More

    ಸಮಗ್ರ ಕೃಷಿಗೆ ಆದ್ಯತೆ ನೀಡಿ – ಬಿ.ಸಿ. ಪಾಟೀಲ

    ಬೆಳಗಾವಿ/ಚಿಕ್ಕೋಡಿ: ರೈತರು ಮುಖ್ಯ ಬೆಳೆಯನ್ನೇ ನೆಚ್ಚಿಕೊಳ್ಳಬಾರದು. ಅದರ ಜತೆಗೆ ಸಮಗ್ರ ಕೃಷಿಗೂ ಆದ್ಯತೆ ನೀಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

    ನಿಪ್ಪಾಣಿ ತಾಲೂಕಿನ ಭೀವಶಿಯಲ್ಲಿ ‘ರೈತರೊಂದಿಗೆ ಒಂದು ದಿನ ಕಾರ್ಯಕ್ರಮ’ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಬ್ಬಿನ ಬೆಳೆಯ ವಿವಿಧ ನಾಟಿ ಪದ್ಧತಿಗಳ ಪ್ರಾತ್ಯಕ್ಷಿಕೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರೈತರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

    ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಆದರೆ, ಮುಖ್ಯ ಬೆಳೆಗೆ ನಾನಾ ಕಾರಣಗಳಿಂದ ಹೆಚ್ಚಿನ ದರ ಸಿಗದೆ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೆಡೆ ಮಳೆ ಪ್ರಮಾಣ ಕಡಿಮೆಯಿದ್ದರೂ, ಉಪ ಕಸುಬು ಕೈಗೊಂಡ ರೈತರು ನೆಮ್ಮದಿಯ ದಿನ ಕಳೆಯುತ್ತಿದ್ದಾರೆ. ಹಾಗಾಗಿ ರೈತರು ಕೃಷಿ ಪದ್ಧತಿ ಬದಲಿಸಿಕೊಳ್ಳಬೇಕು. ಮುಖ್ಯ ಬೆಳೆ ಜತೆಗೆ, ಉಪ ಬೆಳೆಗಳಿಗೂ ಒತ್ತು ನೀಡಬೇಕು. ಆಗ ಒಂದು ಬೆಳೆಯಿಂದ ನಷ್ಟವಾದರೂ, ಮತ್ತೊಂದರಲ್ಲಿ ಲಾಭವಾಗುತ್ತದೆ.

    ಜತೆಗೆ ಕುರಿ ಸಾಕಣೆ, ಜೇನು ಸಾಕಣೆ ಹಾಗೂ ಹೈನುಗಾರಿಕೆ ಮಾಡುವುದರಿಂದ ಆರ್ಥಿಕವಾಗಿ ಸಶಕ್ತರಾಗಬಹುದು ಎಂದರು. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ರೈತರು ಸರ್ಕಾರ ಹುಡುಕಿಕೊಂಡು ಹೋಗಬಾರದು. ಸರ್ಕಾರವನ್ನೇ ರೈತರ ಮನೆಬಾಗಿಲಿಗೆ ತರಬೇಕೆಂಬ ಇಚ್ಛೆಯಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಈಗಾಗಲೇ 11 ಜಿಲ್ಲೆಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.

    ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಿರಂತರ ಪ್ರವಾಹದಿಂದಾಗಿ ನಿಪ್ಪಾಣಿ ಕ್ಷೇತ್ರ ತತ್ತರಿಸಿದೆ. ಜತೆಗೆ ಕರೊನಾ ಹಾವಳಿಯಿಂದ ಜನರ ಬದುಕು ಹಳಿ ತಪ್ಪಿದೆ. ಹಾಗಾಗಿ, ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಈ ಭಾಗದಲ್ಲಿ ಕೃಷಿ ಪದವಿ ಕಾಲೇಜ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಕಬ್ಬಿನ ನಾಟಿ ಪದ್ಧತಿ ಕುರಿತ ಕರಪತ್ರಗಳನ್ನು ಸಚಿವ ಪಾಟೀಲ ಬಿಡುಗಡೆಗೊಳಿಸಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ, ಜಲಾನಯನ ವಿಭಾಗದ ನಿರ್ದೇಶಕ ನಂದಿನಿ ಕುಮಾರಿ, ಅಪರ ನಿರ್ದೇಶಕ ಡಾ. ವಿ.ಜೆ. ಪಾಟೀಲ, ಬೆಳಗಾವಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಜಾಗೃತ ಕೋಶದ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಉಪನಿರ್ದೇಶಕ ಡಾ.ಎಚ್. ಡಿ. ಕೋಳೆಕರ ಇತರರಿದ್ದರು.

    ಸಂವಾದದಲ್ಲಿ ಕೇಳಿಬಂದ ಬೇಡಿಕೆಗಳು: ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ಚಿಕ್ಕೋಡಿ, ನಿಪ್ಪಾಣಿ ತಾಲೂಕುಗಳಲ್ಲಿ ಅಪಾರ ಬೆಳೆ ಹಾನಿಯಾಗಿದ್ದು, ಸರ್ಕಾರ ತಕ್ಷಣ ಪರಿಹಾರ ಒದಗಿಸಬೇಕು. ಸಾವಯವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಸೋಯಾಬೀನ್‌ಗೆ ವೈಜ್ಞಾನಿಕ ದರ ನಿಗದಿಗೊಳಿಸಬೇಕು. ನದಿತೀರದ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆ ನೀಗಿಸಬೇಕು. ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಮಹತ್ವಕಾಂಕ್ಷಿ ಯೋಜನೆಗಳನ್ನು ಜಾರಿಗೆ ತರಬೇಕು.

    ಬೆದರಿದ ಹಸು, ಗಲಿಬಿಲಿಯಾದ ಸಚಿವರು ಅಕ್ಕೋಳದ ರೈತ ಪ್ರವೀಣ ಶಾ ಮನೆಯಲ್ಲಿ, ಕಾಳು ತಿನ್ನಿಸಲು ಮುಂದಾದಾಗ ಗೋವು ಬೆದರಿ, ಸಚಿವ ಬಿ.ಸಿ. ಪಾಟೀಲ ಮೈಮೇಲೆ ಎಗರಲು ಮುಂದಾಯಿತು. ಪಕ್ಕದಲ್ಲೇ ಇದ್ದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸ್ಥಳೀಯರು ಹಿಂದೆ ಸರಿದರು. ಗೋವು ಹಿಡಿಯಲು ಜನರು ಹರಸಾಹಸ ಪಟ್ಟರು. ಈ ಪ್ರಸಂಗದಿಂದಾಗಿ ಸಚಿವರು ಕೆಲಕಾಲ ವಿಚಲಿತರಾದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts