More

    ಸತತ ಮಳೆ; ಭತ್ತದ ಗದ್ದೆಗಳು ಜಲಾವೃತ

    ತೀರ್ಥಹಳ್ಳಿ: ಮಾಂಡೌಸ್ ಚಂಡಮಾರುತದ ಪರಿಣಾಮ ತಾಲೂಕಿನಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಕಟಾವು ಮಾಡಿರುವ ಭತ್ತದ ಪೈರು ಗದ್ದೆಗಳಲ್ಲಿ ನಿಂತ ನೀರಿನಲ್ಲಿ ಮುಳುಗಿದೆ. ಅಡಕೆ ಎಲೆಚುಕ್ಕೆ ರೋಗದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
    ತಾಲೂಕಿನಲ್ಲಿ ಎಲ್ಲೆಡೆ ಭತ್ತದ ಕೊಯ್ಲು ಭರದಿಂದ ಸಾಗಿದೆ. ಮಳೆಯ ಮುನ್ಸೂಚನೆ ಇಲ್ಲದ ಕಾರಣ ಹೆಚ್ಚಿನ ಕಡೆಗಳಲ್ಲಿ ಗದ್ದೆ ಕೊಯ್ಲ ಮಾಡಲಾಗಿದೆ. ಇದೀಗ ಒಮ್ಮೆಲೆ ಮಳೆಯಾಗುತ್ತಿದ್ದು ಕೊಯ್ಲಗಿರುವ ಬೆಳೆಯನ್ನು ಗದ್ದೆಗಳಿಂದ ತರುವುದಕ್ಕೆ ಅಸಾಧ್ಯವಾಗಿದೆ. ತಡವಾಗಿ ಗದ್ದೆ ನಾಟಿ ಮಾಡಿರುವ ಆಗುಂಬೆ ಹೋಬಳಿಯ ಕೆಲ ಭಾಗವನ್ನು ಹೊರತುಪಡಿಸಿ ಮಂಡಗದ್ದೆ, ಅಗ್ರಹಾರ, ಕಸಬಾ ಹಾಗೂ ಮುತ್ತೂರು ಹೋಬಳಿಯಲ್ಲಿ ಗದ್ದೆ ಕೊಯ್ಲು ಮಾಡಲಾಗುತ್ತಿದೆ. ರೈತರು ಅಸಹಾಯಕತೆಯಿಂದ ಬೆಳೆದ ಬೆಳೆ ಕೈಗೆ ಬಾರದ ಸ್ಥಿತಿಯಲ್ಲಿ ತೀವ್ರ ಆತಂಕ ಪಡುವಂತಾಗಿದೆ.
    ತಾಲೂಕಿನ ಬಹುತೇಕ ಭಾಗದಲ್ಲಿ ಅಡಕೆಗೆ ತಗುಲಿರುವ ಎಲೆಚುಕ್ಕೆ ರೋಗದಿಂದ ಅಡಕೆ ತೋಟವೇ ನಾಶವಾಗುವ ಆತಂಕ ಎದುರಾಗಿದೆ. ಮಳೆ ಕಡಿಮೆಯಾದ ನಂತರದಲ್ಲಿ ಈ ಮಾರಕ ರೋಗ ನಿಯಂತ್ರಣಕ್ಕೆ ಬರುವ ಆಶಾಭಾವನೆಯನ್ನು ಹೊಂದಿದ್ದ ಬೆಳೆಗಾರರಿಗೆ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧೈರ್ಯವೇ ಉಡುಗಿ ಹೋದಂತಾಗಿದೆ. ಸತತ ಮಳೆ ಆಗುತ್ತಿರುವುದರಿಂದ ರೋಗ ಇನ್ನೂ ಉಲ್ಬಣಗೊಳ್ಳುವ ಆತಂಕ ಬಹುತೇಕ ರೈತರಲ್ಲಿದೆ. ಮಾರುಕಟ್ಟೆಯಲ್ಲಿ ಒಮ್ಮೆಲೆ ಧಾರಣೆಯೂ ಕುಸಿತವಾಗಿರುವುದು ಬೆಳೆಗಾರರ ಆತಂಕವನ್ನು ಇಮ್ಮಡಿಗೊಳಿಸಿದೆ.
    ಕಾಡುಕೋಣ, ಹಂದಿ ಮತ್ತು ಮಂಗ ಮುಂತಾದ ಕಾಡುಪ್ರಾಣಿಗಳ ಕಾಟದಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೂ ಹೋರಾಟ ಮಾಡಬೇಕಾಗಿದೆ. ಕಾಡುಪ್ರಾಣಿಗಳ ಹಾವಳಿ ಹೆಚ್ಚಿರುವ ಆಗುಂಬೆ ಭಾಗದ ರೈತರ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ. ಮೇಲಿನಕುರುವಳ್ಳಿ ಗ್ರಾಪಂ ಭಾಗದಲ್ಲಿ ಹಾಡಹಗಲಲ್ಲಿ ಹತ್ತಾರು ಸಂಖ್ಯೆಯ ಕಾಡುಕೋಣಗಳು ಜನವಸತಿ ಪ್ರದೇಶದ ಗದ್ದೆಗಳಿಗೆ ನುಗ್ಗಿ ಫಸಲನ್ನು ಹಾಳು ಗೆಡುವುತ್ತಿವೆ. ಅಡಕೆ ಎಲೆಚುಕ್ಕೆ ರೋಗದಿಂದ ಹೈರಾಣಾಗಿರುವ ರೈತರಿಗೆ ಹವಾಮಾನ ವೈಪರೀತ್ಯದ ಪಿಡುಗು ಬೆಂಬಿಡದೆ ಕಾಡುತ್ತಿದೆ.ಮಳೆಯಿಂದಾಗಿ ಈ ರೋಗ ಇನ್ನೂ ಹೆಚ್ಚು ವ್ಯಾಪಿಸುವ ಆತಂಕ ಎದುರಾಗಿದೆ. ಅಡಕೆ ಧಾರಣೆ ದಿನದಿಂದ ಕುಸಿಯುತ್ತಿರುವುದರಿಂದ ದಿಕ್ಕೇ ತೋಚದಂತಾಗಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷರೂ ಆಗಿರುವ ಕೃಷಿಕ ಕಟ್ಟೆಹಕ್ಕಲು ಕಿರಣ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts