More

    ಸದನದಲ್ಲಿ ರೈತರ ಸಮಸ್ಯೆ ಪ್ರತಿಧ್ವನಿ

    ಕಲಬುರಗಿ: ರೈತರ ಆದಾಯ ದ್ವಿಗುಣಗೊಂಡಿಲ್ಲ. ಆತ್ಮಹತ್ಯೆ ನಿಲ್ಲುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿದರೆ, ಕೃಷಿ ಉತ್ಪನ್ನಗಳ ದರ ಪಾತಾಳಕ್ಕೆ ಕುಸಿದಿದೆ ಎಂಬುದು ಸೇರಿ ಅನ್ನದಾತರು ಮತ್ತು ಜನರು ಎದುರಿಸುತ್ತಿರುವ ಸಮಸ್ಯೆಗಳು ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿ ಕೆಲಕಾಲ ಕೋಲಾಹಲ ಸೃಷ್ಟಿಯಾಗಿತ್ತು.

    ಇಂಥ ಸನ್ನಿವೇಶ ಕಂಡಿದ್ದು `ಮಾದರಿ ವಿಧಾನಸಭಾ ಅಧಿವೇಶನ’ ಸ್ಪರ್ಧೆಯಲ್ಲಿ. ಜಿಪಂ ಸಭಾಂಗಣದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಮತ್ತು ಕಲಬುರಗಿಯ ವಿಜ್ಞಾನೇಶ್ವರ ಕಾನೂನು ಮಹಾವಿದ್ಯಾಲಯ ಸಹಯೋಗದಡಿ ಬುಧವಾರ ಏರ್ಪಡಿಸಿದ್ದ ಈ ಅಧಿವೇಶನ ರಾಜ್ಯ ವಿಧಾನಸಭೆಗೂ ಕಡಿಮೆ ಇಲ್ಲದಂತೆ ಅಬ್ಬರದ ಚರ್ಚೆಗೆ ವೇದಿಕೆ ಒದಗಿಸಿತು. ಆಡಳಿತ-ಪ್ರತಿಪಕ್ಷದವರ ಮಾತಿನ ಸಮರ ಭರ್ಜರಿಯಾಗಿತ್ತು.

    ನೀರಾವರಿ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸಿ ಜಮೀನಿಗೆ ನೀರು ಹರಿಸುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿವೆ. ಆದರೆ ರೈತರು ಬೆಳೆದ ಬೆಳೆಗಳ ಬೆಲೆ ಕಡಿಮೆಯಾಗಿದೆ. ಸಬ್ಸಿಡಿ ದರದಲ್ಲಿ ಬೀಜ-ರಸಗೊಬ್ಬರ ನೀಡುತ್ತಿಲ್ಲ. ರೈತನ್ನು ಸುಲಿಗೆ ಮಾಡುವುದರ ಜತೆಗೆ ಸಕರ್ಾರ ದಿವಾಳಿ ಮಾಡಲು ಹೊರಟಿದೆ ಎಂದು ಪ್ರತಿಪಕ್ಷ ಶಾಸಕರು, ಸಿಎಂ, ಸಚಿವರು ಹಾಗೂ ಆಡಳಿತ ಪಕ್ಷದವರ ಮೇಲೆ ವಾಗ್ದಾಳಿ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಖುದ್ದು ಸ್ಪೀಕರ್ ಎದ್ದು ನಿಂತರೂ ಚರ್ಚೆ ಕಾವು ತಣ್ಣಗಾಗಲಿಲ್ಲ, ಇದರಿಂದಾಗಿ ಸದನವನ್ನು ಕೆಲಹೊತ್ತು ಮುಂದೂಡಿದರು.

    ಬೆಂಬಲ ಬೆಲೆ, ನೀರಾವರಿ ಯೋಜನೆಗಳ ಕುರಿತು ಧ್ವನಿ ಎತ್ತಿದ ಲಿಂಗಸುಗೂರು ಶಾಸಕರಿಗೆ ಉಳಿದವರೆಲ್ಲರೂ ಧ್ವನಿಗೂಡಿಸಿದರು. ನೀರಾವರಿ, ಕೃಷಿ ಸಚಿವರ ಉತ್ತರದಿಂದ ಪ್ರತಿಪಕ್ಷದವರು ಸಮಾಧಾನಗೊಳ್ಳದಿದ್ದಾಗ ಖುದ್ದು ಮುಖ್ಯಮಂತ್ರಿ ಉತ್ತರ ನೀಡಿ, ನೀವು ಆಡಳಿತ ನಡೆಸಲು ಅಸಮರ್ಥರಿದ್ದೀರಿ ಎಂದೇ ಜನರು ನಿಮ್ಮನ್ನು ಪ್ರತಿಪಕ್ಷದಲ್ಲಿ ಕುಳ್ಳಿರಿಸಿದ್ದಾರೆ ಎಂದು ತಿರುಗೇಟು ನೀಡಿದರು. ಈಗಾಗಲೇ ಹಲವು ಯೋಜನೆ ಕೈಗೆತ್ತಿಕೊಂಡಿದ್ದು, ಮುಗಿಯುವ ಹಂತಕ್ಕೆ ಬಂದಿವೆ ಎಂದು ನೀರಾವರಿ ಸಚಿವರು ಸಮಜಾಯಿಷಿ ನೀಡಿದರು.

    ಬಸ್ ಪಾಸ್ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಶಾಸಕರೊಬ್ಬರು ಧ್ವನಿ ಎತ್ತಿದಾಗ, ಸಾರಿಗೆ ಸಚಿವರು ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಮಾದರಿ ಗ್ರಾಮ ಆರೋಗ್ಯ ಖಾತ್ರಿ ಮಸೂದೆ ಸೇರಿ ಹಲವು ವಿಧೆಯೇಕಗಳನ್ನು ಪ್ರತಿಪಕ್ಷದವರ ಆಕ್ಷೇಪಣೆ ನಡುವೆಯೂ ಅಂಗೀಕರಿಸಲಾಯಿತು.

    ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಕಾನೂನು ಹಾಗೂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೇ ಸ್ವೀಕರ್, ಸಚಿವರು, ಶಾಸಕರು, ಸಿಎಂ, ಪ್ರತಿಪಕ್ಷ ನಾಯಕರು, ಉಪ ನಾಯಕನ ಜವಾಬ್ದಾರಿ ವಹಿಸಿಕೊಂಡು ಸದನ ನಡೆಸಿಕೊಟ್ಟಿದ್ದು ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts