More

    ಸದ್ಯಕ್ಕಿಲ್ಲ ಗೋಕರ್ಣ ಮಹಾಬಲೇಶ್ವರನ ದರ್ಶನ

    ಗೋಕರ್ಣ: ರಾಜ್ಯದ ಎಲ್ಲ ಮಂದಿರಗಳನ್ನು ಜೂ. 1ರಿಂದ ತೆರೆಯಲು ಸರ್ಕಾರ ಆದೇಶ ನೀಡುವ ಸಾಧ್ಯತೆಯಿದೆ. ಆದರೆ, ದಕ್ಷಿಣದ ಕಾಶಿ ಎಂದು ಖ್ಯಾತವಾಗಿರುವ ಆತ್ಮಲಿಂಗ ತಾಣ ಗೋಕರ್ಣ ಮಹಾಬಲೇಶ್ವರನ ದರ್ಶನ ಮಾತ್ರ ಸ್ವಲ್ಪ ವಿಳಂಬ ಆಗುವ ಸಾಧ್ಯತೆಯಿದೆ.

    ಶ್ರೀರಾಮಚಂದ್ರಾಪುರ ಮಠದ ನಿರ್ವಹಣೆಯಲ್ಲಿರುವ ಮಂದಿರದ ಆಡಳಿತ ಮಂಡಳಿ ಭಕ್ತರ ಹಿತದೃಷ್ಟಿಯಿಂದ ಕರೊನಾ ಸಂಬಂಧದ ಎಲ್ಲ ಸುರಕ್ಷತಾ ಕ್ರಮಗಳ ತರುವಾಯ ಹಂತ ಹಂತವಾಗಿ ಮಂದಿರವನ್ನು ಭಕ್ತರಿಗೆ ಮುಕ್ತವಾಗಿಸುವ ಸಿದ್ಧತೆಯಲ್ಲಿದೆ. ಇದರಿಂದ ಜೂ. 1ರಂದು ಮಹಾಬಲೇಶ್ವರ ಮಂದಿರ ತೆರೆಯುವ ಸಾಧ್ಯತೆ ಕಡಿಮೆಯಾಗಿದೆ.

    ಮಂದಿರದಲ್ಲಿ ಸ್ಥಳದ ಅಭಾವ: ಮಹಾಬಲೇಶ್ವರ ಮಂದಿರ ಖ್ಯಾತಿಯಲ್ಲಿ ವಿಶ್ವ ಮಾನ್ಯತೆ ಹೊಂದಿದೆ. ಆದರೆ, ಅದಕ್ಕೆ ತಕ್ಕುದಾದ ಸ್ಥಳಾವಕಾಶ ಮಂದಿರದಲ್ಲಿಲ್ಲ. ರಾಜ್ಯದ ಉಳಿದ ಖ್ಯಾತ ಮಂದಿರಗಳಲ್ಲಿರುವ ಸ್ಥಳ ವೈಶಾಲ್ಯತೆ ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಇಲ್ಲ. ಇದರ ಜತೆಗೆ ಬೇರೆ ಮಂದಿರಗಳಲ್ಲಿ ಭಕ್ತರಿಗೆ ದರ್ಶನ ಮಾತ್ರ ಲಭ್ಯವಿದ್ದರೆ ಗೋಕರ್ಣ ಆತ್ಮಲಿಂಗವನ್ನು ಎಲ್ಲರೂ ಮುಟ್ಟಿ ಪೂಜಿಸಲು ಅವಕಾಶವಿದೆ. ಹೀಗಾಗಿ ಮಂದಿರದಲ್ಲಿ ಲಭ್ಯವಿರುವ ಸೀಮಿತ ಸ್ಥಳಾವಕಾಶದಲ್ಲಿ ಸಾವಿರಾರು ಭಕ್ತರನ್ನು ಒಮ್ಮೆಗೆ ನಿರ್ವಹಿಸಲು ಆಡಳಿತ ಮಂಡಳಿಗೆ ಅನೇಕ ಪೂರ್ವ ಸಿದ್ಧತೆಗಳು ಅನಿವಾರ್ಯವಾಗಿದೆ. ಪುರಾತನ ಮಂದಿರದ ನಂದಿ ಗೃಹ ಮತ್ತು ಗರ್ಭ ಗೃಹ ಇಕ್ಕಟ್ಟಾಗಿರುವುದರಿಂದ ಸಾಧಾರಣ ದಿನಗಳಲ್ಲಿ ಭಕ್ತರನ್ನು ನಿರ್ವಹಿಸಲು ಪರಿಶ್ರಮ ಪಡಬೇಕಾಗುತ್ತಿದೆ. ಕರೊನಾ ಭೀತಿಯಿಂದಾಗಿ ಹಿಂದಿನಂತೆ ಭಕ್ತರು ಆತ್ಮಲಿಂಗ ಮುಟ್ಟಿ ಒತ್ತಟ್ಟಿಗೆ ಪೂಜೆ ಮಾಡುವುದು ಈಗ ಅಸಾಧ್ಯ. ಕರೊನಾ ಮುಕ್ತವಾಗಲು ಪರಸ್ಪರ ಅಂತರ ಕಾಯ್ದು ಕೊಳ್ಳುವುದು ಬಹು ಮುಖ್ಯ. ಇದರಿಂದಾಗಿ ಆಡಳಿತ ಮಂಡಳಿ ಈ ಕುರಿತು ಸರ್ವ ಏರ್ಪಾಟು ಮಾಡಿಕೊಳ್ಳುವ ತಯಾರಿಯಲ್ಲಿದೆ.

    ಬೇಕಿದೆ ನುರಿತ ಆರೋಗ್ಯ ಕಾರ್ಯಕರ್ತರು: ಸರ್ಕಾರದ ಆದೇಶದಂತೆ ಮಂದಿರ ಪ್ರವೇಶಿಸುವ ಪ್ರತಿ ಭಕ್ತರ ದೇಹದ ಉಷ್ಣಾಂಶದ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಇದಕ್ಕೆ ಆಡಳಿತ ಮಂಡಳಿ ಅನೇಕ ಸ್ಕ್ರೀನಿಂಗ್ ಕಿಟ್​ಗಳ ವ್ಯವಸ್ಥೆ ಮಾಡಬೇಕಿದೆ. ಇವುಗಳನ್ನು ನಿರ್ವಹಿಸಬಲ್ಲ ನುರಿತ ಆರೋಗ್ಯ ಕಾರ್ಯಕರ್ತರನ್ನು ನೇಮಿಸಬೇಕಿದೆ. ಮಂದಿರದಲ್ಲಿ ಈಗಿರುವ ಸರತಿ ಸಾಲಿನ ವ್ಯವಸ್ಥೆಯನ್ನು ಬಳಸಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಅನುಕೂಲ ಕಲ್ಪಿಸಬೇಕಿದೆ. ಇವುಗಳ ಜತೆಗೆ ಮುಟ್ಟಿ ಪೂಜಾಭಿಷೇಕ ಮಾಡುವ ಭಕ್ತರು ಮತ್ತು ಇವುಗಳನ್ನು ನಿರ್ವಹಿಸುವ ಸ್ಥಳೀಯ ಉಪಾಧಿ ವಂತರು ಪರಸ್ಪರ ಅಂತರ ಕಾಯ್ದುಕೊಳ್ಳಲು ಅನುಸರಿಸಬೇಕಾದ ಮಾರ್ಗಸೂಚಿಗಳು ಬಿಡುಗಡೆಯಾಗಬೇಕಿದೆ. ಇವೆಲ್ಲವುಗಳ ಬಗ್ಗೆ ಶ್ರೀ ರಾಘವೇಶ್ವರ ಶ್ರೀಗಳ ಮಾರ್ಗದರ್ಶನ ಅನುಸರಿಸಿ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಲಿದೆ.

    ಕರೊನಾ ಎದುರಿಸಲು ಮತ್ತು ಭಕ್ತರನ್ನು ಭೀತಿಯಿಂದ ಮುಕ್ತವಾಗಿಸಲು ಮಂದಿರದಲ್ಲಿ ಅನೇಕ ಏರ್ಪಾಟುಗಳು ಆಗಬೇಕಿವೆ. ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಆಡಳಿತ ಮಂಡಳಿ ಅಗತ್ಯ ವ್ಯವಸ್ಥೆಗೆ ಪ್ರಯತ್ನಿಸಲಿದೆ. ಆತುರವಾಗಿ ಮಂದಿರ ತೆರೆಯುವ ಬದಲು ಸರ್ಕಾರ ಸೂಚಿಸಿರುವ ಕ್ರಮಗಳನ್ನು ಕೈಗೊಂಡು ಹಂತ ಹಂತವಾಗಿ ಭಕ್ತರಿಗೆ ಮುಕ್ತವಾಗಿಸಲು ಯೋಜಿಸಲಾಗುತ್ತಿದೆ.

    | ಜಿ.ಕೆ. ಹೆಗಡೆ ಆಡಳಿತ ಕಾರ್ಯದರ್ಶಿ, ಶ್ರೀಸಂಸ್ಥಾನ ಮಹಾಬಲೇಶ್ವರ ಮಂದಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts