಯ ಪ್ರಾಂಗಣದಲ್ಲಿ ವಾರ್ಷಿಕ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಗಡೆಯ ವಿಪ್ರ ಒಕ್ಕೂಟದ ಧ್ಯೇಯ ಹಾಗೂ ರಚನಾತ್ಮಕ ಕಾರ್ಯಗಳು ಸ್ತುತ್ಯಾರ್ಹವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಗೌರವಾಧ್ಯಕ್ಷ ಹಿರಿಯ ವೈದಿಕ ವೇ. ಸುಬ್ರಹ್ಮಣ್ಯ ಶರ್ಮಾ ಚಿತ್ರಿಗೆಮಠ ಮಾತನಾಡಿ, ವಿಪ್ರ ಸಮಾಜ ಯಾವುದೇ ಕ್ಷೇತ್ರದಲ್ಲಿ ಬದುಕನ್ನು ಆರಿಸಿಕೊಂಡರೂ ಎಂದಿಗೂ ಗುರು-ಹಿರಿಯರ ಮಾರ್ಗದರ್ಶನ, ಪಾರಂಪರಿಕ ಸಂಸ್ಕಾರ, ಜನಿವಾರ ಹಾಗೂ ಗಾಯತ್ರೀ ನಿತ್ಯಕರ್ವನುಷ್ಠಾನದ ಶಿಸ್ತನ್ನು ತಾತ್ಸಾರ ಮಾಡಬಾರದು. ಸಮಾಜದ ಉನ್ನತಿ ಹಾಗೂ ಅಸ್ಮಿತೆಯ ಮಹತ್ವಗಳನ್ನು ಪ್ರತಿಯೊಬ್ಬರೂ ತಮ್ಮೊಳಗೆ ಜಾಗೃತವಾಗಿಟ್ಟುಕೊಳ್ಳಬೇಕು. ಸಮಾಜದಲ್ಲಿ ಸಂಸ್ಕಾರ ಹಾಗೂ ಸುಪ್ರೇರಣೆಗಾಗಿಯೇ ವಿಪ್ರ ಒಕ್ಕೂಟ ನಿರಂತರ ಕೆಲಸ ಮಾಡುತ್ತಿದೆ ಎಂದರು.

    ವಿದ್ವಾನ್ ನೀಲಕಂಠ ಯಾಜಿ ಬೈಲೂರು ಅಭಿನಂದನಾ ನುಡಿಗಳನ್ನಾಡಿದರು. ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರವೀಂದ್ರ ಭಟ್ ಸೂರಿ ಅವರಿಗೆ ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ಆರ್ತತ್ರಾಣ ನಿಧಿ ವಿತರಿಸಲಾಯಿತು. ಹಿರಿಯ ವಿದ್ವಾಂಸರಾದ ವೇ. ನರಸಿಂಹ ಜೋಶಿ, ವೇ. ರಮೇಶ ವರ್ಧನ್ ಇದ್ದರು.

    ಬೆಳಿಗ್ಗೆ ಮೂಡಕೇರಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತ್ಯೂಷ ಪೂಜೆ ಹಾಗೂ ಮಧ್ಯಾಹ್ನ ಸಂಸ್ಕೃತ ಪಾಠಶಾಲೆಯಲ್ಲಿ ಚತುರ್ದ್ರವ್ಯಾತ್ಮಕ ಗಣಪತಿ ಅಥರ್ವಶೀರ್ಷ ಹವನ ಜರುಗಿತು. ಒಕ್ಕೂಟದ ಕಾರ್ಯದರ್ಶಿ ಡಾ. ಗೋಪಾಲಕೃಷ್ಣ ಹೆಗಡೆ ಸ್ವಾಗತಿಸಿ ನಿರ್ವಹಿಸಿದರು. ಒಕ್ಕೂಟದ ಅಧ್ಯಕ್ಷ ಡಾ. ಯು.ಜಿ.ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ ಎಂ.ಎಸ್. ಹೆಗಡೆ, ಸದಸ್ಯರಾದ ವೇ. ಗಣಪತಿ ಹೆಗಡೆ, ಗೋದಾವರಿ ಹೆಗಡೆ ಇನ್ನಿತರರು ಇದ್ದರು. ಸುಧಾಶಾಸ್ತ್ರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts