More

    ಸದಾಶಿವ ಆಯೋಗ ವರದಿ ಜಾರಿಗೆ ವಿರೋಧ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಪ್ರತಿಭಟನೆ

    ಮುಳಬಾಗಿಲು : ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಲೋಪಗಳಿಂದ ಕೂಡಿದೆ. ವರದಿ ಜಾರಿ ಮಾಡಿದರೆ ಶೋಷಿತ ಸಮುದಾಯಗಳ ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ತಾಲೂಕು ಮೀಸಲಾತಿ ಸಂರಕ್ಷಣ ಒಕ್ಕೂಟದ ಅಧ್ಯಕ್ಷರೂ ಆದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ವಿ.ಗೋಪಾಲ್ ಹೇಳಿದರು.

    ತಾಲೂಕು ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಶುಕ್ರವಾರ ಸದಾಶಿವ ಆಯೋಗದ ವರದಿ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ರ‌್ಯಾಲಿ ನಂತರ ತಾಲೂಕು ಕಚೇರಿ ಮುಂದೆ ಮಾತನಾಡಿ, ರಾಜ್ಯಾದ್ಯಂತ ವರದಿ ವಿರುದ್ಧ ಪ್ರತಿಭಟಿಸಿ ತಾಲೂಕು ಕೇಂದ್ರಗಳಲ್ಲಿ ಮನವಿ ಸಲ್ಲಿಸಲಾಗುತ್ತದೆ. ಅದರಂತೆ ಮುಳಬಾಗಿಲು ತಾಲೂಕಿನ ವಿವಿಧ ಪರಿಶಿಷ್ಟ ಜಾತಿಯ ಮುಖಂಡರು ಮತ್ತು ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ವರದಿಯನ್ನು ಸರ್ಕಾರ ತಿರಸ್ಕರಿಸುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದರು.

    ವರದಿ ಜಾರಿಯಿಂದ ಭೋವಿ, ಕೊರಚ, ಕೊರಮ, ಬಂಜಾರ, ಲಂಬಾಣಿ, ಹಂದಿಜೋಗಿ, ದೊಂಬರ, ಮುಂಡಾಲ, ಸೇರಿ ಎಸ್ಸಿ ಕೆಟಗಿರಿಯಲ್ಲಿರುವ 51 ಜಾತಿಗಳಿಗೆ ಅನ್ಯಾಯ ಮಾಡಲು ಹೊರಟಿರುವುದು ಖಂಡನೀಯ. ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಸಂತ ಸೇವಾಲಾಲ್, ಭೋವಿ ಗುರುಪೀಠದ ಶ್ರೀಸಿದ್ದರಾಮೇಶ್ವರರ ವಿರುದ್ಧ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

    ಹಿರಿಯ ಮುಖಂಡ ಪದಕಾಷ್ಠಿ ವಿ.ವೆಂಕಟಮುನಿ ಮಾತನಾಡಿ, ಪ್ರಭಾವಿ ಮುಖಂಡರು ಹುನ್ನಾರ ನಡೆಸಿ 51 ಶೋಷಿತ ಸಮುದಾಯಗಳನ್ನು ಹೊರ ಹಾಕಲು ಹೊರಟಿರುವುದು ಖಂಡನೀಯ. ಒಗ್ಗಟ್ಟಿನಿಂದ ಎದುರಿಸಿ ನಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದರು.
    ನಗರದ ನೇತಾಜಿ ಕ್ರೀಡಾಂಗಣದಿಂದ ಮೆರವಣಿಗೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ಉಪತಹಸೀಲ್ದಾರ್ ಕ್ರಾಂತಿವರ್ಮ ಅವರಿಗೆ ಮನವಿ ಸಲ್ಲಿಸಲಾಯಿತು.

    ತಾಪಂ ಮಾಜಿ ಸದಸ್ಯ ವಿ.ಮಾರಪ್ಪ, ಜೆಡಿಎಸ್ ಮಖಂಡ ಶ್ರೀಧರ್‌ಮೂರ್ತಿ, ಭೋವಿ ಸಂಘದ ಅಧ್ಯಕ್ಷ ಜಿ.ಶಂಕರಪ್ಪ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಎನ್.ಶಿವಪ್ಪ, ನಗರಸಭೆ ಸದಸ್ಯ ಜಿ.ನಾಗರಾಜ್, ಭೋವಿ ಸಮುದಾಯ ಭವನದ ಅಧ್ಯಕ್ಷ ಹನುಮಪ್ಪ, ಮುಖಂಡರಾದ ವೈ.ಸೋಮಶೇಖರ್, ಬಾಲಕೃಷ್ಣ, ಚಂಗಲರಾಯಪ್ಪ, ರಾಜಣ್ಣ ಇದ್ದರು.

    ಸದಾಶಿವ ಆಯೋಗದ ವರದಿ ಕೈ ಬಿಡಿ : ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಕೈ ಬಿಡುವಂತೆ ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಜಿಲ್ಲಾ ಸಮಿತಿ ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
    ನಗರದ ನಚಿಕೇತನ ನಿಲಯದಲ್ಲಿ ನೆರೆದ ಭೋವಿ ಸಮುದಾಯದ ಮುಖಂಡರು ಆಯೋಗದ ವರದಿ ತಿರಸ್ಕರಿಸಿ ಶೋಷಿತ ಸಮುದಾಯಗಳನ್ನು ಉಳಿಸಬೇಕೆಂದು ಘೋಷಣೆ ಕೂಗುತ್ತಾ ಮೆಕ್ಕೆ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿಗೆ ಸಲ್ಲಿಸಿದರು.

    ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಭೋವಿ, ಲಂಬಾಣಿ, ಕೊರಚ, ಕೊರಮ, ಹಂದಿಜೋಗಿ ಇನ್ನಿತರ 51 ಜಾತಿಗಳು, ಅಲೆಮಾರಿಗಳನ್ನು ಪ.ಜಾತಿ ಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆಯುತ್ತಿದೆ. ಸದಾಶಿವ ಆಯೋಗದ ವರದಿ ಮುಂದಿಟ್ಟುಕೊಂಡು ಪರಿಶಿಷ್ಟ ಸಮುದಾಯವನ್ನು ಛಿದ್ರಗೊಳಿಸುವ, ದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ ಎಂದರು.
    ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು. ವರದಿ ಅನುಷ್ಠಾನಗೊಂಡಲ್ಲಿ ಶೋಷಿತ ಸಮುದಾಯಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿವೆ. ಯಾವುದೇ ಕಾರಣಕ್ಕೂ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದರು.

    ಒಕ್ಕೂಟದ ಜಿಲ್ಲಾಧ್ಯಕ್ಷ ಎಲ್.ಜಿ. ಮುನಿರಾಜು ಮಾತನಾಡಿ, ಕೆಲ ರಾಜಕಾರಣಿಗಳು ರಾಜಕೀಯ ಲಾಭ, ಸ್ವಾರ್ಥಕ್ಕಾಗಿ ಶೋಷಿತ ವರ್ಗದಲ್ಲಿ ಅಶಾಂತಿ ಉಂಟು ಮಾಡುವ ಜತೆಗೆ ಸಾಮಾಜಿಕ ನ್ಯಾಯದ ಮೂಲ ಆಶಯಕ್ಕೆ ಧಕ್ಕೆ ತಂದು ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದರು.
    ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಕೇಳಿರುವ ಅಭಿಪ್ರಾಯ ಸಂಬಂಧ ಯಾವುದೇ ಜಾತಿಗಳನ್ನು ಪಟ್ಟಿಯಿಂದ ಕೈ ಬಿಡುವ ಪ್ರಸ್ತಾಪ ಸರ್ಕಾರದ ಎದುರಿಗಿಲ್ಲ ಎಂಬ ಅಭಿಪ್ರಾಯ ಕಳುಹಿಸಿಕೊಡಬೇಕು ಎಂದು ಒತ್ತಾಯಿಸಿದರು.
    ಭೋವಿ ಸಮಾಜದ ಹಿರಿಯ ಮುಖಂಡರಾದ ಶ್ರೀಕೃಷ್ಣ, ಮಲ್ಲೇಶ್‌ಬಾಬು, ವರದೇನಹಳ್ಳಿ ವೆಂಕಟೇಶ್, ಮಾಲೂರು ಎಸ್.ವಿ. ಲೋಕೇಶ್, ತಾಲೂಕು ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾಯರ್ದರ್ಶಿ ವೆಂಕಟೇಶ್, ಭೋವಿ ಯುವ ವೇದಿಕೆ ಅಧ್ಯಕ್ಷ ಮಂಜುನಾಥ್, ನಗರ ಘಟಕ ಅಧ್ಯಕ್ಷ ಎಂ.ಪಿ. ಮುರಳಿ, ಪ್ರಕಾದ್, ರಾಮಣ್ಣ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts