More

    ಸಭೆ ಉದ್ದೇಶ ಪಕ್ಷ ಸಂಘಟನೆ ಮಾತ್ರ

    ಸಂಕೇಶ್ವರ: ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಚರ್ಚಿಸುವುದಕ್ಕಾಗಿ ಮುಖಂಡರೆಲ್ಲವೂ ಸೇರಿದ್ದೆವು. ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ನಿರ್ಧಾರ ತಗೆದುಕೊಳ್ಳುತ್ತಾರೆ. ಆ ಬಗ್ಗೆ ನಾನು ಮಾತನಾಡುವುದಿಲ್ಲ. ಸಭೆಯಲ್ಲಿ ಆ ಕುರಿತು ಚರ್ಚೆಯೂ ನಡೆದಿಲ್ಲ ಎಂದು ಆಹಾರ, ಅರಣ್ಯ ಸಚಿವ ಉಮೇಶ ಕತ್ತಿ ಹೇಳಿದರು.

    ಸಮೀಪದ ಅಂಕಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ನಡೆದಿದ್ದು ಗುಪ್ತ ಸಭೆ ಅಲ್ಲ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತ ಕುರಿತು ಸವಿಸ್ತಾರವಾಗಿ ಚರ್ಚಿಸಿದ್ದೇವೆ. ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗೆ ಕಾರ್ಯತಂತ್ರ ಹೇಗಿರಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ ಎಂದು ಪ್ರತಿಕ್ರಿಯಿಸಿದರು.

    ಕೆಲ ನಾಯಕರು ಬಂದಿದ್ದರು. ಕೆಲವರು ಬಂದಿಲ್ಲ. ಬಂದಿದ್ದೇಕೆ, ಬರಲಿಲ್ಲವೇಕೆ ಎಂದು ನಾನು ಯಾರನ್ನೂ ಕೇಳಿಲ್ಲ ಎಂದರು. ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರನ್ನು ಯಾರೂ ಹೊರಗಿಟ್ಟಿಲ್ಲ. ಯಾರನ್ನು ಯಾರೂ ಕರೆದಿಲ್ಲ. ತಮ್ಮಷ್ಟಕ್ಕೆ ತಾವೇ ಸೇರಿದ್ದಾರೆ. ನಾನು ಕರೆದವರು ಯಾರು ದೊಡ್ಡವರೂ ಅಲ್ಲ, ಚಿಕ್ಕವರೂ ಅಲ್ಲ. ಎಲ್ಲರೂ ಸೇರಿ ಪಕ್ಷ ಕಟ್ಟುವ ನಿಟ್ಟಿನಲ್ಲಿ ಕೂಡಿದ್ದೆವು. ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತ ಮಹಾಂತೇಶ ಕವಟಗಿಮಠ ಅವರು ಎಲ್ಲರನ್ನೂ ಸೇರಿಸಿದ್ದರು. ಯಾವ ಶಾಸಕರನ್ನು ಕರೆದಿದ್ದಾರೆ, ಯಾರನ್ನು ಕರೆದಿರಲಿಲ್ಲ ಎನ್ನುವುದು ನನಗೆ ಗೊತ್ತಿಲ್ಲ ಎಂದರು.

    ಹರಗಾಪುರ, ಕಣಗಲಾ, ಬೋರಗಲ್ಲ, ರಾಶಿಂಗ, ನಾಗನೂರ, ಅಮ್ಮಿನಬಾವಿ ನಿಡಸೋಸಿ ಸೇರಿ ವಿವಿಧ ಗ್ರಾಮಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ 16 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು. ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ಅಮರ ನಲವಡೆ, ಶ್ರೀಕಾಂತ ಹತನೂರಿ, ದುಂಡಪ್ಪ ಹೆದ್ದೂರಿ, ಪ್ರಶಾಂತ ಪಾಟೀಲ, ಅಶೋಕ ಹಿರೇಕುಡಿ, ಅಜಿತ ಕರಜಗಿ, ಎಸ್..ಎಂ, ಪಾಟೀಲ, ರಾಯಪ್ಪ ಯಶವಂತ, ಶಂಕರಗೌಡ ಪಾಟೀಲ, ಸಂಜು ಪಾಟೀಲ, ಪವನ ಪಾಟೀಲ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts