More

    ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಿಸಿ

    ನರಗುಂದ: ಕಳೆದೊಂದು ತಿಂಗಳಿನಿಂದ ರೈತರು ಯೂರಿಯಾ ಗೊಬ್ಬರಕ್ಕಾಗಿ ನೂಕು-ನುಗ್ಗಲು ನಡೆಸುತ್ತಿದ್ದಾರೆ. ತಾಲೂಕಿನ ರೈತರಿಗೆ ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಹೇಳಿದರು.

    ಪಟ್ಟಣದ ತಾಪಂ ಸಭಾ ಭವನದಲ್ಲಿ ಬುಧವಾರ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಪ್ರತಿಕ್ರಿಯಿಸಿ, ನರಗುಂದ ತಾಲೂಕಿನಾದ್ಯಂತ ಈಗಾಗಲೇ 2 ಸಾವಿರ ಟನ್ ಯೂರಿಯಾ ವಿತರಿಸಲಾಗಿದೆ. ರೈತರು ಬೆಳೆಗಳಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಗೊಬ್ಬರ ಬಳಸುತ್ತಿರುವುದರಿಂದ ಸಮಸ್ಯೆ ಉಲ್ಭಣಿಸಿದೆ. ಹೆಚ್ಚು ಗೊಬ್ಬರ ಬಳಸುವುದರಿಂದ ಇಳುವರಿ ಕುಂಠಿತವಾಗುತ್ತದೆ ಎಂದು ರೈತರಿಗೆ ಎಷ್ಟೇ ತಿಳಿ ಹೇಳಿದರೂ ಕೇಳುತ್ತಿಲ್ಲ. ಆ.15 ರೊಳಗಾಗಿ ಇನ್ನೂ ನಾಲ್ಕೈದು ಸಾವಿರ ಟನ್ ಯೂರಿಯಾ ಗೊಬ್ಬರ ವಿತರಿಸಲಾಗುವುದು ಎಂದರು. ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರೆಡ್ಡಿ ಮಾತನಾಡಿ, ಬೆನಕನಕೊಪ್ಪ ಕ್ವಾರಂಟೈನ್ ಕೇಂದ್ರದಲ್ಲಿ ಗುಣಮಟ್ಟದ ಆಹಾರ ವಿತರಿಸುತ್ತಿಲ್ಲ. ಸರಿಯಾದ ಚಿಕಿತ್ಸೆ ಇಲ್ಲ. ಮೂಲಸೌಕರ್ಯಗಳ ಕೊರತೆ ಇದೆ. ರ್ಯಾಪಿಡ್ ಟೆಸ್ಟ್ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗೆ ಸೂಚಿಸಿದರು. ತಾಲೂಕು ಆರೋಗ್ಯಾಧಿಕಾರಿ ರೇಣುಕಾ ಕೊರವನವರ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆಲ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ವಿನಾಕಾರಣ ಕಿರಿಕಿರಿ ಮಾಡುತ್ತಿದ್ದಾರೆ. ಬೆನಕನಕೊಪ್ಪ ಕ್ವಾರಂಟೈನ್ ಕೇಂದ್ರದಲ್ಲಿರುವ ಸೋಂಕಿತರಿಗೆ ಮಾತ್ರೆ ಕೊಡಲಾಗುತ್ತಿದೆ. ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವುದು ತಹಸೀಲ್ದಾರ್ ವ್ಯಾಪ್ತಿಗೆ ಒಳಪಡುತ್ತದೆ ಎಂದರು. ಲೋಕೋಪಯೋಗಿ, ಶಿಕ್ಷಣ ಇಲಾಖೆ, ಅಕ್ಷರದಾಸೋಹ, ಜಿಪಂ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಪ್ರಕಾಶಗೌಡ ತಿರಕನಗೌಡ್ರ, ಟಿ.ಬಿ. ಶಿರಿಯಪ್ಪಗೌಡ್ರ, ಜಿಪಂ ಸದಸ್ಯೆ ರೇಣುಕಾ ಅವರಾದಿ, ತಾಪಂ ಉಪಾಧ್ಯಕ್ಷೆ ದೀಪಾ ನಾಗನೂರ, ತಾಪಂ ಇಒ ಸಿ.ಆರ್.ಕುರ್ತಕೋಟಿ, ಗಿರೀಶ ನೀಲರೆಡ್ಡಿ, ಎಂ.ಡಿ. ತೂಗುಣಸಿ ಇತರರಿದ್ದರು.

    ಬೆಣ್ಣಿಹಳ್ಳದ ಪ್ರವಾಹದಿಂದ 1900 ಹೆಕ್ಷೇರ್​ನಷ್ಟು ವಿವಿಧ ಬೆಳೆಗಳು ಹಾನಿಯಾಗಿವೆ. ನರಗುಂದ ಮತ್ತು ಕೊಣ್ಣೂರ ಗ್ರಾಮದ ಎರಡು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಕ್ರಿಮಿನಾಶಕ, ವಿವಿಧ ಕೃಷಿ ಸಲಕರಣಿಗಳು ಸಾಕಷ್ಟಿವೆ. ಮುಂಗಾರು ಹಂಗಾಮಿನ ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಠರಾವು ಪಾಸ್ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುವುದು.
    | ಚನ್ನಪ್ಪ ಅಂಗಡಿ ಸಹಾಯಕ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts