More

    ಸತತ ಮಳೆಗೆ ಬೆಳೆ ಹಾಳು

    ಶಿರಹಟ್ಟಿ: ವಾರದಿಂದ ಸುರಿಯುತ್ತಿರುವ ಮಳೆಯಿಂದ ಹೆಸರು ಕಾಯಿ ಕಟಾವು ಮಾಡದ್ದರಿಂದ ಕಾಯಿಯಲ್ಲೇ ಕಾಳುಗಳು ಮೊಳಕೆಯೊಡೆಯುತ್ತಿವೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂಥ ಸ್ಥಿತಿ ರೈತರದ್ದಾಗಿದೆ.

    ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಶಿರಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ಬಹುಪಾಲು ರೈತರು ಮಳೆಯಾಶ್ರಿತ ಬೆಳೆ ಬೆಳೆಯುತ್ತಾರೆ. ಹೆಸರು, ಶೇಂಗಾ, ಹತ್ತಿ, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ ಮತ್ತಿತರ ಮುಂಗಾರು ಬೆಳೆ ಬೆಳೆದಿದ್ದಾರೆ. ಕೃಷಿ ಇಲಾಖೆ ಮಾಹಿತಿಯಂತೆ ತಾಲೂಕಿನಲ್ಲಿ 5050 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಆದರೀಗ ಸತತ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿ ಹೆಸರು ಗಿಡದಲ್ಲಿಯೇ ಕಾಳು ಮೊಳಕೆಯೊಡೆಯುತ್ತಿದೆ. ಸಾವಿರಾರು ರೂ. ವ್ಯಯಿಸಿ ಬೆಳೆದ ಬೆಳೆ ಮಣ್ಣು ಪಾಲಾಗುತ್ತಿರುವುದನ್ನು ಕಂಡು ಹೆಸರು ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.

    ಹೆಸರು ಬೆಳೆಯ ನಷ್ಟ ಪರಿಹಾರ ಹಾಗೂ ಶೀಘ್ರ ಬೆಳೆ ವಿಮೆ ದೊರಕಿಸಿಕೊಡಲು ಹೆಸರು ಬೆಳೆದಿರುವ ರೈತರು ಈಗಾಗಲೇ ಕಂದಾಯ ಮತ್ತು ಕೃಷಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಪರಿಹಾರಕ್ಕಾಗಿ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ.

    ಮುಂಗಾರು ಹಂಗಾಮಿನ ಹೆಸರು ರೈತರಿಗೆ ಆರ್ಥಿಕ ಬೆಳೆಯಾಗಿದೆ. ಉತ್ತಮ ಫಸಲು ಬಂದು ಮಾರಾಟದಿಂದ ಬಂದ ಹಣದಿಂದ ಮಾಡಿದ ಸಾಲಸೋಲ ಚುಕ್ತಾ ಮಾಡಿ, ಸ್ವಲ್ಪ ಮಟ್ಟಿನ ಆರ್ಥಿಕ ಸುಧಾರಣೆ ಹೊಂದುವ ಭರವಸೆಯಿತ್ತು. ಆದರೆ, ಸತತ ಮಳೆಯಿಂದ ಬೆಳೆ ಭೂಮಿ ಪಾಲಾಗಿದೆ. ದುಡಿಮೆಗೆ ತಕ್ಕ ಫಲ ಸಿಗದಂತಾಗಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರೈತರ ಸಂಕಷ್ಟ ನಿವಾರಿಸಲು ಮುಂದಾಗಬೇಕು.

    | ಉಮೇಶ ಗಾಣಿಗೇರ, ಸಂತೋಷ ಕುರಿ, ರೈತರು

    ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ಮಂಜೂರು ಮಾಡುವಂತೆ ಕೋರಿ ರೈತರು ಸಲ್ಲಿಸಿದ ಮನವಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ.

    | ಚಂದ್ರಶೇಖರ ನರಸಮ್ಮನವರ ಕೃಷಿ ಅಧಿಕಾರಿ ಶಿರಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts